
ಮಡಿಕೇರಿ ಮೇ 12 NEWS DESK : ಕೊಡವ ಭಾಷಿಕ ಸಮುದಾಯಗಳ ಕೂಟದಿಂದ ಇದೇ ಪ್ರಥಮ ಬಾರಿಗೆ ಕೊಡವ ಭಾಷಿಕ 21 ಸಮುದಾಯಗಳನ್ನು ಒಳಗೊಂಡ ಕ್ರೀಡಾಕೂಟ ಮೇ15 ರಿಂದ 17ರವರೆಗೆ ಮೂರ್ನಾಡು ಪಿಯು ಕಾಲೇಜಿನ ಬಾಚೆಟ್ಟೀರ ದಿ.ಬಾಲು ಮುದ್ದಯ್ಯ ಆಟದ ಮೈದಾನದಲ್ಲಿ ನಡೆಯಲಿದೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಕ್ರೀಡಾಕೂಟದ ವಿವರಗಳನ್ನು ನೀಡಿದ ಕೊಡವ ಭಾಷಿಕ ಸಮುದಾಯಗಳ ಕೂಟದ ಅಧ್ಯಕ್ಷರಾದ ಡಾ.ಮೇಚೀರ ಸುಭಾಷ್ ನಾಣಯ್ಯ, ಮೇ15 ರಂದು ಬೆಳಿಗ್ಗೆ 10 ಗಂಟೆಗೆ ತನ್ನ ಅಧ್ಯಕ್ಷತೆಯಲ್ಲಿ ಉದ್ಘಾಟನಾ ಸಮಾರಂಭ ನಡೆಯಲಿದೆ. ಕ್ರೀಡಾಕೂಟವನ್ನು 21 ಕೊಡವ ಭಾಷಿಕ ಜನಾಂಗದ ಸಮಾಜಗಳ ಅಧ್ಯಕ್ಷರು ಉದ್ಘಾಟಿಸಲಿದ್ದಾರೆಂದು ತಿಳಿಸಿದರು. :: 21 ತಂಡಗಳ ನಡುವೆ ಕ್ರಿಕೆಟ್ :: ಕ್ರೀಡಾಕೂಟದಲ್ಲಿ ಪ್ರಮುಖವಾಗಿ ಕೊಡವ ಭಾಷಿಕ ಸಮುದಾಯಗಳ ತಲಾ ಒಂದು ತಂಡದಂತೆ ಒಟ್ಟು 21 ತಂಡಗಳ ನಡುವೆ 6 ಓವರ್‍ಗಳಿಗೆ ಸೀಮಿತವಾದ ಕ್ರಿಕೆಟ್ ಪಂದ್ಯಾವಳಿ ನಡೆಯಲಿದೆ. ಆರಂಭಿಕ ದಿನದಂದು ಪ್ರದರ್ಶನ ಪಂದ್ಯದ ಬಳಿಕ ಪಂದ್ಯಾವಳಿ ಆರಂಭಗೊಳ್ಳಲಿದೆಯೆಂದು ಮಾಹಿತಿಯನ್ನಿತ್ತರು. ಮೇ 16 ರಂದು ಕ್ರಿಕೆಟ್‍ನೊಂದಿಗೆ ಹಗ್ಗಜಗ್ಗಾಟ ಸ್ಪರ್ಧೆಗಳನ್ನು ಆಯೋಜಿಸಲಾಗಿದೆಯೆಂದು ಹೇಳಿದರು. :: ಮೆರಥಾನ್ :: ಮೇ17 ರಂದು ಕೊಡವ ಭಾಷಿಕ ಜನಾಂಗದ 18 ವರ್ಷ ಮೇಲ್ಪಟ್ಟ ಪುರುಷರು ಮತ್ತು ಮಹಿಳೆಯರಿಗಾಗಿ 2 ಕಿ.ಮೀ.ನ ಮೆರಥಾನ್ ಓಟದ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಸ್ಪರ್ಧೆ ಅಂದು ಬೆಳಿಗ್ಗೆ 8 ಗಂಟೆಗೆ ಬಾಡಗದ ನೆಲ್ಲಿಮಾನಿ ಶ್ರೀ ಈಶ್ವರ ದೇವಸ್ಥಾನದ ಮುಂಭಾಗದಿಂದ ಮೂರ್ನಾಡು ಪಿ.ಯು.ಕಾಲೇಜು ಮೈದಾನದವರೆಗೆ ನಡೆಯಲಿದೆ. ಮೆರಥಾನ್ ಸ್ಪರ್ಧೆಯನ್ನು ವಿರಾಜಪೇಟೆ ಕ್ಷೇತ್ರದ ಶಾಸಕರಾದ ಅಜ್ಜಿಕುಟ್ಟೀರ ಎಸ್.ಪೊನ್ನಣ್ಣ, ಕರ್ನಾಟಕ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷರಾದ ಚೆಪ್ಪುಡಿರ ಅರುಣ್ ಮಾಚಯ್ಯ ಉದ್ಘಾಟಿಸಲಿದ್ದಾರೆಂದು ತಿಳಿಸಿದರು. :: ಸಮಾರೋಪ :: 21 ಮಂದಿಗೆ ಸನ್ಮಾನ :: ಮೆರಥಾನ್ ಓಟದ ಬಳಿಕ ಕ್ರಿಕೆಟ್ ಮತ್ತು ಹಗ್ಗಜಗ್ಗಾಟ ಸ್ಪರ್ಧೆಯ ಅಂತಿಮ ಪಂದ್ಯಗಳು ನಡೆಯಲಿದೆ. ನಂತರ ತನ್ನ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ನಡೆಯಲಿದ್ದು, ಇದರಲ್ಲಿ ಶಾಸಕರುಗಳಾದ ಎ.ಎಸ್.ಪೊನ್ನಣ್ಣ, ಡಾ.ಮಂತರ್ ಗೌಡ, ಕರ್ನಾಟಕ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಸಿ.ಎಸ್.ಅರುಣ್ ಮಾಚಯ್ಯ, ಸಂಸದ ಯದುವೀರ್ ಒಡೆಯರ್, ಎಂಎಲ್‍ಸಿ ಸುಜಾ ಕುಶಾಲಪ್ಪ, ಕಾಫಿ ಬೆಳೆಗಾರರಾದ ಕೂಡಂಡ ರಾಜೇಂದ್ರ ಅಯ್ಯಮ್ಮ ಪಾಲ್ಗೊಳ್ಳಲಿದ್ದಾರೆಂದರು. ಸಮಾರಂಭದಲ್ಲಿ ಕೊಡವ ಭಾಷಿಕ ಸಮಾಜಗಳಿಂದ ತಲಾ ಒಬ್ಬರಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 21 ಮಂದಿಯನ್ನು ಸನ್ಮಾನಿಸಿ ಗೌರವಿಸಲಾಗುತ್ತದೆಂದು ಮಾಹಿತಿಯನ್ನಿತ್ತರು. ಗೋಷ್ಠಿಯಲ್ಲಿ ಕೂಟದ ಗೌರವ ಕಾರ್ಯದರ್ಶಿ ಕೂಡಂಡ ಸಾಬ ಸುಬ್ರಮಣಿ, ಉಪಾಧ್ಯಕ್ಷರುಗಳಾದ ಪೊನ್ನೀರ ಗಗನ್, ಕುಡಿಯರ ಬೋಪಯ್ಯ, ಸಹ ಕಾರ್ಯದರ್ಶಿ ಬಾಳೆಕುಟ್ಟಡ ಉದಯ್ ಮಾದಪ್ಪ ಉಪಸ್ಥಿತರಿದ್ದರು.









