
ಮಡಿಕೇರಿ ಮೇ 9 NEWS DESK : ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿಗೆ ಶಾಸಕ ಡಾ. ಮಂತರ್ ಗೌಡ ಅವರು ಪ್ರಾಥಮಿಕ ಚಿಕಿತ್ಸೆ ನೀಡುವ ಮೂಲಕ ತಮ್ಮ ವೈದ್ಯ ಧರ್ಮ ಪಾಲಿಸಿದರು. ಹಾಸನ-ಕುಶಾಲನಗರ ಮುಖ್ಯ ರಸ್ತೆಯ ಕಣಿವೆ ಗ್ರಾಮದಲ್ಲಿ ಬೈಕ್ ಒಂದು ಸವಾರನ ನಿಯಂತ್ರಣ ಕಳೆದುಕೊಂಡು ರಸ್ತೆಗೆ ಬಿದ್ದಿತ್ತು. ಈ ವೇಳೆ ಬೈಕ್ ಸವಾರನ ಕೈ ಹಾಗೂ ಕಾಲುಗಳಿಗೆ ಗಾಯಗಳಾಗಿತ್ತು. ಕಣಿವೆ ರಾಂಪುರ ಗ್ರಾಮದಲ್ಲಿ ನೂತನ ಬಸ್ ಸ್ಟಾಪ್ ಕಾಮಗಾರಿ ನಡೆಯುತ್ತಿದ್ದ ಹಿನ್ನೆಲೆಯಲ್ಲಿ ಅತ್ತ ಕಡೆಗೆ ತೆರಳುತ್ತಿದ್ದ ಮಡಿಕೇರಿ ಕ್ಷೇತ್ರ ಶಾಸಕ ಡಾ.ಮಂತರ್ ಗೌಡ, ತಕ್ಷಣವೇ ತಮ್ಮ ವಾಹನ ನಿಲ್ಲಿಸಿ ವಾಹನದಲ್ಲಿದ್ದ ಫಸ್ಟ್ ಏಯ್ಡ್ ಕಿಟ್ ಬಳಸಿ ಗಾಯಗೊಂಡಿದ್ದ ಬೈಕ್ ಸವಾರನ ಗಾಯಗಳಿಗೆ ಬ್ಯಾಂಡೇಜ್ ಸುತ್ತಿ ಪ್ರಥಮ ಚಿಕಿತ್ಸೆ ಮೂಲಕ ಉಪಚರಿಸಿದರು. ಬಳಿಕ ಬೇರೊಂದು ವಾಹನದಲ್ಲಿ ಗಾಯಾಳುವನ್ನು ಸ್ಥಳೀಯ ಆಸ್ಪತ್ರೆಗೆ ರವಾನಿಸಿದರು. ಶಾಸಕ ಡಾಕ್ಟರ್ ಮಂತರ್ ಗೌಡ ಅವರ ಕಾಳಜಿಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದರು.









