
ಮಡಿಕೇರಿ ಮೇ 13 NEWS DESK : ಮಂಗಳೂರಿನ ಎಂಪೀರಿಯಾ ಎಂಟರ್‍ಟೈನ್‍ಮೆಂಟ್ ವತಿಯಿಂದ ನಿರ್ಮಾಣವಾಗಲಿರುವ “ಕೋವಿ ಮತ್ತು ಕೊಳಲು” ಸಿನಿಮಾದ ಮುಹೂರ್ತ ಇದೇ ಮೇ 15 ರಂದು ನಗರದ ರಾಜಾಸೀಟಿನಲ್ಲಿ ನಡೆಯಲಿದೆಯೆಂದು ಚಿತ್ರ ನಿರ್ದೇಶಕ ಬಾಸುಮ ಕೊಡಗು ತಿಳಿಸಿದ್ದಾರೆ. ನಗರದಲ್ಲಿ ಸುದ್ದಿ ಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಗುರುರಾಜ ಮಾರ್ಪಳ್ಳಿಯವರ “ಗರ್ಭ” ಕಾದಂಬರಿ ಆಧಾರಿತ ಕೋವಿ ಮತ್ತು ಕೊಳಲು ಸಿನೆಮಾವು ಕಲಾತ್ಮಕ ಹಾಗೂ ವಾಣಿಜ್ಯಕ ಚಲನಚಿತ್ರವಾಗಿದೆ. ಇದರ ಚಿತ್ರೀಕರಣ ಮಡಿಕೇರಿ, ಸಂಪಾಜೆ ಮತ್ತು ಸುಳ್ಯ ವಿಭಾಗಗಳಲ್ಲಿ ನಡೆಯಲಿದೆಯೆಂದು ಮಾಹಿತಿಯನ್ನಿತ್ತರು. ಕಲೆ ಮತ್ತು ಹಣದ ನಡುವಿನ ಸಂಘರ್ಷಗಳ ಕುರಿತ ಕಥೆಯನ್ನು ಇಲ್ಲಿ ಚಲನಚಿತ್ರವಾಗಿ ನಿರ್ಮಿಸಲಾಗುತ್ತಿದೆ. ಚಿತ್ರಕಥೆ ಮತ್ತು ಸಂಭಾಷಣೆಯನ್ನು ಶೌರ್ಯತೇಜ ಅವರು ಬರೆದಿದ್ದಾರೆ. ಛಾಯಾಗ್ರಾಹಕರಾಗಿ ದೃಶಾ ಕೊಡಗು, ಕಲಾ ನಿರ್ದೇಶನವನ್ನು ಲೋಕೇಶ್ ಊರುಬೈಲು ನಿರ್ವಹಿಸಲಿದ್ದಾರೆ. ಚಿತ್ರವನ್ನು ಪ್ರಸಕ್ತ ಸಾಲಿನ ಸೆಪ್ಟಂಬರ್‍ನಲ್ಲಿ ತೆರೆಗೆ ತರಲು ಉದ್ದೇಶಿಸಲಾಗಿದೆಯೆಂದು ತಿಳಿಸಿದರು. ಚಿತ್ರದಲ್ಲಿ ಅಕ್ಷತಾ ಪಾಂಡವಪುರ, ನವೀನ್ ಡಿ.ಪಡೀಲ್, ಮೋಹನ್ ಶೇಣಿ, ಮುರಳಿ ಶೃಂಗೇರಿ, ಆನಂದ ತುಮಕೂರು, ಶೈಲಶ್ರೀ, ಡಿಂಗ್ರಿ ನರೇಶ್, ಪಲ್ಲವಿ ಕೊಡಗು, ನಾಯಕಿಯಾಗಿ ಮಾನ್ಯ ಕುಮಾರ್ ಅಭಿನಯಿಸಲಿದ್ದಾರೆಂದು ಮಾಹಿತಿ ನೀಡಿದರು. :: ಮುಹೂರ್ತ :: ಚಲನಚಿತ್ರದ ಮುಹೂರ್ತ ಮಾ.15 ರಂದು ಬೆಳಿಗ್ಗೆ 9.15 ಗಂಟೆಗೆ ರಾಜಾಸೀಟಿನಲ್ಲಿ ನಡೆಯಲಿದ್ದು, ಸಮಾರಂಭದಲ್ಲಿ ಎಂಫೀರಿಯಲ್ ಎಂಟರ್‍ಟೈನ್‍ಮೆಮಟ್‍ನ ಸಿಇಓ ಹೇಮಂತ್ ಕುಲಾಲ್, ಪಿಎಸ್ ಫಿಲಂಸ್ ನಿರ್ದೇಶಕರಾದ ಕುಮಾರ್ ಬಿ.ಟಿ., ಪ್ರೊಡಕ್ಷನ್ ಮ್ಯಾನೇಜರ್ ಜಯ ಕುಮಾರ್, ವಿಶೇಷ ಆಹ್ವಾನಿತರಾಗಿ ತೋಟಗಾರಿಕಾ ಇಲಾಖಾ ಹಿರಿಯ ನಿರ್ದೇಶಕರಾದ ಫಣೀಂದ್ರ, ಪುರಾತತ್ವ ಇಲಾಖೆಯ ರೇಖಾ, ಹಿರಿಯ ಚಲನ ಚಿತ್ರ ನಟ ಸಾಧು ಕೋಕಿಲ ಮೊದಲಾದವರು ಪಾಲ್ಗೊಳ್ಳಲಿದ್ದಾರೆಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಚಲನ ಚಿತ್ರದ ಕಲಾ ನಿರ್ದೇಶಕ ಲೋಕೇಶ್ ಊರುಬೈಲು, ಚಿತ್ರಕಥೆ ಮತ್ತು ಸಭಾಷಣೆಕಾರರಾದ ಶೌರ್ಯತೇಜ, ಛಾಯಾಗ್ರಾಹಕ ದೃಶಾ ಕೊಡಗು, ಪಿ.ಎಸ್.ಫಿಲಂಸ್ ನಿರ್ದೇಶಕರಾದ ಬಿ.ಡಿ.ಕುಮಾರ್ ಉಪಸ್ಥಿತರಿದ್ದರು.









