
ಮಡಿಕೇರಿ NEWS DESK ಮೇ 24 : ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಮಡಿಕೇರಿಯಲ್ಲಿ ಮೃತ ದಾನಿಯಾದ ಡಾಲು ಅವರಿಂದ ಸಂಗ್ರಹಿಸಲಾದ ಎರಡು ಮೂತ್ರಪಿಂಡಗಳನ್ನು ಮೈಸೂರಿನ ಜೆ.ಎಸ್.ಎಸ್ ಆಸ್ಪತ್ರೆಯಲ್ಲಿ ಯಶಸ್ವಿಯಾಗಿ ಕಸಿ ಮಾಡಲಾಗಿದೆ. ಈ ಮೂಲಕ ಸಂಸ್ಥೆಯಲ್ಲಿ ನಡೆದ ಮೊದಲ ಅಂಗಾಂಗ ದಾನ ಕಾರ್ಯಾಚರಣೆ ಜೀವ ಉಳಿಸುವ ಮಹತ್ವದ ಸಾಧನೆಯಾಗಿ ಪರಿಣಮಿಸಿದೆ. ಅಂಗಾಂಗ ದಾನದ ಮೂಲಕ ಇಬ್ಬರು ರೋಗಿಗಳಿಗೆ ಹೊಸ ಬದುಕಿನ ಆಶಾಕಿರಣ ದೊರೆತಿದೆ. ಮೂತ್ರಪಿಂಡ ಕಸಿಗೆ ಅಗತ್ಯ ಸಹಕಾರ ನೀಡಿದ ಜೆ.ಎಸ್.ಎಸ್ ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆಯ ಡಾ.ಮಂಜುನಾಥ ಶೆಟ್ಟಿ, ವಿಭಾಗದ ಮುಖ್ಯಸ್ಥರು ನೆಪ್ರಾಲಾಜಿ ವಿಭಾಗ ಹಾಗೂ ಅಂಗಾಗ ಕಸಿ ಸಂಯೋಜಕರು, ಡಾ. ವಿಜಯಕುಮಾರ್ ಆರ್., ಪ್ರೊಫೆಸರ್ ಆಫ್ ಯೂರಾಲಜಿ ಮತ್ತು ರಿನಲ್ ಟ್ರಾನ್ಸ್‌ಪ್ಲಾಂಟ್ ಸರ್ಜನ್, ಡಾ. ಸಚಿನ್ ಧಾರವಾಡ್ಕರ್, ಪ್ರೊಫೆಸರ್ ಆಫ್ ಯೂರಾಲಜಿ, ಶ್ರೀ ರಾಜೇಂದ್ರ, ಯೂರಾಲಜಿ ಓಟಿ ಇನ್‌ಚಾರ್ಜ್ ನರ್ಸ್ ಹಾಗೂ ಶ್ರೀ ಗವಿ ಪ್ರಸಾದ್, ಓಟಿ ತಾಂತ್ರಿಕ ತಜ್ಞರು ಸೇರಿದಂತೆ ಎಲ್ಲಾ ಸಿಬ್ಬಂದಿಗೆ ಸಂಸ್ಥೆಯ ನಿರ್ದೇಶಕರು ಹಾಗೂ ಡೀನ್ ಅವರು ಎಲ್ಲರ ಪರವಾಗಿ ಧನ್ಯವಾದಗಳನ್ನು ಸಲ್ಲಿಸಿದರು. ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಎಲ್ಲಾ ವೈದ್ಯರು, ನರ್ಸಿಂಗ್ ಸಿಬ್ಬಂದಿ, ಆಡಳಿತ ಮಂಡಳಿ, SOTTO ತಂಡ ಹಾಗೂ ಸಹಕರಿಸಿದ ಎಲ್ಲಾ ಇಲಾಖೆಗಳ ಒಗ್ಗಟ್ಟಿನ ಪ್ರಯತ್ನ ಫಲಕಾರಿಯಾಗಿದ್ದು, “ನಮ್ಮ ಸಮೂಹ ಪ್ರಯತ್ನಗಳು ಜೀವ ಉಳಿಸುವ ಕಾರ್ಯವಾಗಿ ರೂಪಾಂತರಗೊಂಡಿರುವುದು ಸಂತಸದ ಸಂಗತಿ. ಈ ಕಾರ್ಯದಲ್ಲಿ ಭಾಗವಹಿಸಿದ ಪ್ರತಿಯೊಬ್ಬರಿಗೂ ಹೃತ್ಪೂರ್ವಕ ಧನ್ಯವಾದಗಳು” ಎಂದು ತಿಳಿಸಿದ್ದಾರೆ. ಹಾಗೂ ಅಂಗಾಂಗ ದಾನಕ್ಕೆ ಒಪ್ಪಿಗೆ ನೀಡಿದ ದಾನಿ ಡಾಲು ಅವರ ಕುಟುಂಬದ ಮಾನವೀಯ ನಿರ್ಧಾರಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದ್ದು, ಅವರಿಗೂ ಎಲ್ಲರ ಪರವಾಗಿ ಕೃತಜ್ಞತೆ ಸಲ್ಲಿಸಲಾಗಿದೆ. — ನಿರ್ದೇಶಕರು ಹಾಗೂ ಡೀನ್, ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಮಡಿಕೇರಿ








