
ಮಡಿಕೇರಿ NEWS DESK ಮೇ 21 : ಬೆಲೆ ಹೆಚ್ಚಳದ ಪರಿಣಾಮ ಸಂಕಷ್ಟದ ಜೀವನ ಸಾಗಿಸುತ್ತಿರುವ ಆಟೋ ಚಾಲಕರ ಹಿತ ಕಾಪಾಡಲು ಸರಕಾರ “ಆಟೋ ಚಾಲಕರ ಕ್ಷೇಮಾಭಿವೃದ್ಧಿ ಮಂಡಳಿ” ರಚಿಸಬೇಕು ಎಂದು ಕೊಡಗು ಜಿಲ್ಲಾ ಸೋಶಿಯಲ್ ಡೆಮಾಕ್ರಟಿಕ್ ಟ್ರೇಡ್ ಯೂನಿಯನ್ ಒತ್ತಾಯಿಸಿದೆ.
ಪತ್ರಿಕಾ ಪ್ರಕಟಣೆ ನೀಡಿರುವ ಎಸ್‌ಡಿಟಿಯು ನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಜಾಕ್ ಎಂ.ಎ ಅವರು ಪೆಟ್ರೋಲ್, ಡೀಸೆಲ್, ಅನಿಲ ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ನಿತ್ಯ ದುಡಿಯುವ ಆಟೋ ಚಾಲಕರು ಕಷ್ಟದ ಬದುಕು ಸಾಗಿಸುತ್ತಿದ್ದಾರೆ. ಮಕ್ಕಳ ವಿದ್ಯಾಭ್ಯಾಸದ ಶುಲ್ಕವೂ ದುಬಾರಿಯಾಗಿದೆ, ತೆರಿಗೆ ಹೊರೆ ಅಧಿಕವಾಗಿದೆ. ಆದ್ದರಿಂದ ಸರಕಾರ ತಕ್ಷಣ ಆಟೋ ಚಾಲಕರ ನೆರವಿಗೆ ಬಂದು “ಆಟೋ ಚಾಲಕರ ಕ್ಷೇಮಾಭಿವೃದ್ಧಿ ಮಂಡಳಿ” ರಚಿಸಿ ಅಗತ್ಯ ಅನುದಾನ ಒದಗಿಸಬೇಕು ಎಂದು ಆಗ್ರಹಿಸಿದ್ದಾರೆ.








