
ಮಡಿಕೇರಿ NEWS DESK ಮೇ 24 : ಪತ್ರಕರ್ತರ ಸ್ನೇಹಿತರ ಬಳಗ ವತಿಯಿಂದ ಪ್ರಸನ್ನ ಎಡಿಕೇರಿ ಮಾಲೀಕತ್ವದ ಲೀಡಿಂಗ್ ಎಡ್ಜ್ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನಲ್ಲಿ ಮಡಿಕೇರಿ ನಗರದ ಪತ್ರಕರ್ತರಿಗೆ ಭಾನುವಾರ ಆಯೋಜಿಸಿದ್ದ ಸೌಹಾರ್ದ ಕ್ರಿಕೆಟ್ ಪಂದ್ಯಾಟದಲ್ಲಿ ಮೀಡಿಯಾ ಮಾಸ್ಟರ್ಸ್ ತಂಡ ಪ್ರಥಮ ಸ್ಥಾನ ಪಡೆಯಿತು. ಬೆಸ್ಟ್ ಆಫ್ ತ್ರಿ ಪಂದ್ಯಾಟದ ಮೊದಲ ಪಂದ್ಯದಲ್ಲಿ ನವೀನ್ ಡಿಸೋಜ ಮಾಲೀಕತ್ವದ ಮಂಜುಸುವರ್ಣ ನಾಯಕತ್ವದ ಪವರ್ ಹಿಟ್ಟರ್ಸ್ ತಂಡ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತ್ತು. ನಿಗದಿತ 8 ಓವರ್‌ನಲ್ಲಿ 3 ವಿಕೆಟ್ ನಷ್ಟಕ್ಕೆ 79ರನ್ ಕಲೆ ಹಾಕಿತು. ಗುರಿ ಬೆನ್ನಟ್ಟಿದ ರಾಕೇಶ್ ಮಾಲೀಕತ್ವದ ಆದರ್ಶ್ ಅದ್ಕಲೇಗಾರ್ ನಾಯಕತ್ವದ ಮೀಡಿಯಾ ಮಾಸ್ಟರ್ಸ್ ತಂಡ 5.3 ಓವರ್‌ನಲ್ಲಿ ಗೆಲುವಿನ ದಡ ಸೇರಿತು. 2ನೇ ಪಂದ್ಯದಲ್ಲಿ ಟಾಸ್ ಗೆದ್ದ ಮೀಡಿಯಾ ಮಾಸ್ಟರ್ಸ್ ತಂಡ ನಿಗದಿತ 8 ಓವರ್‌ನಲ್ಲಿ 3 ವಿಕೆಟ್ ಕಳೆದುಕೊಂಡು 113 ರನ್ ಕೆಲೆ ಹಾಕಿತು. ತಂಡದ ಪರ ಆದರ್ಶ್ 51 ರನ್, ಪ್ರೇಮ್ 13 ರನ್ ಕಲೆ ಹಾಕಿದರು. ಗುರಿಬೆನ್ನಟ್ಟಿದ ಪವರ್ ಹಿಟ್ಟರ್ಸ್ ತಂಡ 88ರನ್ ಗಳಿಸಲಷ್ಟೇ ಶಕ್ತವಾಗಿ ಸೋಲುಂಡಿತ್ತು. ತಂಡದ ಪರ ಲೋಗಿತ್ ಮಾಗುಲು 26, ಮಂಜು ಸುವರ್ಣ 24, ನವೀನ್ ಡಿಸೋಜ 20, ವಿನೋದ್ 13 ರನ್ ಕಲೆ ಹಾಕಿದರು. 3ನೇ ಪಂದ್ಯದಲ್ಲಿ ಟಾಸ್ ಗೆದ್ದ ಮೀಡಿಯಾ ಮಾಸ್ಟರ್ಸ್ ತಂಡ ನಿಗದಿತ ಓವರ್‌ನಲ್ಲಿ 2 ವಿಕೆಟ್ ನಷ್ಟಕ್ಕೆ 64 ರನ್ ಕಲೆ ಹಾಕಿತು. ತಂಡದ ಪರ ರಾಕೇಶ್ 22, ನಾಸೀರ್ 18, ಸಂತೋಷ್ ರೈ 11 ಕಲೆ ಹಾಕಿದರು. ಗುರಿಬೆನ್ನಟ್ಟಿದ ಪವರ್ ಹಿಟ್ಟರ್ಸ್ ತಂಡ 7.2 ಓವರ್‌ನಲ್ಲಿ ಗೆಲುವಿನ ದಡ ಸೇರಿತು. ಬೆಸ್ಟ್ ಆಫ್ ತ್ರಿ ಪಂದ್ಯಾಟದ 2 ಪಂದ್ಯದಲ್ಲಿ ಗೆಲುವು ಸಾಧಿಸಿ ಮೀಡಿಯಾ ಮಾಸ್ಟರ್ಸ್ ಚಾಂಪಿಯನ್ ಪಟ್ಟ ಅಲಂಕರಿಸಿದರೆ, 1 ಪಂದ್ಯವನ್ನು ಗೆದ್ದ ಪವರ್ ಪವರ್ ಹಿಟ್ಟರ್ಸ್ ತಂಡ ರನ್ನರ್ ಅಪ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿತು. ಸಮಾರೋಪ ಸಮಾರಂಭ: ನಗರದ ಪತ್ರಿಕಾ ಭವನದಲ್ಲಿ ಬಹುಮಾನ ವಿತರಣಾ ಸಮಾರಂಭ ನಡೆಯಿತು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ನಿರ್ದೇಶಕಿ ಬಿ.ಆರ್.ಸವಿತಾ ರೈ ಮಾತನಾಡಿ, ಪತ್ರಕರ್ತರು ಒಂದುಗೂಡಲು ಕ್ರೀಡಾಕೂಟ ವೇದಿಕೆಯಾಗಿದೆ. ಇದು ಕ್ರೀಡೆ ಸಾಮರಸ್ಯ ಮೂಡಿಸುತ್ತದೆ. ಸ್ನೇಹ ಭಾವನೆ ಹೆಚ್ಚಿಸಿ ಒಗ್ಗಟ್ಟು ಸೃಷ್ಟಿಸುತ್ತದೆ ಎಂದರು. ಕ್ರಿಕೆಟ್ ಪಂದ್ಯಾಟದಲ್ಲಿ ಹೆಣ್ಣು ಮಕ್ಕಳಿಗೆ ಅವಕಾಶಕೊಟ್ಟಿದ್ದು ಶ್ಲಾಘನೀಯ ಎಂದ ಅವರು, ಸೌಹಾರ್ದ ಕ್ರಿಕೆಟ್ ಪಂದ್ಯಾಟ ಸಮ್ಮಿಲನದ ಕ್ರಿಕೆಟ್ ಆಗಿದೆ. ಪಂದ್ಯಾಟ ಖುಷಿ ಕೊಟ್ಟಿದೆ. ಇಂತಹ ಕ್ರೀಡಾಕೂಟ ನಮ್ಮ ಬಾಂಧವ್ಯವನ್ನು ಹೆಚ್ಚಿಸುವುದರೊಂದಿಗೆ ಆರೋಗ್ಯ ವೃದ್ಧಿಗೆ ಸಹಕಾರಿಯಾಗಿದೆ. ಅಲ್ಪ ಸಮಯದಲ್ಲಿ ಉತ್ತಮವಾಗಿ ಆಯೋಜನೆ ಮಾಡಿರುವುದು ಶ್ಲಾಘನೀಯ ಎಂದರು. ಕೊಡಗು ಪ್ರೆಸ್ ಕ್ಲಬ್ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಮಾತನಾಡಿ, ಕ್ರೀಡೆ ಆರೋಗ್ಯಕ್ಕೆ ಸಹಕಾರಿಯಾಗಿದೆ ಎಂದರು. ಉದ್ಯಮಿ ವಿನು ಕುಶಾಲಪ್ಪ ಮಾತನಾಡಿ, ಪತ್ರಕರ್ತರು ಎಂದರೆ ಸಾದಾ ಸುದ್ದಿ ಹಿಂದೆ ಇರುತ್ತಾರೆ. ಇದರಿಂದ ಹೊರಬರಲು ಮತ್ತು ಮನಸ್ಸು ಹತೋಟಿಯಲ್ಲಿಡಲು ಕ್ರೀಡೆ ಸಹಕಾರಿಯಾಗಿದೆ. ಆದ್ದರಿಂದ ಇಂತಹ ಕ್ರೀಡಾಕೂಟಗಳು ಹೆಚ್ಚಾಗಿ ಆಯೋಜನೆ ಮಾಡುವಂತಾಗಬೇಕು ಎಂದರು. ಕೊಡಗು ಪ್ರೆಸ್ ಕ್ಲಬ್ ಉಪಾಧ್ಯಕ್ಷ ಮಂಜು ಸುವರ್ಣ ಮಾತನಾಡಿ, ಆಟದಲ್ಲಿ ಸೋಲು ಗೆಲುವು ಸಾಮಾನ್ಯ. ಆದರೆ, ಕ್ರೀಡಾಕೂಟ ಆಯೋಜನೆಗೆ ಎಲ್ಲರ ಸಹಕಾರಿ ಅಗತ್ಯ ಎಂದ ಅವರು, ಕ್ರೀಡಾಕೂಟಕ್ಕೆ ನಮ್ಮ ತಂಡ ಕಾರ್ಯ ನಿವರ್ಹಿಸಿದೆ ಎಂದರು. ಸೌಹಾರ್ದ ಕ್ರಿಕೆಟ್ ಪಂದ್ಯಾಟದ ಸಂಚಾಲಕ ವಿಘ್ನೇಶ್ ಭೂತನಕಾಡು ಮಾತನಾಡಿ, ಪತ್ರಕರ್ತರು ಪ್ರತಿದಿನ ಸುದ್ದಿಯ ಒತ್ತಡದಲ್ಲಿರುತ್ತೇವೆ. ಆದ್ದರಿಂದ ಪತ್ರಕರ್ತರಿಗೆ ಕ್ರೀಡೆ ಅನಿವಾರ್ಯ. ಅದೇ ರೀತಿ ಕ್ರೀಡಾಕೂಟಗಳು ಪತ್ರಕರ್ತರಿಗೋಸ್ಕರ ಆಯೋಜನೆ ಮಾಡಿರುವುದು ಶ್ಲಾಘನೀಯ ಎಂದ ಅವರು, ದಾನಿಗಳ ಸಹಕಾರದಿಂದ ಕ್ರೀಡಾಕೂಟ ಯಶಸ್ವಿಯಾಗಿದೆ ಎಂದರು. ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕ್ರೀಡಾ ಸಮಿತಿ ಸಂಚಾಲಕ ಸಂತೋಷ್ ರೈ ಮಾತನಾಡಿದರು. ಹೆಚ್.ಜೆ.ರಾಕೇಶ್ ನಿರೂಪಿಸಿ, ಸ್ವಾಗತಿಸಿ, ವಂದಿಸಿದರು.









