
ಮಡಿಕೇರಿ ಮೇ 19 NEWS DESK : ನಗರದ ಶ್ರೀ ಮುತ್ತಪ್ಪ ದೇವಾಲಯದ ಆವರಣದಲ್ಲಿರುವ ಶ್ರೀ ಭಗವತಿ ದೇವಿ, ಪಾರ್ವತಿ ದೇವಿ, ಸರಸ್ವತಿ, ಮಹಾಲಕ್ಷ್ಮಿ ಹಾಗೂ ದುರ್ಗಿ ಸಂಕಲ್ಪದಲ್ಲಿರುವ ದೇವಿಗೆ ಮೇ 31 ರಂದು “ಪೊಂಗಾಲ ಸೇವೆ” ನಡೆಯಲಿದೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶ್ರೀ ಮುತ್ತಪ್ಪ ದೇವಾಲಯ ಸಮಿತಿಯ ಮಹಿಳಾ ಘಟಕದ ಅಧ್ಯಕ್ಷೆ ಶಾರದಾ ರಾಮನ್ ಅವರು ಭಾನುವಾರ ಬೆಳಿಗ್ಗೆ 8.30 ರಿಂದ ಆರಂಭಗೊಳ್ಳುವ “ಪೊಂಗಾಲ ಉತ್ಸವ” ದ ಕುರಿತು ಮಾಹಿತಿ ನೀಡಿದರು. ಪೊಂಗಾಲ ಮಹೋತ್ಸವವು ಕೇರಳದ ತಿರುವನಂತಪುರಂನಲ್ಲಿರುವ ಅಟ್ಟುಂಗಾಲ್ ಭಗವತಿ ಕ್ಷೇತ್ರದಲ್ಲಿ ಲಕ್ಷಾಂತರ ಮಹಿಳಾ ಭಕ್ತಾದಿಗಳಿಂದ ನಡೆಸಲ್ಪಡುವ ಶ್ರೇಷ್ಠವಾದ ಸೇವೆಯಾಗಿರುತ್ತದೆ. ಇತ್ತೀಚೆಗೆ ಇನ್‍ಫೆÇೀಸಿಸನ ಡಾ| ಸುಧಾ ಮೂರ್ತಿಯವರು ಕೂಡ ಈ ಪೊಂಗಾಲ ಸೇವೆಯಲ್ಲಿ ಭಾಗವಹಿಸಿ ದೇವಿಯ ಕೃಪೆಗೆ ಪಾತ್ರರಾಗಿದ್ದರು. ಅಂತಹ ಪವಿತ್ರವಾದ ಪೂಜೆಯನ್ನು ಮಡಿಕೇರಿಯ ಶ್ರೀ ಮುತ್ತಪ್ಪ ದೇವಾಲಯದ ಆವರಣದಲ್ಲಿರುವ ಶ್ರೀ ಭಗವತಿ ದೇವಿಯ ಸನ್ನಿಧಿಯಲ್ಲಿ ನಡೆಯಲಿರುವುದು ಕೊಡಗಿನ ಸರ್ವ ಮಹಿಳೆಯರು ಹಾಗೂ ಹೆಣ್ಣು ಮಕ್ಕಳಿಗೆ ದೊರಕಿದ ಸದಾವಕಾಶವಾಗಿದೆ ಎಂದರು. ಪೊಂಗಾಲ ಸಮರ್ಪಣೆಯಿಂದ ಮನೆಯಲ್ಲಿ ಆರೋಗ್ಯ, ಶಾಂತಿ ಮತ್ತು ಸಮಾಧಾನ, ನೆಲೆಸುತ್ತದೆ. ಮದುವೆ, ಶಿಕ್ಷಣ, ಆರೋಗ್ಯಕ್ಕೆ ಸಂಬಂಧಿಸಿದ ಎಲ್ಲಾ ಪ್ರಾರ್ಥನೆಯನ್ನು ತಾಯಿ ನೆರವೇರಿಸಿಕೊಡುತ್ತಾಳೆ ಎಂಬುವುದು ನಂಬಿಕೆ. ಇಟ್ಟಿಗೆ ಅಥವಾ ಕಲ್ಲುಗಳನ್ನು ಜೋಡಿಸಿ ಒಲೆಯನ್ನು ಹಾಕಿ ಸೌದೆಗಳನ್ನು ಜೋಡಿಸಿ ಸಿದ್ಧಪಡಿಸಿದ ನಂತರ ಅರ್ಚಕರು ನೀಡಿದ ಕರ್ಪೂರದಾರತಿಯಿಂದ ಒಲೆ ಉರಿಸಿ. ಹೊಸ ಮಡಿಕೆಯಲ್ಲಿ ನೀರು ತುಂಬಿಸಿ ಪೊಂಗಾಲ ತಯಾರಿಕೆ ಮಾಡುವುದು ಕ್ರಮ, ಪೊಂಗಾಲ ತಯಾರಿಕೆಗಾಗಿ ಬೇಕಾಗುವ ಸಾಮಗ್ರಿಗಳಾದ ಹೊಸ ಮಡಿಕೆ, ಸೌದೆ, ಅಕ್ಕಿ, ಬೆಲ್ಲ, ಕಾಯಿ, ತುಪ್ಪ, ಏಲಕ್ಕಿ, ದ್ರಾಕ್ಷಿ, ಗೋಡಂಬಿ ಮುಂತಾದವುಗಳನ್ನು ದೇವಸ್ಥಾನದಿಂದಲೇ ಒದಗಿಸಲಾಗುವುದು. ಕೊಡಗಿನ ಸಮಸ್ತ ಭಕ್ತರು ಆಗಮಿಸಿ ದೇವಿಯ ಪ್ರಸಾದವನ್ನು ಸ್ವೀಕರಿಸಬೇಕೆಂದು ಶಾರದಾ ರಾಮನ್ ಮನವಿ ಮಾಡಿದರು. ಪೊಂಗಾಲ ಸೇವೆ ಮಾಡಲು ಇಚ್ಚಿಸುವ ಮಹಿಳೆಯರು 9449402045, 9663973559, 9141148808, 8861290731 ನ್ನು ಸಂಪರ್ಕಿಸಬಹುದಾಗಿದೆ. ಸುದ್ದಿಗೋಷ್ಠಿಯಲ್ಲಿ ಶ್ರೀ ಮುತ್ತಪ್ಪ ದೇವಾಲಯ ಸಮಿತಿಯ ಅಧ್ಯಕ್ಷರಾದ ಟಿ.ಕೆ.ಸುಧೀರ್, ಶ್ರೀ ಮುತ್ತಪ್ಪ ದೇವಸ್ಥಾನದ ಉತ್ಸವ ಸಮಿತಿಯ ಅಧ್ಯಕ್ಷರಾದ ಬಿ.ಕೆ. ರವೀಂದ್ರ ರೈ, ಪೊಂಗಾಲ ಉತ್ಸವ ಸಮಿತಿಯ ಸದಸ್ಯರುಗಳಾದ ಪವಿತ್ರಾ ರೆಜಿ, ದೀಪಾ ಕಾವೇರಪ್ಪ, ರಮ್ಯ ರಮೇಶ್ ಉಪಸ್ಥಿತರಿದ್ದರು.









