
ಮಡಿಕೇರಿ ಮೇ 18 NEWS DESK : ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ವತಿಯಿಂದ ಅಂತರರಾಷ್ಟ್ರೀಯ ವಸ್ತುಸಂಗ್ರಹಾಲಯ ದಿನಾಚರಣೆ ಅಂಗವಾಗಿ `ವಸ್ತು ಸಂಗ್ರಹಾಲಯಗಳು ವಿಭಜಿತ ಜಗತ್ತನ್ನು ಒಂದುಗೂಡಿಸುತ್ತಿವೆ ಎಂಬ ಘೋಷವಾಕ್ಯದಡಿಯಲ್ಲಿ ನಾಡಿನ ಗತ ಇತಿಹಾಸವನ್ನು ಪುಷ್ಠೀಕರಿಸುವ `ಪ್ರಾಚೀನ ನಾಣ್ಯಗಳ ಪ್ರದರ್ಶನ ನಗರದ ಕೋಟೆಯ ಆವರಣದ ವಸ್ತುಸಂಗ್ರಹಾಲಯದಲ್ಲಿ ಅರ್ಥಪೂರ್ಣವಾಗಿ ನಡೆಯಿತು. ಕೊಡಗಿನ ಖ್ಯಾತ ವೈದ್ಯರು ಹಾಗೂ ನಾಣ್ಯ ಸಂಗ್ರಹಕಾರರಾದ ಡಾ.ಎಂ.ಜಿ.ಪಾಟ್ಕರ್ ಅವರ ಸಂಗ್ರಹದ ಎರಡು ಸಾವಿರಕ್ಕೂ ಹೆಚ್ಚು ನಾಣ್ಯಗಳ ಪ್ರದರ್ಶನ ಕುತೂಹಲಕಾರಿಯಾಗಿ ಮೂಡಿ ಬಂದು, ನೂರಾರು ಸಂಖ್ಯೆಯ ಜನರನ್ನು ಆಕರ್ಷಿಸಿತು. ಖ್ಯಾತ ನಾಣ್ಯ-ನೊಟು ಸಂಗ್ರಹಕಾರರಾದ ಹುಣಸೂರು ಪಿ.ಕೆ.ಕೇಶವಮೂರ್ತಿ ಅವರು ಪ್ರಾಚೀನ ನಾಣ್ಯಗಳ ಪ್ರದರ್ಶನ ಉದ್ಘಾಟಿಸಿ ಮಾತನಾಡಿ, ಪ್ರಾಚೀನ ನಾಣ್ಯಗಳ ಪ್ರದರ್ಶನದಿಂದ ವಿದ್ಯಾರ್ಥಿಗಳು ಪುಸ್ತಕದಲ್ಲಿ ಓದುವ ಇತಿಹಾಸವನ್ನು ಕಣ್ಣಾರೆ ನೋಡಿ ಕಲಿಯಲು ಉತ್ತಮ ವೇದಿಕೆಯಾಗಿದೆ ಎಂದರು. ಇದು ಮುಂದಿನ ಪೀಳಿಗೆಗೆ ಇತಿಹಾಸದ ವಿವಿಧ ರಾಜವಂಶಗಳ, ಲಾಂಛನಗಳ ಹಾಗೂ ಆಯಾ ಕಾಲದ ಇತಿಹಾಸವನ್ನು ಸ್ಪಷ್ಟವಾಗಿ ತಿಳಿಯಲು ಸಹಕಾರಿಯಾಗುತ್ತದೆ. ಅಲ್ಲದೇ ವಿದ್ಯಾರ್ಥಿಗಳು ಹಾಗೂ ಇತಿಹಾಸಕಾರರ ಕಲಿಕೆಗೆ ಪೂರಕವಾಗಿದೆ. ಈ ನಿಟ್ಟಿನಲ್ಲಿ ಶಾಲಾ-ಕಾಲೇಜುಗಳಲ್ಲಿ, ವಸ್ತು ಸಂಗ್ರಹಾಲಯಗಳಲ್ಲಿ ಪ್ರದರ್ಶನ ನಡೆಸಲಾಗುತ್ತದೆ ಎಂದು ತಿಳಿಸಿದರು. ಈ ಹಿಂದೆ ತಾನು ನಾಣ್ಯ ಮತ್ತು ನೋಟುಗಳ ಪ್ರದರ್ಶನ ನಡೆಸುತ್ತಿದ್ದು, ಈ ಬಾರಿ ನಾಡಿನ ಖ್ಯಾತ ವೈದ್ಯರು ಹಾಗೂ ನಾಣ್ಯ ಸಂಗ್ರಹಕಾರರೂ ಆಗಿರುವ ಡಾ.ಎಂ.ಜಿ.ಪಾಟ್ಕರ್ ಮತ್ತು ವಿಜಯಲಕ್ಷೀ ಪಾಟ್ಕರ್ ಅವರು ಸಂಗ್ರಹದ ನಾಣ್ಯಗಳ ಪ್ರದರ್ಶನ ನಡೆಸಲಾಗುತ್ತಿದೆ. ಇಲ್ಲಿ ಕ್ರಿಸ್ತ ಪೂರ್ವ 6ನೇ ಶತಮಾನದಲ್ಲಿ ಚಲಾವಣೆಗೆ ಬಂದ ಭಾರತದ ಮೊಟ್ಟ ಮೊದಲ ಪಂಚ್‍ಮಾರ್ಕ್ ನಾಣ್ಯಗಳು, ಗ್ರೀಕ್, ರೋಮನ್, ಕುಶಾನರು, ಗುಪ್ತ ಸಾಮ್ರಾಜ್ಯ, ಶಾತವಾಹನ, ಕ್ಷತ್ರಪ, ಚೋಳಾ, ಪಲ್ಲವ, ಪಾಂಡ್ಯ, ವಿದೇಶಿ ಆಕ್ರಮಣಕಾರರ, ಬ್ರಿಟೀಷರ ನಾಣ್ಯಗಳು, ಸ್ವಾತಂತ್ರ್ಯ ಪೂರ್ವ, ನಂತರದ ತಾಮ್ರ, ಬೆಳ್ಳಿ, ಚಿನ್ನ, ಸೀಸ, ಹಿತ್ತಾಳೆ, ಕಂಚಿನ ನೂರಾರು ನಾಣ್ಯಗಳು ಪ್ರದರ್ಶನದ ಪ್ರಮುಖ ಆಕರ್ಷಣೆಯಾಗಿದೆ ಎಂದು ಹೇಳಿದರು. ನಾಡಿನ ಖ್ಯಾತ ವೈದ್ಯರು ಹಾಗೂ ನಾಣ್ಯ ಸಂಗ್ರಹಕಾರರೂ ಆಗಿರುವ ಡಾ.ಎಂ.ಜಿ.ಪಾಟ್ಕರ್ ಮತ್ತು ವಿಜಯಲಕ್ಷೀ ಪಾಟ್ಕರ್, ಕೊಡಗು ಜಿಲ್ಲಾ ಜಾನಪದ ಪರಿಷತ್ತಿನ ಅಧ್ಯಕ್ಷರಾದ ಬಿ.ಜಿ.ಅನಂತಶಯನ, ಸರ್ಕಾರಿ ವಸ್ತು ಸಂಗ್ರಹಾಲಯದ ಕ್ಯೂರೇಟರ್ ಬಿ.ಪಿ.ರೇಖಾ ಹಾಗೂ ಸಿಬ್ಬಂದಿಗಳು ಇದ್ದರು. ಕರ್ನಾಟಕದ ನಾಣ್ಯಗಳು: ಗಂಗ, ಕದಂಬ, ಚಾಲುಕ್ಯ, ಹೊಯ್ಸಳ, ಕಾಕತೀಯ, ಯಾದವ, ವಿಜಯನಗರದ ಹರಿಹರ, ದೇವರಾಯ, ಕೃಷ್ಣ ದೇವರಾಯ, ಅಚ್ಚುತರಾಯ, ಶ್ರೀರಂಗರಾಯ, ಸದಾಶಿವರಾಯ ಇತರೆ ಅರಸರು. ಮೈಸೂರಿನ ದಿವಾನ್ ಪೂರ್ಣಯ್ಯ, ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರ ನಾಣ್ಯಗಳು.









