
ಕುಶಾಲನಗರ, ಮೇ 20 NEWS DESK : ಕುಶಾಲನಗರ ತಾಲೂಕಿನ ತೊರೆನೂರು ಗ್ರಾಮದಲ್ಲಿ ಮೇ 22 ರಂದು ಗ್ರಾಮ ದೇವತೆ ಶ್ರೀ ದೊಡ್ಡಮ್ಮ ಮತ್ತು ಚಿಕ್ಕಮ್ಮ ದೇವಿಯ ವಾರ್ಷಿಕ ಹಬ್ಬ ಹಾಗೂ ಜಾತ್ರೋತ್ಸವಕ್ಕೆ ಶ್ರೀ ಬಸವೇಶ್ವರ ದೇವಸ್ಥಾನ ಟ್ರಸ್ಟ್ ಹಾಗೂ ಗ್ರಾಮ ದೇವತಾ ಸಮಿತಿ ವತಿಯಿಂದ ಸಿದ್ಧತಾ ಕಾರ್ಯ ಕೈಗೊಳ್ಳಲಾಗಿದೆ ಎಂದು ಟ್ರಸ್ಟ್ ನ ಅಧ್ಯಕ್ಷ ಟಿ.ಬಿ.ಜಗದೀಶ್ ತಿಳಿಸಿದ್ದಾರೆ. ಜಾತ್ರಾ ಮಹೋತ್ಸವದ ಅಂಗವಾಗಿ ಗ್ರಾಮದ ಬಸವೇಶ್ವರ ದೇವಸ್ಥಾನ , ಮಠದ ಆವರಣದಲ್ಲಿನ ದೇವಿನ ಬನ ಸೇರಿದಂತೆ ಗ್ರಾಮವನ್ನು ಹಸಿರು ತಳಿರು- ತೋರಣ ಹಾಗೂ ವಿದ್ಯುದ್ದೀಪಗಳಿಂದ ಅಲಂಕರಿಸಲಾಗುವುದು. ಗ್ರಾಮದಲ್ಲಿ ಗ್ರಾಮಸ್ಥರು ಹೊರಗಿನಿಂದ ಬರುವ ನೆಂಟರಿಷ್ಟರು ಹಾಗೂ ಸ್ನೇಹಿತರಿಗೆ ವಿವಿಧ ಭಕ್ಷ್ಯ ಭೋಜನಗಳನ್ನು ನೀಡಿ ಆತಿಥ್ಯ ನೀಡುವುದು ಗ್ರಾಮೀಣ ಸೊಗಡಿನ ಪ್ರತೀಕವಾಗಿದೆ. ಕೊಡಗು ಹಾಗೂ ಹಾಸನ ಜಿಲ್ಲೆಯ ಗಡಿ ಗ್ರಾಮದ ತೊರೆನೂರು ಗ್ರಾಮದಲ್ಲಿ ನಡೆಯುವ ಗ್ರಾಮೀಣ ಭಾಗದ ದೇವಿಯ ಉತ್ಸವ ಹಾಗೂ ಜಾತ್ರೆಯಲ್ಲಿ ಮೈಸೂರು, ಹಾಸನ ಹಾಗೂ ಕೊಡಗು ಜಿಲ್ಲೆಯ ಗಡಿ ಗ್ರಾಮಗಳ ಜನರು ಸೇರಿದಂತೆ ವಿವಿಧೆಡೆಗಳಿಂದ ಸಾವಿರಾರು ಮಂದಿ ಭಕ್ತಾರು ಪಾಲ್ಗೊಳ್ಳುವರು. ಅಂದು ರಾತ್ರಿ 10.00 ಗಂಟೆಗೆ ಗ್ರಾಮದ ಬಸವೇಶ್ವರ ದೇವಸ್ಥಾನ ಬಳಿಯಿಂದ ದೇವಿಯ ಸಾಂಪ್ರದಾಯಿಕ ಪೂಜಾ ವಿಧಿ-ವಿಧಾನಗಳನ್ನು ನೆರವೇರಿಸಿದ ನಂತರ ಉತ್ಸವಕ್ಕೆ ಚಾಲನೆ ನೀಡಲಾಗುತ್ತದೆ. ದೇವರ ಉತ್ಸವದೊಂದಿಗೆ ಹರಕೆ ಹೊತ್ತ
ಭಕ್ತಾದಿಗಳು ತಮಟೆ ಮತ್ತು ಮಂಗಳವಾದ್ಯದೊಂದಿಗೆ ತೊರೆನೂರು ವಿರಕ್ತ ಮಠದ ಆವರಣದಲ್ಲಿರುವ ಪವಿತ್ರ ಬನದಲ್ಲಿನ ದೇವಸ್ಥಾನದ ಅಂಗಳಕ್ಕೆ ತೆರಳುವರು. ವಿರಕ್ತ ಮಠದ ಪವಿತ್ರ ಬನಕ್ಕೆ ತೆರಳುವ ಭಕ್ತಾದಿಗಳು ಬೆಂಕಿ ಕೊಂಡ ಹಾಯ್ದು ದೇವಿಯ ದರ್ಶನ ಪಡೆಯಲಿದ್ದಾರೆ. ಪೂಜಾ ವಿಧಿ ವಿಧಾನದ ನಂತರ ಪವಿತ್ರ ಬನದಲ್ಲಿ ಉಯ್ಯಾಲೆ ಉತ್ಸವ ನಡೆಯಲಿದೆ. ಮಾರನೆಯ ದಿನವಾದ ಶನಿವಾರ ( ಮೇ 23 ರಂದು ) ತೊರೆನೂರು ಗ್ರಾಮದ ಶಾಲಾ ಮೈದಾನದಲ್ಲಿ ಕ್ರೀಡಾಕೂಟ ನಡೆಯಲಿದ್ದು, ಸಂಜೆ 7.30 ಕ್ಕೆ ಸಂಗೀತ ರಸಸಂಜೆ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಟ್ರಸ್ಟ್ ನ ಕಾರ್ಯದರ್ಶಿ ಟಿ.ಎಲ್.ಮಹೇಶ್ ತಿಳಿಸಿದ್ದಾರೆ. ಇದೇ ವೇಳೆಯಲ್ಲಿ ವಿವಿಧ ಕ್ಷೇತ್ರದಲ್ಲಿನ ದಾನಿಗಳಿಗೆ ಸಮಿತಿ ವತಿಯಿಂದ ಸನ್ಮಾನ ಏರ್ಪಡಿಸಲಾಗಿದೆ ಎಂದು ತಿಳಿಸಲಾಗಿದೆ.









