
ಮಡಿಕೇರಿ ಮೇ 29 NEWS DESK : ವಿದ್ಯುತ್ ಇಲಾಖೆಗೆ ಸಂಬಂಧಿಸಿದಂತೆ ಸಾರ್ವಜನಿಕರು/ ಗ್ರಾಹಕರು ಕ್ರಮವನ್ನು ಗಮನಿಸಿ ಪಾಲಿಸಬೇಕಾಗಿ ಇಲಾಖೆಯು ವಿನಂತಿಸುತ್ತಿದೆ. ಗೃಹ ಬಳಕೆ ವಿದ್ಯುತ್ ಗ್ರಾಹಕರು ಗಮನಿಸಬೇಕಾದ ಅಂಶಗಳು: ವಿದ್ಯುತ್ ಅವಘಡಗಳನ್ನು ತಪ್ಪಿಸಲು ಸುರಕ್ಷತಾ ನಿಯಮಗಳನ್ನು ತಪ್ಪದೇ ಪಾಲಿಸಬೇಕು. ಎಲ್ಲಾ ವಿದ್ಯುತ್ ಕಾಮಗಾರಿಗಳನ್ನು ಎಷ್ಟೇ ಚಿಕ್ಕದಿರಲಿ, ಪರಿಣಿತ ವ್ಯಕ್ತಿಗಳಿಂದ ನಿರ್ವಹಿಸಬೇಕು. ಭಾರತೀಯ ಗುಣಮಟ್ಟ ಸಂಸ್ಥೆಯ (ಐಎಸ್‍ಐ) ಪ್ರಮಾಣೀಕೃತ ವಿದ್ಯುತ್ ಉಪಕರಣ, ಕೇಬಲ್, ವೈರ್ ಹಾಗೂ ಸುರಕ್ಷತಾ ಉಪಕರಣಗಳನ್ನು ಬಳಸಬೇಕು. ವಿದ್ಯುತ್ ಸ್ಥಾವರದಲ್ಲಿ ಪರಿಣಾಮಕಾರಿ ಭೂಸಂಪರ್ಕ ವ್ಯವಸ್ಥೆ ಕಲ್ಪಿಸಿ, ನಿರ್ವಹಿಸಬೇಕಾಗಿರುತ್ತದೆ. ಜೀವ ರಕ್ಷಕ ಆರ್‍ಸಿಡಿ ಗಳನ್ನು ಬಳಸಿ ವಿದ್ಯುತ್ ಸೋರಿಕೆಯಿಂದ ಉಂಟಾಗುವ ಅಪಾಯವನ್ನು ತಪ್ಪಿಸುವುದು. ಭಾರಿ ವಿದ್ಯುತ್ ಪರಿಕರಗಳಾದ ರೆಫ್ರಿಜರೇಟರ್, ಮಿಕ್ಸರ್, ಘೀಸರ್, ವಾಷಿಂಗ್ ಮಷಿನ್ ಮುಂತಾದವುಗಳಿಗೆ ಮೂರು ಪಿನ್ ಪ್ಲಗ್ ಸಾಕೆಟ್ಸ್‍ಗಳಿರುವ ಪ್ರತ್ಯೇಕ ಸ್ವಿಚ್ ನಿಯಂತ್ರಣದಿಂದಲೇ ವಿದ್ಯುತ್ ಸರಬರಾಜು ಕಲ್ಪಿಸಿ, ಮೂರನೇ ಪಿನ್‍ಗೆ ಭೂಸಂಪರ್ಕ ಕಲ್ಪಿಸಬೇಕಿದೆ. ವಿದ್ಯುತ್ ಸ್ವಿಚ್ ಹಾಗೂ ಸಾಕೆಟ್‍ಗಳನ್ನು ಕೈಗೆ ಎಟುಕುವ ಎತ್ತರದಲ್ಲಿ ಮಕ್ಕಳಿಗೆ ಸಿಗದ ಹಾಗೆ ಅಳವಡಿಸಬೇಕು. ಒದ್ದೆಯಾದ ಕೈಗಳಿಂದ ವಿದ್ಯುತ್ ಸ್ವಿಚ್‍ಗಳನ್ನು ಮುಟ್ಟಬಾರದು. ವಿದ್ಯುತ್ ಪ್ಲಗ್ ಅನ್ನು ಸಾಕೆಟ್‍ನಲ್ಲಿ ಅಳವಡಿಸುವ ಅಥವಾ ಅದರಿಂದ ತೆಗೆಯುವ ಮುಂಚಿತವಾಗಿ ಸ್ವಿಚ್‍ಅನ್ನು ಆಫ್ ಮಾಡಿ ವಿದ್ಯುತ್ ಸರಬರಾಜನ್ನು ಕಡಿತಗೊಳಿಸಬೇಕು. ನಿಯತಕಾಲಿಕವಾಗಿ ವಿದ್ಯುತ್ ಸ್ಥಾವರವನ್ನು ಪರಿಶೀಲನೆಗೆ ಒಳಪಡಿಸಿ ಸುಸ್ಥಿತಿಯಲ್ಲಿ ನಿರ್ವಹಿಸಬೇಕಾಗಿರುತ್ತದೆ. ಗೃಹ ಬಳಕೆ ವಿದ್ಯುತ್ ಗ್ರಾಹಕರು ಮಾಡಬಾರದ ಅಂಶಗಳು: ಅತಿಯಾದ ವಿಶ್ವಾಸದಿಂದ ವಿದ್ಯುತ್ ಕಾಮಗಾರಿಗಳನ್ನು ಸ್ವತಃ ನಿರ್ವಹಿಸಬಾರದು. ನಿಯಂತ್ರಣ ಸ್ವಿಚ್‍ಅನ್ನು ಆಫ್ ಮಾಡದೇ ಫ್ಯೂಸ್ ಔಟ್ ಆಗಿರುವ ಬಲ್ಬ್‍ಅನ್ನು ಬದಲಾಯಿಸಬಾರದು. ಎಕ್ಟ್‍ಟೆನ್ಷನ್ ಕಾರ್ಡ್‍ಗಳನ್ನು ಬಳಸಿ ವಿದ್ಯುತ್ ಮಂಡಲದ ಮೇಲೆ ಹೆಚ್ಚು ಭಾರವನ್ನು ಹಾಕಬಾರದು. ಮನೆಯ ಛಾವಣೆಯ ಮೇಲೆ ಬಟ್ಟೆಯನ್ನು ಒಣಗಿಸಲು/ ಆಂಟೆನಾಗಳನ್ನು ಅಳವಡಿಸಲು ಬಳಸಲಾಗುವ ಕಂಬಗಳಿಗೆ ಸ್ಟೇ ತಂತಿಗಳನ್ನು ಸರ್ವಿಸ್ ಪೋಲ್‍ಗಳಿಗೆ ಬಿಗಿಯಬಾರದು. ವಿದ್ಯುತ್ ಕಂಬಗಳನ್ನು ಆಧಾರವಾಗಿ ಬಳಸಿ ಬಟ್ಟೆ ಒಣಗಿಸಲು ಸ್ಟೇ ತಂತಿಯನ್ನು ಬಿಗಿಯಬಾರದು. ಸಾರ್ವಜನಿಕರಿಗೆ ವಿದ್ಯುತ್ ಸುರಕ್ಷಿತ ಮಾರ್ಗಸೂಚಿಗಳು: ಜಾತ್ರಾ ಮಹೋತ್ಸವದ ಸಮಯದಲ್ಲಿ ರಥಗಳನ್ನು ಬೀದಿಯಲ್ಲಿ ಸಾಗಿಸುವ ಮುಂಚಿತವಾಗಿ ಸ್ಥಳೀಯ ವಿದ್ಯುತ್ ಸರಬರಾಜುದಾರರ ಸಹಾಯವನ್ನು ಪಡೆದುಕೊಳ್ಳತಕ್ಕದ್ದು. ವಿದ್ಯುತ್ ಮಾರ್ಗಗಳ ಎತ್ತರಕ್ಕಿಂತ ಹೆಚ್ಚು ಇರುವ ವಾಹನ/ ಎತ್ತಿನಗಾಡಿ, ಏಣಿ, ಇತರೆ ವಸ್ತುಗಳನ್ನು ವಿದ್ಯುತ್ ಮಾರ್ಗದ ಕೆಳಗೆ ಸಾಗಿಸಬಾರದು. ವಿದ್ಯುತ್ ಮಾರ್ಗದ ಕಂಬಗಳನ್ನು ಜಾಹೀರಾತು ಫಲಕ/ ಕಾರ್ಯಕ್ರಮದ ಪೆಂಡಾಲ್‍ಗಳಿಗೆ ಆಧಾರವನ್ನಾಗಿ ಬಳಸಬಾರದು. ವಿದ್ಯುತ್ ಮಾರ್ಗದ ಸಮೀಪ ನಿಯಮಾನುಸಾರ ಅಂತರದೊಳಗೆ ಮರ ಗಿಡಗಳನ್ನು ಬೆಳೆಸಬಾರದು. ವಿದ್ಯುತ್ ಮಾರ್ಗದ ಕಂಬ ಅಥವಾ ಪರಿವರ್ತಕ ಕೇಂದ್ರದ ಕಂಬದ ಹತ್ತಿರ ಮೂತ್ರ ವಿಸರ್ಜನೆ ಮಾಡಬಾರದು. ತಂತಿ ಬೇಲಿಗೆ ವಿದ್ಯುತ್ ವಿತರಣಾ ವ್ಯವಸ್ಥೆಯಿಂದ ಅಕ್ರಮವಾಗಿ ವಿದ್ಯುತ್ ಸಂಪರ್ಕವನ್ನು ನೀಡಬಾರದು. ಬದಲಾಗಿ ಭಾರತೀಯ ಮಾನಕ ಬ್ಯೂರೋ ಪ್ರಮಾಣೀಕೃತ ಫೆನ್ಸ್ ಎನೆರ್ಜೈಸರ್‍ಅನ್ನು ಬಳಸಿ ತಂತಿ ಬೇಲಿಗೆ ವಿದ್ಯುತ್ ಸಂಪರ್ಕ ಅಧಿಕೃತವಾಗಿ ನೀಡಬಹುದು. ಶಾಲೆಗೆ ಸಾಗುವ ದಾರಿಯಲ್ಲಿ ಮತ್ತು ಶಾಲೆಯ ಆವರಣದಲ್ಲಿ ಅಳವಡಿಸಲಾಗುವ ಡಿಸ್ಟ್ರಿಬ್ಯೂಷನ್ ಬೋರ್ಡ್, ಜಂಕ್ಷನ್ ಬಾಕ್ಸ್ ಅಥವಾ ಬೀದಿ ದೀಪದ ಕಂಟ್ರೋಲ್ ಬಾಕ್ಸ್‍ಅನ್ನು ಮುಚ್ಚಿರುವಂತೆ ನಿರ್ವಹಿಸುವುದು. ಸಿಡಿಲು ಅಥವಾ ಮಳೆ ಬೀಳುವ ಸಂದರ್ಭದಲ್ಲಿ ಎತ್ತರವಾದ ಮರಗಳ ಕೆಳಗೆ ನಿಲ್ಲಬಾರದು ಅಥವಾ ಮರದಿಂದ ಕನಿಷ್ಟ 10 ಮೀಟರ್ ಅಂತರದಲ್ಲಿ ನಿಲ್ಲಬೇಕು. ಸಿಡಿಲು ಉಂಟಾಗುವ ಸಮಯದಲ್ಲಿ ವಿದ್ಯುತ್ ಮಾರ್ಗವನ್ನು ಹೊತ್ತ ಕಂಬ, ಧ್ವಜ ಸ್ಥಂಬ ಅಥವಾ ಆಂಟೆನಾ ಅಳವಡಿಸಿರುವ ಸ್ಟ್ರಕ್ಚರ್ ಅಥವಾ ಕಂಬದಿಂದ ಕನಿಷ್ಟ 3 ಮೀಟರ್ ಅಂತರದಲ್ಲಿ ನಿಲ್ಲಬೇಕು. ಸಿಡಿಲು ಉಂಟಾಗುವ ಸಮಯದಲ್ಲಿ ಕಾಲುಗಳನ್ನು ಜೋಡಿಸಿ, ತಲೆಯನ್ನು ಕಾಲುಗಳ ಮದ್ಯೆ ಸೇರಿಸಿ, ಕಾಲುಗಳನ್ನು ಕೈಗಳಿಂದ ಬಳಸಿ, ಮತ್ತೊಬ್ಬ ವ್ಯಕ್ತಿಯಿಂದ ಸುಮಾರು 3 ಮೀಟರ್ ಅಂತರದಲ್ಲಿ ಕೂರಬೇಕು. ಕೈಗಾರಿಕಾ ಗ್ರಾಹಕರಿಗೆ ವಿದ್ಯುತ್ ಸುರಕ್ಷಿತ ಮಾರ್ಗಸೂಚಿಗಳು: ವಿದ್ಯುತ್ ಕಾಮಗಾರಿಗಳನ್ನು ಸರ್ಕಾರದಿಂದ ಮಾನ್ಯತೆ ಪಡೆದ ವಿದ್ಯುತ್ ಗುತ್ತಿಗೆದಾರರಿಂದಲೇ ನಿರ್ವಹಿಸಬೇಕು. ವಿದ್ಯುತ್ ಸ್ವಿಚ್ ಬೋರ್ಡ್ ಅಥವಾ ಪ್ಯಾನೆಲ್‍ನ ಮುಂಭಾಗ ಹಾಗೂ ಹಿಂಭಾಗದ ಪ್ರದೇಶದಲ್ಲಿ ಸೂಕ್ತವಾದ ಅಂತರ ನಿರ್ವಹಿಸಬೇಕು. ವಿದ್ಯುತ್ ಸ್ವಿಚ್ ಬೋರ್ಡ್ ಅಥವಾ ಪ್ಯಾನೆಲ್‍ನ ಸುತ್ತ ದಹಿಸುವ ಮತ್ತು ದಹ್ಯ ವಸ್ತುಗಳನ್ನು ಶೇಖರಿಸಿಡಬಾರದು. ವಿದ್ಯುತ್ ಸ್ವಿಚ್ ಬೋರ್ಡ್ ಅಥವಾ ಪ್ಯಾನೆಲ್ ಕನಿಷ್ಟ ಐಪಿ-44 ಗುಣಮಟ್ಟದ್ದಾಗಿರಬೇಕು. ವಿದ್ಯುತ್ ಸ್ವಿಚ್ ಬೋರ್ಡ್ ಅಥವಾ ಪ್ಯಾನೆಲ್ ಅನ್ನು ದೃಢವಾಗಿ ನೆಲದಲ್ಲಿ ಅಳವಡಿಸಿರಬೇಕು. ವಿದ್ಯುತ್ ಸ್ವಿಚ್ ಬೋರ್ಡ್ ಅಥವಾ ಪ್ಯಾನೆಲ್‍ನ ಮುಂಭಾಗದಲ್ಲಿ ವಿದ್ಯುತ್ ಶ್ರೇಣಿಯ ರಬ್ಬರ್ ಮ್ಯಾಟ್ ಅನ್ನು ಅಳವಡಿಸಿರಬೇಕು. ವ್ಯಕ್ತಿಗಳು ಕಾಮಗಾರಿ ಕೆಲಸದಲ್ಲಿ ತೊಡಗಿರುತ್ತಾರೆ ಎಂಬ ನಾಮಫಲಕವನ್ನು ಪ್ಯಾನೆಲ್ ಬೋರ್ಡ್‍ನಲ್ಲಿ ಪ್ರದರ್ಶಿಸಿದ ನಂತರ ಕಾಮಗಾರಿ ಕೆಲಸದಲ್ಲಿ ತೊಡಗಿಸಿಕೊಳ್ಳುವುದು. ವಿದ್ಯುತ್ ಮಂಡಲಗಳು ನಿರ್ಜೀವವಾಗಿದೆ ಎಂದು ಖಾತ್ರಿ ಪಡಿಸಿಕೊಳ್ಳುವವರೆಗೆ ಎಲ್ಲಾ ಮಂಡಲಗಳು ಚೇತನದಲ್ಲಿವೆ ಎಂದು ಪರಿಗಣಿಸುವುದು. ಹೆಚ್ಚುವರಿ ಸುರಕ್ಷತೆಗಾಗಿ ಪ್ಯಾನೆಲ್ ಬೋರ್ಡ್‍ನಲ್ಲಿನ ಫ್ಯೂಸ್‍ಗಳನ್ನು ತೆಗೆದು ಕೆಲಸ ನಿರ್ವಹಿಸುವುದು. ವಿದ್ಯುತ್ ಸ್ವಿಚ್‍ಗಳನ್ನು ಆಪರೇಟ್ ಮಾಡುವ ಮುಂಚಿತವಾಗಿ, ಅವುಗಳು ನಿಯಂತ್ರಿಸುವ ಮಂಡಲಗಳ ಬಗ್ಗೆ ಮನದಟ್ಟು ಮಾಡಿಕೊಳ್ಳಬೇಕು. ವಿದ್ಯುತ್ ಸ್ವಿಚ್‍ಗಳನ್ನು ಅರೆಮನಸ್ಸಿನಿಂದ ಅಥವಾ ಹಿಂಜರಿಕೆಯಿಂದ ಆಪರೇಟ್ ಮಾಡದೇ ತ್ವರಿತವಾಗಿ ಆಪರೇಟ್ ಮಾಡಬೇಕು. ವಿದ್ಯುತ್ ಚೇತನವಿರುವ ಪ್ಯಾನೆಲ್ ಅಥವಾ ಮಂಡಲದಲ್ಲಿ ಕೆಲಸ ನಿರ್ವಹಿಸುವ ಮುಂಚಿತವಾಗಿ, ಅದನ್ನು ನಿಶ್ಚೇತನಗೊಳಿಸಿದ ನಂತರ ಸೂಕ್ತ ಸಾಮಥ್ರ್ಯದ ರಬ್ಬರ್ ಕೈ ಚೀಲ, ಬೂಟುಗಳನ್ನು ಧರಿಸಿಕೊಂಡು, ನಿರೋಧಕ ಕವಚವಿರುವ ಸಲಕರಣೆ ಬಳಸಿ ಕೆಲಸ ನಿರ್ವಹಿಸಬೇಕು. ವಿದ್ಯುತ್ ಮಂಡಲ ಅಥವಾ ವಾಹಕವನ್ನು ನಿಶ್ಚೇತನಗೊಳಿಸಿದ ನಂತರ ಅವುಗಳಲ್ಲಿ ಕಾರ್ಯ ನಿರ್ವಹಿಸುವ ಮುಂಚಿತವಾಗಿ ನಿಶ್ಚೇತನಗೊಳಿಸಿರುವ ಹಾಗೂ ಭೂಸಂಪರ್ಕಗೊಳಿಸಿರುವ ಬಗ್ಗೆ ಖಚಿತಪಡಿಸಿಕೊಂಡ ನಂತರ ಕೆಲಸ ನಿರ್ವಹಿಸಬೇಕು. ವಿದ್ಯುತ್ ಮಂಡಲ ಅಥವಾ ವಾಹಕ ನಿಶ್ಚೇತನಗೊಂಡಿರುವ ಬಗ್ಗೆ ಪರೀಕ್ಷಿಸಲು ಖಾಲಿ ಬೆರಳು ಅಥವಾ ಕೈಗಳನ್ನು ಬಳಸಬಾರದು. ವಿದ್ಯುತ್ ಉಪಕರಣದಲ್ಲಿ ಬೆಂಕಿ ಉಂಟಾದರೆ ಅದನ್ನು ನಂದಿಸಲು ನೀರನ್ನು ಬಳಸಬಾರದು ಹಾಗೂ ಬೆಂಕಿಯನ್ನು ನಂದಿಸಲು ಸೂಕ್ತವಾದ ಅಗ್ನಿಶಾಮಕ ಸಾಧನವನ್ನು ಬಳಸಬೇಕು. ವಿದ್ಯುತ್ ಸ್ಥಾವರವನ್ನು ನಿಯತಕಾಲಿಕವಾಗಿ ಪರಿಣಿತ ವ್ಯಕ್ತಿಗಳಿಂದ ಪರೀಕ್ಷಿಸಿ, ಸುಸ್ಥಿತಿಯಲ್ಲಿಟ್ಟುಕೊಳ್ಳಬೇಕು. ವಿದ್ಯುತ್ ಸರಬರಾಜುದಾರರ ಕೆಲಸಗಾರರ ವಿದ್ಯುತ್ ಸುರಕ್ಷತೆಯ 10 ತತ್ವಗಳು: ಕೆಲಸಗಳ ಬಗ್ಗೆ ಒಂದು ಯೋಜನೆ ತಯಾರಿಸಿ ಅದರಂತೆ ಮುಂದುವರಿದರೆ ಅವಘಡವನ್ನು ತಪ್ಪಿಸಬಹುದು. ವಿದ್ಯುತ್ ಮಾರ್ಗ ವಿತರಣೆಯ ವ್ಯವಸ್ಥೆಯಲ್ಲಿ ಅನಿರೀಕ್ಷಿತ ಘಟನೆಗಳ ಬಗ್ಗೆ ನಿರೀಕ್ಷಣೆ ಮಾಡಿ ಅದರ ಬಗ್ಗೆ ಮುಂಜಾಗೃತಾ ಕ್ರಮ ತೆಗೆದುಕೊಂಡರೆ ಅವಘಡವನ್ನು ತಪ್ಪಿಸಬಹುದು. ವಿದ್ಯುತ್ ವಿತರಣಾ ವ್ಯವಸ್ಥೆಯಲ್ಲಿ ಕೆಲಸ ನಿರ್ವಹಿಸುವ ಮುಂಚಿತವಾಗಿ, ಅದರಲ್ಲಿ ಉಂಟಾಗಬಹುದಾದ ಸಂಭಾವ್ಯ ಅಪಾಯಗಳ ಬಗ್ಗೆ ಗುರುತಿಸಿ, ಸೂಕ್ತವಾದ ಸಲಕರಣೆಯನ್ನು ಬಳಸಿ ಕೆಲಸವನ್ನು ನಿರ್ವಹಿಸಿದರೆ ಕೆಲಸವನ್ನು ಆದಷ್ಟು ಜಾಗೃತವಾಗಿ ನಿರ್ವಹಿಸಬಹುದು. ವಿದ್ಯುತ್ ವಿತರಣಾ ವ್ಯವಸ್ಥೆಯಲ್ಲಿ ಕಾರ್ಯವಿಧಾನಗಳನ್ನು ಕೇವಲ ಕಾಗದದ ಮೇಲಿನ ಬರವಣಿಗೆಯನ್ನಾಗಿ ಬಳಸದೇ ಕೆಲಸದಲ್ಲಿ ಸಲಕರಣೆಯನ್ನಾಗಿ ಬಳಸಿದರೆ ಅವಘಡವನ್ನು ತಪ್ಪಿಸಬಹುದು. ಕೆಲಸ ನಿರ್ವಹಿಸಬೇಕಾಗಿರುವ ಉಪಕರಣದಲ್ಲಿ ಕೆಲಸ ನಿರ್ವಹಿಸುವ ಮುಂಚಿತವಾಗಿ ವಿದ್ಯುತ್ ಸರಬರಾಜಿನಿಂದ ಪ್ರತ್ಯೇಕಿಸುವುದು. ವಿದ್ಯುತ್ ವಿತರಣಾ ವ್ಯವಸ್ಥೆಯಲ್ಲಿ ಕೆಲಸ ನಿರ್ವಹಿಸುವ ಸಂದರ್ಭದಲ್ಲಿ ಉಂಟಾಗಬಹುದಾದ ಸಂಭಾವ್ಯ ಅಪಾಯಗಳ ಅರಿವಿನ ಜೊತೆಯಲ್ಲಿ ಅವುಗಳ ತೀವ್ರತೆ ಕಡಿಮೆಯಾಗುವಂತೆ ಕ್ರಮ ಕೈಗೊಳ್ಳಬೇಕು. ವಿದ್ಯುತ್ ವಿತರಣಾ ವ್ಯವಸ್ಥೆಯಲ್ಲಿ ಕೆಲಸ ನಿರ್ವಹಿಸುವ ಮುಂಚಿತವಾಗಿ ಸುರಕ್ಷತಾ ಉಪಕರಣಗಳನ್ನು (ಪಿಪಿಎಫ್) ಧರಿಸಿ ಕೆಲಸ ನಿರ್ವಹಿಸಬೇಕು. ವಿದ್ಯುತ್ ವಿತರಣಾ ವ್ಯವಸ್ಥೆಯಲ್ಲಿ ಕೆಲಸ ನಿರ್ವಹಿಸುವ ವ್ಯಕ್ತಿಯು ದೈಹಿಕವಾಗಿ, ಮಾನಸಿಕವಾಗಿ ಹಾಗೂ ಭಾವನಾತ್ಮಕವಾಗಿ ಕೆಲಸ ನಿರ್ವಹಿಸುವಂತರಾಗಿರಬೇಕು. ವಿದ್ಯುತ್ ಸುರಕ್ಷತೆಯು ಪ್ರತಿಯೊಬ್ಬರ ಜವಾಬ್ದಾರಿ ಎಂದು ಅರಿತು ನಿಗಾ ವಹಿಸಬೇಕು.
ಈ ಎಲ್ಲಾ ತತ್ವಗಳನ್ನು ಕಾಲಕಾಲಕ್ಕೆ ಪರಿಶೋಧನೆ ಮಾಡಿ ಅವುಗಳ ಯಶಸ್ವಿ ಅನುಷ್ಟಾನಕ್ಕೆ ಮಾನದಂಡವನ್ನಾಗಿ ಬಳಸಬೇಕು. ವಿದ್ಯುತ್ ಸುರಕ್ಷತಾ ಕ್ರಮಗಳು: ತುಂಡಾಗಿ ನೆಲದಲ್ಲಿ ಬಿದ್ದಿರುವ, ತುಂಡಾಗಿ ಮರದ ಮೇಲೆ ಬಿದ್ದಿರುವ ಅಥವಾ ಜೋತು ಬಿದ್ದಿರುವ ವಿದ್ಯುತ್ ತಂತಿಗಳು ಕಂಡುಬಂದಲ್ಲಿ, ಅದನ್ನು ಸ್ಥಳಾಂತರಿಸುವ ಪ್ರಯತ್ನ ಮಾಡಬಾರದು ಹಾಗೂ ತಂತಿಯಿಂದ ಕನಿಷ್ಟ 10 ಮೀಟರ್ ಅಂತರದಲ್ಲಿರಬೇಕು. ಕೂಡಲೇ ಸ್ಥಳೀಯ ವಿದ್ಯುತ್ ಸರಬರಾಜುದಾರರ ಕಚೇರಿಗೆ ವಿಷಯ ತಿಳಿಸಬೇಕು. ಬಟ್ಟೆಯನ್ನು ಒಣಗಿಸಲು/ಆಂಟೆನಾಗಳನ್ನು ಅಳವಡಿಸಲು ಬಳಸಲಾಗುವ ಕಂಬಗಳಿಗೆ ಸ್ಟೇ ತಂತಿಗಳನ್ನು, ಸರ್ವಿಸ್ ಪೋಲ್ ಅಥವಾ ವಿದ್ಯುತ್ ದೀಪದ ಫಿಟ್ಟಿಂಗ್ ಇರುವ ಪೋಲ್‍ಗಳಿಗೆ ಬಿಗಿಯಬಾರದು. ವಿದ್ಯುತ್ ಮಾರ್ಗವನ್ನು ಹೊತ್ತ ಕಂಬಗಳಿಗೆ ಜಾನುವಾರುಗಳನ್ನು ಕಟ್ಟಬಾರದು. ವಿದ್ಯುತ್ ಮಾರ್ಗಗಳ ಸಮೀಪ ಗಾಳಿಪಟ ಅಥವಾ ಡ್ರೋನ್‍ಗಳನ್ನು ಹಾರಿಸಬಾರದು. ನಿಯಂತ್ರಣ ಸ್ವಿಚ್‍ಅನ್ನು ಆಫ್ ಮಾಡದೇ ಫ್ಯೂಸ್ ಔಟ್ ಆಗಿರುವ ಬಲ್ಬ್‍ಅನ್ನು ಬದಲಾಯಿಸಬಾರದು. ತಂತಿ ಬೇಲಿಗೆ ವಿದ್ಯುತ್ ವಿತರಣಾ ವ್ಯವಸ್ಥೆಯಿಂದ ನೇರವಾಗಿ ವಿದ್ಯುತ್ ಸಂಪರ್ಕವನ್ನು ಅಕ್ರಮವಾಗಿ ನೀಡಬಾರದು. ಬದಲಾಗಿ ಭಾರತೀಯ ಮಾನಕ ಬ್ಯೂರೋ ಪ್ರಮಾಣೀಕೃತ ಫೆನ್ಸ್ ಎನೆರ್ಜೈಸರ್‍ಅನ್ನು ಬಳಸಿ ತಂತಿ ಬೇಲಿಗೆ ವಿದ್ಯುತ್ ಸಂಪರ್ಕವನ್ನು ಅಧಿಕೃತವಾಗಿ ನೀಡಬಹುದು. ವಿದ್ಯುತ್ ಮಾರ್ಗಗಳ ಎತ್ತರಕ್ಕಿಂತ ಹೆಚ್ಚು ಇರುವ ವಾಹನ/ ಎತ್ತಿನಗಾಡಿ, ಏಣಿ, ಇತರೆ ವಸ್ತುಗಳನ್ನು ವಿದ್ಯುತ್ ಮಾರ್ಗದ ಕೆಳಗೆ ಸಾಗಿಸಬಾರದು. ವಿದ್ಯುತ್ ಮಾರ್ಗದ ಸಮೀಪದಲ್ಲಿ ಕಟ್ಟಡವನ್ನು (ಖಾಯಂ ಅಥವಾ ತಾತ್ಕಾಲಿಕ) ನಿರ್ಮಾಣ ಮಾಡಬಾರದು, ಒಂದು ವೇಳೆ ನಿರ್ಮಾಣ ಮಾಡಲೇ ಬೇಕಾದರೆ, ಸ್ಥಳೀಯ ವಿದ್ಯುತ್ ಸರಬರಾಜುದಾರರ ಸಲಹೆಯನ್ನು ಪಡೆದುಕೊಂಡು ಸುರಕ್ಷತಾ ಅಂತರವನ್ನು ನಿಯಮಾನುಸಾರ ಕಾಯ್ದಿರಿಸಿ ಮುಂದುವರಿಯಬೇಕು. ವಿದ್ಯುತ್ ಸೇವಾ ಮಾರ್ಗವನ್ನು ಅಕ್ರಮವಾಗಿ ಹಾಗೂ ಅನಧಿಕೃತವಾಗಿ ಕೆಳಮಟ್ಟದಲ್ಲಿ ಎಳೆಯಬಾರದು. ಬದಲಾಗಿ ವಿದ್ಯುತ್ ಸೇವಾ ಮಾರ್ಗವನ್ನು ಅಧಿಕೃತವಾಗಿ ಎಳೆದು ನಿಯಮಾನುಸಾರ ವಿದ್ಯುತ್ ಸಂಪರ್ಕ ಪಡೆಯುವುದು.
ಒದ್ದೆಯಾದ ಕೈಗಳಿಂದ ವಿದ್ಯುತ್ ಸ್ವಿಚ್‍ಗಳನ್ನು ಮುಟ್ಟಬಾರದು. ಎಕ್ಸ್‍ಟೆನ್ಷನ್ ಕಾರ್ಡ್‍ಗಳನ್ನು ಬಳಸಿ ವಿದ್ಯುತ್ ಮಂಡಲದ ಮೇಲೆ ಹೆಚ್ಚು ಭಾರವನ್ನು ಹಾಕಬಾರದು. ವಿದ್ಯುತ್ ಪ್ಲಗ್‍ಅನ್ನು ಸಾಕೆಟ್‍ನಲ್ಲಿ ಅಳವಡಿಸುವ ಅಥವಾ ಅದರಿಂದ ತೆಗೆಯುವ ಮುಂಚಿತವಾಗಿ ಸ್ವಿಚ್‍ಅನ್ನು ಆಫ್ ಮಾಡಿ ವೈರನ್ನು ಎಳೆಯದೇ ಪ್ಲಗ್ ಅನ್ನು ಹಿಡಿದು ಸಾಕೆಟ್‍ನಿಂದ ತೆಗೆಯುವುದು. ವಿದ್ಯುತ್ ಮಾರ್ಗದ ಸಮೀಪ ಬೆಳೆಯಲಾಗಿದ್ದ ಮರಗಳಲ್ಲಿ ಫಲಗಳನ್ನು ಕೀಳುವ ಮುಂಚಿತವಾಗಿ, ಸ್ಥಳೀಯ ವಿದ್ಯುತ್ ಸರಬರಾಜುದಾರರ ಗಮನಕ್ಕೆ ವಿಷಯ ತಿಳಿಸಿ, ಅವರ ಸಲಹೆಯ ಮೇರೆಗೆ ವಿದ್ಯುತ್ ಮಾರ್ಗವನ್ನು ನಿಶ್ಚೇತನಗೊಳಿಸಿ ಮುಂದುವರಿಯಬೇಕು. ಒಡೆದು ಹೋಗಿರುವ/ ಕೃಷವಾಗಿರುವ ವಿದ್ಯುತ್ ಸ್ವಿಚ್ ಹಾಗೂ ಸಾಕೆಟ್‍ಗಳು ಕಂಡುಬಂದ ಸಂದರ್ಭದಲ್ಲಿಯೇ ಹೊಸದರೊಂದಿಗೆ ಬದಲಾಯಿಸುವುದು. ಸಾಕೆಟ್‍ನ 3/5ನೇ ಪಿನ್‍ಅನ್ನು ವಿದ್ಯುತ್ ಲೀಕೇಜ್‍ನಿಂದ ಸುರಕ್ಷತೆಗಾಗಿ ಭೂಸಂಪರ್ಕ ಗೊಳಿಸಬೇಕಿದೆ. ವಿದ್ಯುತ್ ಪರಿವರ್ತಕ ಕೇಂದ್ರದ ಸುತ್ತ ಅಳವಡಿಸಿರುವ ಸುರಕ್ಷತಾ ಬೇಲಿಯನ್ನು ಹತ್ತಬಾರದು. ಬಳಸದೇ ಇರುವ ಸಾಕೆಟ್‍ಗಳಿಗೆ ಡಮ್ಮಿ ಸುರಕ್ಷಾಮುಚ್ಚಳವನ್ನು ಅಳವಡಿಸಬೇಕು ಹಾಗೂ ಹಾನಿಗೊಳಗಾದ ವೈರ್‍ನ ನಿರೋದಕಕ್ಕೆ ಇನ್ಸುಲೇಟೆಡ್ ಟೇಪ್ ಅನ್ನು ಸುತ್ತುವುದು. ಸೂಕ್ತ ಸಾಮಥ್ರ್ಯದ ಪ್ಲಗ್ ಇಲ್ಲದಂತೆ ಸಡಿಲ ವೈರ್‍ಗಳನ್ನು ಸಾಕೆಟ್‍ಗಳಿಗೆ ಅಳವಡಿಸಬಾರದು. ವಿದ್ಯುತ್ ಕಾಮಗಾರಿಗಳನ್ನು ಸ್ವಯಂ ನಿರ್ವಹಿಸಲು ಮುಂದಾಗದೇ ಸರ್ಕಾರದಿಂದ ಮಾನ್ಯತೆ ಪಡೆದ ವಿದ್ಯುತ್ ಗುತ್ತಿಗೆದಾರರಿಂದಲೇ ನಿರ್ವಹಿಸಬೇಕು ಎಂದು ಮಡಿಕೇರಿ ಚಾವಿಸನಿನಿ ಮಡಿಕೇರಿ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ರಾಮಚಂದ್ರ ಅವರು ಕೋರಿದ್ದಾರೆ.








