
ಮಡಿಕೇರಿ ಮೇ 18 NEWS DESK : “ಆಶಾ ಕಾರ್ಯಕರ್ತೆ”ಯರಿಗೆ ಪಾವತಿಸಲು ಬಾಕಿ ಇರುವ ಗೌರವ ಧನ ಮತ್ತು ಪ್ರೋತ್ಸಾಹ ಧನವನ್ನು ತಕ್ಷಣವೇ ಬಿಡುಗಡೆ ಮಾಡಬೇಕೆನ್ನುವುದು ಸೇರಿದಂತೆ ಪ್ರಮುಖ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಕೊಡಗು ಜಿಲ್ಲಾ ಸಮಿತಿ ವತಿಯಿಂದ ನಗರದ ಜಿಲ್ಲಾಡಳಿತ ಭವನದ ಮುಂಭಾಗ ಪ್ರತಿಭಟನೆ ನಡೆಯಿತು. ಆಶಾ ಕಾರ್ಯಕರ್ತೆಯರ ಸಂಘದ ಜಿಲ್ಲಾಧ್ಯಕ್ಷರು ಹಾಗೂ ರಾಜ್ಯ ಉಪಾಧ್ಯಕ್ಷರಾದ ತೆಕ್ಕಡೆ ಫೂರ್ಣಿಮಾ, ರಾಜ್ಯ ನಿರ್ದೇಶಕರು ಹಾಗೂ ಜಿಲ್ಲಾ ಸಂಚಾಲಕರಾದ ಉಮಾದೇವಿ ಅವರುಗಳ ನೇತೃತ್ವದಲ್ಲಿ ಸೋಮವಾರ ಬೆಳಿಗ್ಗೆ ಜಿಲ್ಲಾ ವ್ಯಾಪ್ತಿಯಿಂದ ಆಗಮಿಸಿದ್ದ ನೂರಾರು ಆಶಾ ಕಾರ್ಯಕರ್ತೆಯರು ಜಿಲ್ಲಾಡಳಿತ ಭವನದ ಮುಂಭಾಗ ಘೋಷಣೆಗಳ ಸಹಿತಿ ಪ್ರತಿಭಟನೆ ನಡೆಸಿದರು. ಜಿಲ್ಲಾ ಸಂಘದ ಅಧ್ಯಕ್ಷರಾದ ತೆಕ್ಕಡೆ ಪೂರ್ಣಿಮಾ ಅವರು ಮಾತನಾಡಿ, ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ಸುಮಾರು 430 ಆಶಾಕಾರ್ಯಕರ್ತೆಯರು ಕಾರ್ಯನಿರ್ವಹಿಸುತ್ತಿದ್ದಾರೆ. ಇವರಿಗೆ ಕಳೆದ ಮಾರ್ಚ್ ಮತ್ತು ಏಪ್ರಿಲ್ ತಿಂಗಳಿಗೆ ಸಂಬಂಧಿಸಿದ ಗೌರವ ಧನ ಇಲ್ಲಿಯವರೆಗೂ ಬಿಡುಗಡೆ ಮಾಡಿಲ್ಲ ಮತ್ತು ವಿವಿಧ ತರಬೇತಿಗಳಿಗೆ ಸಂಬಂಧಿಸಿದಂತೆ ಆಶಾ ಕಾರ್ಯಕರ್ತೆಯರಿಗೆ ನೀಡಬೇಕಾದ ಪ್ರೋತ್ಸಾಹಧನವನ್ನು ನೀಡಿಲ್ಲ. ಇದರಿಂದ ಆಶಾ ಕಾರ್ಯಕರ್ತೆಯರಾಗಿ ಕಾರ್ಯನಿರ್ವಹಿಸುತ್ತಿರುವವರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆಂದು ಕಳವಳ ವ್ಯಕ್ತಪಡಿಸಿದರು. ಕಳೆದ ಒಂದು ವರ್ಷದಿಂದ ಆಶಾ ಕಾರ್ಯಕರ್ತೆಯರಿಗೆ ಮಾಸಿಕ ಗೌರವ ಧನ, ಪ್ರೋತ್ಸಾಹಧನ ನಿಯಮಮಿತವಾಗಿ ಪ್ರತಿ ತಿಂಗಳು ದೊರಕುತ್ತಿಲ್ಲ. ಪ್ರಸ್ತುತ ಕಳೆದ ಮೂರರಿಂದ ನಾಲ್ಕು ತಿಂಗಳ ಕೇಂದ್ರದ ಪ್ರೋತ್ಸಾಹಧನ ಪಾವತಿಗೆ ಬಾಕಿ ಇರುವುದಾಗಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಅವರು, ತಾಲ್ಲೂಕು ಹಂತದ ಸಮಸ್ಯೆಗಳನ್ನು ಬಗೆಹರಿಸುವಂತೆ ಸಮಬಂಧಪಟ್ಟವರನ್ನು ಕೋರಲಾಗಿತ್ತು. ಆ ಹಂತದಲ್ಲಿ ಸಮಸ್ಯೆ ರಾಜ್ಯಮಟ್ಟದೆಂದು ತಿಳಿಸಲಾಯಿತೇ ಹೊರತು ಬಗೆಹರಿಸಿಲ್ಲವೆಂದು ಬೇಸರ ವ್ಯಕ್ತಪಡಿಸಿದರು. ತಾಯಿ-ಮಗು ಸುರಕ್ಷತೆ, ಬಡ ಜನತೆಯ ಆರೋಗ್ಯಕ್ಕೆ ಪೂರಕವಾದ ಸೇವೆಗಳನ್ನು ಆಶಾ ಕಾರ್ಯಕರ್ತೆಯರು ನೀಡುತ್ತಾ ಬರುತ್ತಿದ್ದಾರೆ. ಇದೀಗ ಆಶಾ ನಿಧಿ ತಂತ್ರಾಂಶÀದಿಂದ ಇಂತಹ 9 ಸೇವೆಗಳನ್ನು ನಿಷ್ಕ್ರೀಯಗೊಳಿಸಲಾಗಿದೆ. ಇದರಿಂದ ಪ್ರತಿ ಆಶಾ ಕಾರ್ಯಕರ್ತೆಯರಿಗೆ 500ರೂ.ಗಳಿಂದ 1 ಸಾವಿರ ರೂ.ಗಳವರೆಗೆ ಪ್ರೋತ್ಸಾಹಧನ ಕಡಿತವಾಗಲಿದೆ. ಪ್ರಸ್ತುತ ಪ್ರತಿ ಆಶಾ ಕಾರ್ಯಕರ್ತೆಯರು ಮಾಸಿಕ 5 ಸಾವಿರ ಗೌರವ ಧನ ಮತ್ತು ವಿವಿಧ ಸೇವೆಗಳಿಗೆ ಸಂಬಂಧಿಸಿದಂತೆ ಸುಮಾರು 2 ಸಾವಿರ ರೂ. ಪ್ರೋತ್ಸಾಹ ಧನ ಸೇರಿದಂತೆ ಒಟ್ಟು 7 ಸಾವಿರ ರೂ. ವೇತನವನ್ನಷ್ಟೆ ಪಡೆಯುತ್ತಿದ್ದಾರೆ. ಈ ವೇತನದಲ್ಲಿ ಇದೀಗ ಕಡಿತ ಮಾಡಲಾಗುತ್ತಿದೆಯೆಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಬಿಸಿಯೂಟ ಕಾರ್ಮಿಕರು ಮತ್ತಷ್ಟು ಸಂಕಷ್ಟದಲ್ಲಿ- ಜಿಲ್ಲಾ ಸಂಚಾಲಕರಾದ ಉಮಾದೇವೆ ಅವರು ಮಾತನಾಡಿ, ಕಳೆದ ಸುಮಾರು ಐವತ್ತು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಅಂಗನವಾಡಿ ನೌಕರರು ಪ್ರಸ್ತುತ ಸುಮಾರು 12 ಸಾವಿರ ವೇತನ ಪಡೆಯುತ್ತಿದ್ದಾರಾದರೆ, ಸುಮಾರು 18 ವರ್ಷಗಳಿಂದ ಸರ್ಕಾರದ ಸೇವೆಗಳನ್ನು ಜನರಿಗೆ ಒದಗಿಸುವ ಕಾರ್ಯದಲ್ಲಿ ನಿರತ ಆಶಾಕಾರ್ಯಕರ್ತೆಯರು 7 ಸಾವಿರ ರೂ.ಗಳನ್ನು ಮಾಸಿಕವಾಗಿ ಪಡೆಯುತ್ತಿದ್ದಾರೆ. ನಮ್ಮಗಳಿಗೆ ಹೋಲಿಸಿದರೆ ಬಿಸಿಯೂಟ ಕಾರ್ಮಿಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಪ್ರಸ್ತುತ ಸರ್ಕಾರ ಕೆಪಿಎಸ್ ಮ್ಯಾಗ್ನೆಟ್ ಶಾಲೆಗಳನ್ನು ಆರಂಭಿಸುವುದರೊಂದಿಗೆ ಗ್ರಾಮೀಣ ಭಾಗಗಳ ಸಾಕಷ್ಟು ಸರ್ಕಾರಿ ಶಾಲೆಗಳು ಮುಚ್ಚಲ್ಪಡುತ್ತವೆ. ಈ ಹಂತದಲ್ಲಿ ಬಿಸಿಯೂಟ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕುತ್ತಾರೆ. ಇಂತಹ ಯಾವುದೇ ಸಮಸ್ಯೆಗಳಿಗೆ ಅಗತ್ಯ ಪರಿಹಾರ ಒದಗಿಸಬೇಕಾದ ಸರ್ಕಾರ ಜವಾಬ್ದಾರಿಗಳಿಂದ ನುಣುಚಿಕೊಳ್ಳುತ್ತಿರುವುದಾಗಿ ತೀಕ್ಷ್ಣವಾಗಿ ನುಡಿದರು. ಬೇಡಿಕೆಗಳೇನು :: ಆಶಾಕಾರ್ಯಕರ್ತೆಯರ ಸಂಘ ಇಂದಿನ ಪ್ರತಿಭಟನೆಯ ಮೂಲಕ ಪ್ರಮುಖವಾಗಿ ಆಶಾ ಕಾರ್ಯಕರ್ತೆಯರಿಗೆ ಶೀಘ್ರ ಗೌರವ ಧನ, ಪ್ರೋತ್ಸಾಹ ಧನ ನೀಡಬೇಕೆಂದು, ಆಶಾ ತಂತ್ರಾಂಶದಿಂದ ನಿಷ್ಕ್ರೀಯಗೊಳಿಸಿರುವ ಸೇವೆಗಳನ್ನು ಪುನರಾರಂಭಿಸಬೇಕು, ಬಾಕಿ ಇರುವ ಪ್ರೋತ್ಸಾಹ ಧನ ಬಿಡುಗಡೆ ಮಾಡಬೇಕು, ಸಮಸ್ತ ಆ್ಯಪ್ ಮೂಲಕ ದಾಖಲಾತಿ ಮಾಡಿಸುವುದನ್ನು ಕೈಬಿಡಬೇಕು, ಮೌಲ್ಯಮಾಪನದ ಹೆಸರಿನಲ್ಲಿ ಆಶಾ ಕಾರ್ಯಕರ್ತರಿಗೆ ಆಗುತ್ತಿರುವ ಶೋಷಣೆ ತಪ್ಪಿಸಬೇಕು, ನಿವೃತ್ತ ಆಶಾ ಕಾರ್ಯಕರ್ತರಿಗೆ ಇಡುಗಂಟು ನೀಡಬೇಕು, ಸಮಸ್ಯೆಗಳ ಬಗೆಹರಿಕೆಗೆ ಸಂಘದ ಪದಾಧಿಕಾರಿಗಳೊಂದಿಗೆ ಸಭೆ ಕರೆಯಬೇಕು, ಕಳೆದ 2025 ರಲ್ಲಿ ಮುಖ್ಯ ಮಂತ್ರಿಗಳು ಘೋಷಿಸಿದಂತೆ ಕೇಂದ್ರದ ಪೋತ್ಸಾಹ ಧನ ಮತ್ತು ರಾಜ್ಯದ ಗೌರವ ಧನ ಸೇರಿದಂತೆ ಮಾಸಿಕ 10 ಸಾವಿರ ಗೌರವ ಧನ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ. ಪ್ರತಿಭಟನೆಯ ಬಳಿಕ ಆಶಾ ಕಾರ್ಯಕರ್ತೆಯರ ಸಂಘದಿಂದ ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಸಂಘದ ಜಿಲ್ಲಾ ಕಾರ್ಯದರ್ಶಿ ನಾಗಮಣಿ ಸೋಮವಾರಪೇಟೆ, ವಿರಾಜಪೇಟೆ ತಾಲ್ಲೂಕಿನ ಪ್ರಮಿತ, ಕುಶಾಲನಗರದ ಮಾಲಾಶ್ರೀ ಸೇರಿದಂತೆ ಸಂಘದ ನೂರಾರು ಸದಸ್ಯರು ಪಾಲ್ಗೊಂಡಿದ್ದರು.









