
ಮಡಿಕೇರಿ ಮೇ 18 NEWS DESK : ದುಬಾರೆ ಮತ್ತು ಬರಪೊಳೆಯಲ್ಲಿ ರಿವರ್ ರ‍್ಯಾಪ್ಟಿಂಗ್ ನಡೆಸುವವರು ಕಡ್ಡಾಯವಾಗಿ ಜನರಲ್ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿಯಿಂದ(ಜೇತ್ನ) ರ‍್ಯಾಪ್ಟ್ ಫಿಟ್ಟ್‌ನೆಸ್ ಪ್ರಮಾಣ ಪತ್ರ ಪಡೆಯುವುದರ ಜೊತೆಗೆ ಪ್ರವಾಸೋದ್ಯಮ ಇಲಾಖೆಯಿಂದ ಪರವಾನಗಿ ನವೀಕರಣ ಪತ್ರ ಪಡೆದು ರಿವರ್ ರ‍್ಯಾಪ್ಟಿಂಗ್ (ಜಲಸಾಹಸ ಕ್ರೀಡೆ) ನಡೆಸುವಂತೆ ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಸಹನಾ ಎಸ್.ಹಾದಿಮನಿ ಅವರು ಸ್ಪಷ್ಟ ನಿರ್ದೇಶನ ನೀಡಿದ್ದಾರೆ. ನಗರದ ಜಿಲ್ಲಾಧಿಕಾರಿ ಅವರ ಕಚೇರಿ ಸಭಾಂಗಣದಲ್ಲಿ ನಡೆದ ರಿವರ್ ರ‍್ಯಾಪ್ಟಿಂಗ್ ನಿರ್ವಹಣೆ ಮತ್ತು ಮೇಲ್ವಿಚಾರಣಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ರಿವರ್ ರ‍್ಯಾಪ್ಟಿಂಗ್ ನಡೆಸುವವರು ಯಾವುದೇ ಕಾರಣಕ್ಕೂ ಅನುಮತಿ ಇಲ್ಲದೆ ಹಾಗೂ ನವೀಕರಣ ಪತ್ರ ಪಡೆಯದೆ ರಿವರ್ ರ‍್ಯಾಪ್ಟಿಂಗ್ ನಡೆಸಬಾರದು ಎಂದು ಎಚ್ಚರಿಸಿದರು. ಹಾಗೆಯೇ ರಿವರ್ ರ‍್ಯಾಪ್ಟಿಂಗ್ ನಡೆಸಲು ಬಳಸುವ ಪ್ರತಿ ರ‍್ಯಾಪ್ಟ್‌ಗೆ ನಿರ್ವಹಣಾ ಶುಲ್ಕವನ್ನು ಪ್ರತೀ ತಿಂಗಳು ಪಾವತಿಸುವಂತೆ ಸಹನಾ ಎಸ್.ಹಾದಿಮನಿ ಅವರು ಸೂಚಿಸಿದರು. ಪ್ರವಾಸಿಗರ ಸುರಕ್ಷತೆ ದೃಷ್ಟಿಯಿಂದ ರ‍್ಯಾಪ್ಟ್ ಗೈಡ್‌ಗಳ ಅಗತ್ಯ ತರಬೇತಿಯನ್ನು ಜನರಲ್ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಆಯುಕ್ತಾಲಯ ಹಾಗೂ ಜನರಲ್ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿ ನಿರ್ದೇಶಕರ ಕಚೇರಿ ಇವರಿಂದ ಗೈಡ್ ಪ್ರಮಾಣಪತ್ರ ಪಡೆದಿರಬೇಕು ಎಂದರು. ರಿವರ್ ರ‍್ಯಾಪ್ಟಿಂಗ್ ನಡೆಯುವ ಸ್ಥಳದಲ್ಲಿ ಅಗತ್ಯ ಮೂಲ ಸೌಲಭ್ಯ ಕಲ್ಪಿಸಬೇಕು. ಕುಡಿಯುವ ನೀರು, ಶೌಚಾಲಯ, ವಾಹನ ನಿಲುಗಡೆ ಮತ್ತಿತರವನ್ನು ಗಮನಿಸಬೇಕು. ಯಾವುದೇ ಕಾರಣಕ್ಕೂ ಪ್ರವಾಸಿಗರ ಜೊತೆ ಕಿರಿಕಿರಿ ಮಾಡಿಕೊಳ್ಳಬಾರದು. ಪ್ರತಿಯೊಬ್ಬ ಸಾರ್ವಜನಿಕರ/ ಪ್ರವಾಸಿಗರ ಸುರಕ್ಷತೆ ಮತ್ತು ಸೌಜನ್ಯದ ವರ್ತನೆ ಅತೀ ಮುಖ್ಯ ಎಂದು ಸಹನಾ ಎಸ್.ಹಾದಿಮನಿ ಅವರು ಒತ್ತಿ ಹೇಳಿದರು. ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆಯಡಿಯಲ್ಲಿ ಪರಿಶಿಷ್ಟ ಪಂಗಡದ ಜೇನು ಕುರುಬ ಜನಾಂಗದ ಯುವಕರಿಗೆ ರ‍್ಯಾಪ್ಟಿಂಗ್ ಸಲಕರಣೆಗಳನ್ನು ವಿತರಿಸುವ ಸಂಬಂಧ ಅಗತ್ಯ ಕ್ರಮ ಕೈಗೊಳ್ಳಬೇಕು. ಈ ಸಂಬಂಧ ಐಟಿಡಿಪಿ ಇಲಾಖೆ ಜೊತೆ ಚರ್ಚಿಸಿ ನಿಯಮಾನುಸಾರ ಕ್ರಮ ಕೈಗೊಳ್ಳುವಂತೆ ಹೆಚ್ಚುವರಿ ಜಿಲ್ಲಾಧಿಕಾರಿ ಅವರು ಸಲಹೆ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕರಾದ ಶಶಿಧರ ಅವರು ದುಬಾರೆಯಲ್ಲಿ 55 ರ‍್ಯಾಫ್ಟ್ ಮಾಲೀಕರಿದ್ದು, ರಿವರ್ ರ‍್ಯಾಪ್ಟಿಂಗ್ ನಡೆಸಲು ೮೪ ರ‍್ಯಾಪ್ಟ್‌ಗಳಿದೆ. ಬರಪೊಳೆಯಲ್ಲಿ ೪ ರ‍್ಯಾಪ್ಟಿಂಗ್ ಮಾಲೀಕರಿದ್ದು, 6 ರ‍್ಯಾಫ್ಟ್ ಸೇರಿ 24 ರ‍್ಯಾಫ್ಟ್‌ಗಳು ಇದ್ದು, ದುಬಾರೆ ಕಾವೇರಿ ನದಿಯಲ್ಲಿ ರಿವರ್ ರ‍್ಯಾಪ್ಟ್ ನಡೆಸಲು 46 ರ‍್ಯಾಪ್ಟ್ ಮಾಲಿಕರಿಗೆ ಹಾಗೂ ಬರಪೊಳೆ ನದಿಯಲ್ಲಿ ರಿವರ್ ರ‍್ಯಾಪ್ಟ್ ನಡೆಸಲು ೪ ಮಾಲೀಕರಿಗೆ ಕಳೆದ ವರ್ಷ ಪರವಾನಗಿ ನೀಡಲಾಗಿದ್ದು, ಈ ಪರವಾನಗಿ ಯನ್ನು ಪ್ರಸ್ತುತ ಸಾಲಿಗೆ ನವೀಕರಿಸಲು ಜೇತ್ನದಿಂದ ರ‍್ಯಾಪ್ಟ್ ಫಿಟ್‌ನೆಸ್ ಪರಿಶೀಲಿಸಿ ಫಿಟ್‌ನೆಸ್ ವರದಿ ಸಮಿತಿಗೆ ಸಲ್ಲಿಸಿದ್ದಾರೆ ಎಂದು ಅವರು ವಿವರಿಸಿದರು. ಫಿಟ್‌ನೆಸ್ ವರದಿಯಲ್ಲಿ ದುಬಾರೆಯ ೪೬ ರ‍್ಯಾಪ್ಟ್ ಮಾಲೀಕರ ಪೈಕಿ ೪೪ ಹಾಗೂ ಬರಪೊಳೆಯ ೪ ರ‍್ಯಾಪ್ಟ್ ಮಾಲೀಕರು ತಮ್ಮ ರ‍್ಯಾಪ್ಟ್ ಪರಿಶೀಲನೆಗೆ ಒಳಪಡಿಸಿದ್ದಾರೆ ಎಂದು ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕರು ಹೇಳಿದರು. ಹಾಗೆಯೇ ಸೋಮವಾರಪೇಟೆ ತಾಲ್ಲೂಕಿನ ಕುಮಾರಳ್ಳಿ(ಬೀದಳ್ಳಿ) ಕುಮಾರಧಾರ ನದಿಯಲ್ಲಿ ಸ್ಟೀಲ್ ವಾಟರ್ ರ‍್ಯಾಪ್ಟಿಂಗ್ ಮತ್ತು ಕಾಯಕಿಂಗ್ ನಡೆಸಲು ಇಬ್ಬರು ಮುಂದೆ ಬಂದಿದ್ದು, ತಲಾ ೪ ರ‍್ಯಾಪ್ಟರ್ ಮತ್ತು ಕಾಯಕಿಂಗ್ ನಡೆಸಲು ಅನುಮತಿಗಾಗಿ ಅರ್ಜಿ ಸಲ್ಲಿಸಿದ್ದಾರೆ. ಆದರೆ ಈ ಸ್ಥಳದಲ್ಲಿ ಮೂಲ ಸೌಕರ್ಯಗಳಿಲ್ಲದೆ ಅನುಮತಿ ನೀಡಿಲ್ಲ ಎಂದು ಶಶಿಧರ ಅವರು ಮಾಹಿತಿ ನೀಡಿದರು. ಕರ್ನಾಟಕ ಪ್ರವಾಸೋದ್ಯಮ ನೀತಿ 2024-29 ರಡಿ ಸಾಹಸ ಜಲಕ್ರೀಡೆಯಲ್ಲಿ ಒಂದಾದ ಕಾಯಕಿಂಗ್ ಜಲಕ್ರೀಡೆ ನಡೆಸಲು ಅವಕಾಶವಿದ್ದು, ಕೊಡಗು ಜಿಲ್ಲೆಯಲ್ಲಿ ವಿವಿಧ ಕಡೆಗಳಲ್ಲಿ ಕಾಯಕಿಂಗ್ ನಡೆಸಲು 16 ಅರ್ಜಿಗಳು ಸಲ್ಲಿಕೆಯಾಗಿವೆ ಎಂದು ಹೇಳಿದರು. ರ‍್ಯಾಪ್ಟಿಂಗ್ ಸಂದರ್ಭದಲ್ಲಿ ಸುರಕ್ಷತೆಗೆ ಒತ್ತು ನೀಡಬೇಕಿದೆ ಎಂದರು. ಸೋಮವಾರಪೇಟೆ ತಾಲ್ಲೂಕು ಹೊನ್ನಮ್ಮನ ಕೆರೆಯಲ್ಲಿ ಪ್ರವಾಸೋದ್ಯಮ ಇಲಾಖೆಯಿಂದ ಜಲಸಾಹಸ ಕ್ರೀಡೆಗಳಾದ ಬ್ಯಾಟರಿ ಚಾಲಿತ ಬೋಟಿಂಗ್, ಕಯಾಕಿಂಗ್, ಕನೋಯಿಂಗ್‌ಗಳನ್ನು ನಡೆಸಲು ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರದಿಂದ ೨ ವರ್ಷಗಳ ಅವಧಿಗೆ ಟೆಂಡರ್ ಕರೆಯಲು ಅನುಮತಿ ನೀಡಿದ್ದು, ಈಗಾಗಲೇ ಸಂಬಂಧಪಟ್ಟ ತಹಶೀಲ್ದಾರರು, ಕಾರ್ಯ ನಿರ್ವಹಣಾಧಿಕಾರಿಗಳು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಹಾಗೂ ದೇವಸ್ಥಾನದ ಆಡಳಿತ ಮಂಡಳಿಯವರಿಗೆ ಈ ಪ್ರದೇಶದಲ್ಲಿ ಜಲ ಸಾಹಸ ಕ್ರೀಡೆಗಳನ್ನು ನಡೆಸುವ ಬಗ್ಗೆ ಅಭಿಪ್ರಾಯ ನೀಡುವಂತೆ ಕೋರಲಾಗಿದೆ ಎಂದರು. ಹೊನ್ನಮ್ಮನ ಕೆರೆ ಪ್ರವಾಸಿ ತಾಣದಲ್ಲಿ ಪ್ರವಾಸೋದ್ಯಮ ಇಲಾಖೆಗೆ ಸೇರಿದ ೪ ಸೆಂಟ್ಸ್ ಜಾಗವಿದ್ದು, ಈ ಜಾಗದಲ್ಲಿ ಮೂಲಭೂತ ಸೌಕರ್ಯ ಕಲ್ಪಿಸುವುದು, ದುಬಾರೆ ಪ್ರವಾಸಿ ತಾಣದಲ್ಲಿ ರ‍್ಯಾಫ್ಟ್ ನಿಲುಗಡೆಗೆ ಸ್ಥಳದ ಕೊರತೆ ಇದ್ದು, ಹೆಚ್ಚುವರಿ ಹೊಸ ರ‍್ಯಾಫ್ಟ್‌ಗಳಿಗೆ ಅವಕಾಶ ನೀಡದಂತೆ ಕೋರಿ ದುಬಾರೆ ಅಸೋಸಿಯೇಷನ್‌ನವರು ಮನವಿ ಸಲ್ಲಿಸಿರುವ ಬಗ್ಗೆ ಸಭೆಯ ಗಮನಕ್ಕೆ ತಂದರು. ದುಬಾರೆ ಕಾವೇರಿ ನದಿಯಲ್ಲಿ ಹೊಸದಾಗಿ ರಿವರ್ ರ‍್ಯಾಫ್ಟಿಂಗ್ ನಡೆಸಲು 09 ಮನವಿ, ಹಾಗೆಯೇ ದುಬಾರೆ ಪ್ರವಾಸಿ ತಾಣದಲ್ಲಿ ಕಾಯಕಿಂಗ್, ವಾಟರ್ ಚೋರ್ಬಿಂಗ್ ಬಾಲ್ ನಡೆಸಲು 04 ಮನವಿಗಳು ಬಂದಿರುವ ಬಗ್ಗೆ ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕರು ವಿವರಿಸಿದರು. ದುಬಾರೆಯ ರಿವರ್ ರ‍್ಯಾಫ್ಟಿಂಗ್ ಕಾರ್ಯದರ್ಶಿ ವಸಂತ ಅವರು ಮಾತನಾಡಿ ಮೇ ಅಂತ್ಯದೊಳಗೆ ಫಿಟ್‌ನೆಸ್ ಪ್ರಮಾಣ ಪತ್ರ ಮತ್ತು ಗೈಡ್ ಪರವಾನಗಿ ಲಭ್ಯವಾಗಬೇಕು ಎಂದು ಕೋರಿದರು. ಬರಪೊಳೆಯ ರಿವರ್ ರ‍್ಯಾಫ್ಟಿಂಗ್‌ನ ರತನ್, ನಿತಿನ್, ಪವನ್, ಪ್ರದೀಪ್ ಅವರು ಬರಪೊಳೆಯಲ್ಲಿ ರಿವರ್ ರ‍್ಯಾಫ್ಟಿಂಗ್ ಸಂಬಂಧ ಹಲವು ಮಾಹಿತಿ ನೀಡಿದರು. ತಹಶೀಲ್ದಾರರಾದ ಪ್ರವೀಣ್ ಕುಮಾರ್ ಅವರು ಬರಪೊಳೆ, ದುಬಾರೆ ಮತ್ತಿತರ ಎಲ್ಲಾ ಪ್ರವಾಸಿ ಕೇಂದ್ರಗಳಲ್ಲಿ ಸ್ವಚ್ಛತೆಗೆ ಹೆಚ್ಚು ಒತ್ತು ನೀಡಬೇಕು ಎಂದು ಸಲಹೆ ಮಾಡಿದರು. ಹಿರಿಯ ಪೊಲೀಸ್ ಅಧಿಕಾರಿ ಮೇದಪ್ಪ ಅವರು ದುಬಾರೆ ಮತ್ತು ಬರಪೊಳೆಯಲ್ಲಿ ಸೇರಿದಂತೆ ಎಲ್ಲೆಡೆ ಪ್ರವಾಸಿಗರ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಬೇಕು. ಅನಾಹುತಗಳು ಸಂಭವಿಸದಂತೆ ಮುನ್ನೆಚ್ಚರ ವಹಿಸಬೇಕು ಎಂದು ಸಲಹೆ ಮಾಡಿದರು. ರಿವರ್ ರ‍್ಯಾಫ್ಟಿಂಗ್ ಸಂಬಂಧ ಬೋಟ್‌ಗಳ ಸುರಕ್ಷತೆ ಮತ್ತಿತರ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಅವರು ಸಲಹೆ ಮಾಡಿದರು. ಲೋಕೋಪಯೋಗಿ ಇಲಾಖೆಯ ಇಇ ಪ್ರಭು, ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ವಿ.ಟಿ.ವಿಸ್ಮಯಿ, ದುಬಾರೆ ರ‍್ಯಾಪ್ಟಿಂಗ್ ಅಧ್ಯಕ್ಷರಾದ ಉತ್ತಪ್ಪ, ಸಿ.ಎಲ್.ವಿಶ್ವ ಅವರು ಹಲವು ಮಾಹಿತಿ ನೀಡಿದರು. ತಹಶೀಲ್ದಾರರಾದ ಶ್ರೀಧರ, ಸಂಜನಾ, ಪಿಡಿಒಗಳಾದ ರಾಜಶೇಖರ್, ಹರೀಶ್, ಪ್ರವಾಸೋದ್ಯಮ ಇಲಾಖೆಯ ಸಮಾಲೋಚಕರಾದ ಜತೀನ್, ಇತರರು ಇದ್ದರು.









