
ಮಡಿಕೇರಿ ಮೇ 19 NEWS DESK : ಮಂಡ್ಯದ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ವ್ಯಾಪ್ತಿಯ ಮಡಿಕೇರಿ ವಿಸ್ತರಣಾ ಘಟಕ ಹಾಗೂ ಅರಣ್ಯ ಮಹಾ ವಿದ್ಯಾಲಯ, ರೇನ್ಫೊರೆಸ್ಟ್ ಮತ್ತು ಬೈಫ್ ಸಬಲ ಯೋಜನೆಯ ವತಿಯಿಂದ ಮೇ 23 ರಂದು ಪೊನ್ನಂಪೇಟೆಯ ಅರಣ್ಯ ಮಹಾವಿದ್ಯಾಲಯದಲ್ಲಿ “ವಿಶ್ವ ಜೇನು ದಿನಾಚರಣೆ-2026” ನಡೆಯಲಿದೆ. ನಗರದಲ್ಲಿ ಸುದ್ದಿ ಗೋಷ್ಠಿಯಲ್ಲಿ ಕೃಷಿ ವಿಜ್ಞಾನಗಳ ವಿಶ್ವ ವಿದ್ಯಾಲಯದ ಮಡಿಕೇರಿ ವಿಸ್ತರಣಾ ಶಿಕ್ಷಣ ಘಟಕದ ಮುಖ್ಯಸ್ಥರಾದ ಡಾ.ಆರ್.ಎನ್.ಕೆಂಚರೆಡ್ಡಿ ಅವರು ಈ ಕುರಿತು ಮಾಹಿತಿ ನೀಡಿ, ಕೃಷಿಯಲ್ಲಿನ ರಾಸಾಯನಿಕ ಗೊಬ್ಬರಗಳ ಬಳಕೆ, ಆಹಾರದ ಅಲಭ್ಯತೆ ಮೊದಲಾದ ಕಾರಣಗಳಿಂದ ಇತ್ತೀಚಿನ ದಿನಗಳಲ್ಲಿ ಜೇನುಹುಳುಗಳ ಸಂಖ್ಯೆ ಕ್ಷೀಣಿಸುತ್ತಿದೆ.ಈ ಹಿನ್ನೆಲೆಯಲ್ಲಿ ವಿವಿಧ ಬೆಳೆಗಳಲ್ಲಿ ಪರಾಗಸ್ಪರ್ಶಕ್ಕೆ ಅತ್ಯವಶ್ಯಕವಾಗಿರುವ ಜೇನು ಹುಳುಗಳನ್ನು ಸಂರಕ್ಷಿಸುವ ಮತ್ತು ಜೇನು ಕೃಷಿಯನ್ನು ಉತ್ತೇಜಿಸುವ ಉದ್ದೇಶದಿಂದ ವಿಶ್ವ ಜೇನು ದಿನಾಚರಣೆಯನ್ನು ಹಮ್ಮಿಕೊಳ್ಳಲಾಗುತ್ತಿದೆಯೆಂದು ಮಾಹಿತಿಯನ್ನಿತ್ತರು. ವಿಶ್ವ ಜೇನು ದಿನಾಚರಣೆಯನ್ನು ಅಂದು ಬೆಳಗ್ಗೆ 10.30 ಗಂಟೆಗೆ ಮಂಡ್ಯದ ಕೃಷಿ ವಿಜ್ಞಾನಗಳ ವಿಶ್ವ ವಿದ್ಯಾಲಯದ ಕುಲಪತಿಗಳಾದ ಡಾ.ಕೆ.ಸಿ.ನಾರಾಯಣ ಸ್ವಾಮಿ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕೃಷಿ ಸಚಿವರ ವಿಶೇಷ ಕರ್ತವ್ಯಾಧಿಕಾರಿಗಳಾದ ಡಾ.ಎ.ಬಿ.ಪಾಟೀಲ್ ಪಾಲ್ಗೊಳ್ಳಲಿದ್ದಾರೆ. ಅಧ್ಯಕ್ಷತೆಯನ್ನು ಕೃಷಿ ವಿಜ್ಞಾನಗಳ ವಿವಿಯ ವಿಸ್ತರಣಾ ನಿರ್ದೇಶಕರಾದ ಡಾ.ರಾಮಚಂದ್ರ ಸಿ. ವಹಿಸಲಿದ್ದಾರೆ. ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ ಡೀನ್ ಡಾ.ಜಿ.ಎಂ.ದೇವಗಿರಿ ಅವರ ಗೌರವ ಉಪಸ್ಥಿತಿ ಇರಲಿದೆಯೆಂದು ತಿಳಿಸಿದರು. :: ಜೇನು ಕೃಷಿಕರಿಗೆ ಸನ್ಮಾನ :: ಕಾರ್ಯಕ್ರಮದಲ್ಲಿ ಕೊಡಗಿನ ಆಯ್ದ ಪ್ರಗತಿಪರ ಜೇನು ಕೃಷಿಕರನ್ನು ಸನ್ಮಾನಿಸಿ ಗೌರವಿಸಲಾಗುತ್ತದೆ. ಇದರೊಂದಿಗೆ ಕೊಡಗಿನಲ್ಲಿ ಲಭ್ಯವಿರುವ ವಿವಿಧ ಬಗೆಯ ಜೇನು ತುಪ್ಪ, ಬೇರೆಡೆಗಳಿಂದ ತಂದ ಜೇನು ತುಪ್ಪಗಳ ಮಾದರಿ ಪ್ರದರ್ಶನವಿರುತ್ತದೆ. ವಿಶೇಷವಾಗಿ ಜೇನಿನ ಪರಿಶುದ್ಧತೆಯನ್ನು ಪರೀಕ್ಷಿಸುವ ಕೆಲ ವಿಧಾನಗಳ ಪ್ರಾತ್ಯಕ್ಷಿಕೆಯನ್ನು ಕಾರ್ಯಕ್ರಮದಲ್ಲಿ ಅಳವಡಿಸಲಾಗಿದೆ. ವಿವಿಧ ಜೇನು ಕೃಷಿ ಉಪಕರಣಗಳ ಪ್ರದರ್ಶನ ಮತ್ತು ಮಾರಾಟವನ್ನು ಆಯೋಜಿಸಲಾಗಿದೆಯೆಂದರು. ಇದರೊಂದಿಗೆ ಜೇನು ಕೃಷಿ ಹೇಗೆ ಮಾನವನ ಆರೋಗ್ಯಕ್ಕೆ ಸಹಕಾರಿಯಾಗಬಲ್ಲುದು ಮತ್ತು ವಿವಿಧ ಬೆಳೆಗಳ ಇಳುವರಿಯಲ್ಲಿ ಅವುಗಳ ಪಾತ್ರ. ಜೇನು ಕೃಷಿ ಕೈಗೊಳ್ಳುವ ವಿಧಾನ, ಜೇನು ಕುಟುಂಬಗಳ ನಿರ್ವಹಣೆಯ ಮಾಹಿತಿಯನ್ನು ಕಾರ್ಯಕ್ರಮದ ಮೂಲಕ ಒದಗಿಸಲಾಗುತ್ತದೆಂದು ಡಾ. ಕೆಂಚರೆಡ್ಡಿ ತಿಳಿಸಿದರು. ಕೃಷಿಕರಿಗೆ ಜೇನು ಕುಟುಂಬಗಳ ಮಾರಾಟ :: ಕೃಷಿ ವಿಜ್ಞಾನಗಳ ವಿವಿಯ ವಿಸ್ತರಣಾ ಘಟಕಗಳ ಮೂಲಕ ಸ್ಥಳೀಯ “ತುಡುವೆ” ಜೇನು ಕುಟುಂಬಗಳನ್ನು ಆಸಕ್ತ ಕೃಷಿಕರಿಗೆ ಒದಗಿಸಲಾಗುತ್ತದೆ. ಇದಕ್ಕಾಗಿ ಪ್ರತಿ ಒಂದು ಜೇನು ಕುಟುಂಬಕ್ಕೆ 1600 ರೂ.ಗಳನ್ನು ನಿಗದಿಪಡಿಸಲಾಗಿದೆ. ಪ್ರಸ್ತುತ ಜಿಲ್ಲೆಯ ವಿಸ್ತರಣಾ ಘಟಕಗಳಲ್ಲಿ 600 ಜೇನು ಕುಟುಂಬಗಳಿರುವುದಾಗಿ ಮಾಹಿತಿಯನ್ನಿತ್ತರು. :: ರೋಗ ಕ್ಷೀಣಿಸಿದೆ :: ಮಾಧ್ಯಮಗಳ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಸುಮಾರು ಮೂರು ದಶಕಗಳ ಹಿಂದೆ ಕಾಣಿಸಿಕೊಂಡ “ಥಾಯಿ ಸ್ಯಾಕ್ ಬ್ರೂಡ್” ಎನ್ನುವ ವೈರಲ್ ರೋಗದಿಂದ ಜೇನು ಹುಳುಗಳ ಸಂಖ್ಯೆ ಗಣನೀಯವಾಗಿ ಕ್ಷೀಣಿಸಿತ್ತು. ಪ್ರಸ್ತುತ ರೋಗ ಬಾಧೆ ಸಾಕಷ್ಟು ಇಳಿಮುಖವಾಗಿದ್ದು, ಈಗ ರೋಗ ನಿಯಂತ್ರಣದ ಕ್ರಮಗಳನ್ನು ಕಂಡುಕೊಳ್ಳಲಾಗಿದೆಯೆಂದು ತಿಳಿಸಿದರು. ನಗರದಲ್ಲಿ ಗೋಷ್ಠಿಯಲ್ಲಿ ಮಡಿಕೇರಿ ವಿಸ್ತರಣಾ ಶಿಕ್ಷಣ ಘಟಕದ ತೋಟಗಾರಿಕೆ ತಜ್ಞರಾದ ಡಾ.ಹೇಮಂತ್ ಕುಮಾರ್ ಪಿ., ಪೊನ್ನಂಪೇಟೆಯ ಕೃಷಿ ಮತ್ತು ತೊಟಗಾರಿಕಾ ಸಂಶೋಧನಾ ಕೇಂದ್ರÀ್ರದ ಕ್ಷೇತ್ರ ಅಧೀಕ್ಷಕರಾದ ಡಾ. ಪ್ರಶಾಂತ್ ಸಿ. ಉಪಸ್ಥಿತರಿದ್ದರು.









