
ಮಡಿಕೇರಿ ಮೇ 23 NEWS DESK : ಮಹಿಳೆಯರು ವಿಜ್ಞಾನ, ತಂತ್ರಜ್ಞಾನ, ಸಾಹಿತ್ಯ, ಸಂಗೀತ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿಯೂ ತಮ್ಮ ಛಾಪು ಮೂಡಿಸಿದ್ದಾರೆ. ತಂದೆ ತಾಯಿಯರನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳುವ ಹೆಣ್ಣು ಮಕ್ಕಳು, ಅತ್ತೆ ಮಾವಂದಿರನ್ನು ಅದೇ ರೀತಿ ಅಷ್ಟೇ ಚೆನ್ನಾಗಿ ನೋಡಿಕೊಳ್ಳಬೇಕು, ಆಗ ಸಂಸಾರ ಮತ್ತು ಸಂಬಂಧಕ್ಕೆ ಒಂದು ಅರ್ಥ ಬರುತ್ತದೆಂದು ಸೆಸ್ಕ್ ನಿರ್ದೇಶಕ(ತಾಂತ್ರಿಕ)ರಾಗಿರುವ ಶರಣಮ್ಮ ಎಸ್.ಜಂಗಿನರವರು ಕಿವಿಮಾತು ಹೇಳಿದರು. ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದಿಂದ ನಗರದ ಗಾಂಧಿ ಭವನದಲ್ಲಿ ಆಯೋಜಿತ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಹೆಣ್ಣು ಮಕ್ಕಳು ಮನೆ ಹಾಗೂ ಕಚೇರಿ ಕೆಲಸಗಳೆರಡಕ್ಕೂ ಅಗತ್ಯ ಜಾಗವನ್ನು ನೀಡಿ ನಿಭಾಯಿಸುತ್ತಾರೆ. ಮಹಿಳೆ ತನ್ನ ಸಹನೆ ಮತ್ತು ಪ್ರೀತಿಯಿಂದಲೇ ಎಲ್ಲವನ್ನೂ ನಿಬಾಯಿಸುತ್ತಾಳೆÉಂದು ಹೆಣ್ಣು ಮಕ್ಕಳ ಬಗ್ಗೆ ಹೆಮ್ಮೆಯಿಂದ ಹೇಳಿದರು. ಸಖಿ ಒನ್ ಸ್ಟಾಪ್ ಸೆಂಟರ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಆಡಳಿತಾಧಿಕಾರಿ ಪ್ರಭಾವತಿ ಕೆ.ಎಚ್. ಮಾತನಾಡಿ, ಮಹಿಳೆಯರು ಅಬಲೆಯಲ್ಲ, ಸಬಲೆ. ಏನೇ ಸಮಸ್ಯೆ ಇದ್ದರೂ ಆಕೆ ಹೇಳಿಕೊಳ್ಳುವಂತಾಗಬೇಕು. ನಿಮ್ಮ ಸಮಸ್ಯೆಗಳನ್ನ ಬಗೆಹರಿಸಲೆಂದೇ ನಮ್ಮ ಸಖಿ ಒನ್ ಸ್ಟಾಪ್ ಸೆಂಟರ್ ಇರುವುದೆಂದು ತಿಳಿಸಿದರು. ಮಡಿಕೇರಿ ವಿಭಾಗ ಕಚೇರಿಯ ಕಾರ್ಯನಿರ್ವಾಹಕ ಎಂಜಿನಿಯರ್ ರಾಮಚಂದ್ರ ಎಂ. ಅವರು ಮಾತನಾಡಿದರು. ಸ್ತ್ರೀ ಹಾಗೂ ಪುರುಷರಿಬ್ಬರು ಎರಡು ಕಣ್ಣು ಇದ್ದ ಹಾಗೆ. ಒಬ್ಬರಿಗೊಬ್ಬರು ಪೂರಕ. ಮಹಿಳೆಯರಿಗೆ ಪ್ರತಿಯೊಬ್ಬರೂ ಗೌರವ ನೀಡಬೇಕು ಎಂದರು. ವಿರಾಜಪೇಟೆ ಉಪ ವಿಭಾಗದ ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್ ಆರ್.ಪಿ.ನೀತಾ ಸಭಾಧ್ಯಕ್ಷತೆ ವಹಿಸಿದ್ದರು. ಇಲಾಖೆಯ ಮಡಿಕೇರಿ ವಿಭಾಗೀಯ ಕಚೇರಿಯ ಕಾರ್ಯನಿರ್ವಾಹಕ ಎಂಜಿನಿಯರ್ ರಾಮಚಂದ್ರ ಎಂ., ಲೆಕ್ಕಾಧಿಕಾರಿ ಸಂತೋಷ ಕುಮಾರ್ ಎಂ.ಎಸ್., ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್ ವಿನಯ್ ಕುಮಾರ್, ಕೆ.ಎಂ.ದಿಲೀಪ್, ಸೆಸ್ಕ್ ನೌಕರರ ಸಂಘದ ಮೈಸೂರು ಸಂಘಟನಾ ಕಾರ್ಯದರ್ಶಿ ಕೆ.ಬಿ.ಕೃಷ್ಣರಾಜ್ ಹಾಗೂ ಶಿವಾನಂದ ಶೆಟ್ಟಿ ಇತರರು ಇದ್ದರು. ಪದ್ಮಶ್ರೀ ನಾಯ್ಕ್ ಹಾಗೂ ಏಚ್. ಎಂ. ಮೇಘನಾ ಕಾರ್ಯಕ್ರಮ ನಿರೂಪಿಸಿದರು.









