
ವಿರಾಜಪೇಟೆ ಮೇ 29 NEWS DESK : ಕೊಡಗು ಜಿಲ್ಲಾ ಕಿವುಡರ ಸಂಘದ ಜಿಲ್ಲಾಧ್ಯಕ್ಷರಾಗಿ ಮಾತಂಡ ಗೌರು ಸೋಮಣ್ಣ ಅವಿರೋಧ ಆಯ್ಕೆಯಾಗಿದ್ದಾರೆ. ವಿರಾಜಪೇಟೆಯ ಪುರಭವನದಲ್ಲಿ ಕೊಡಗು ಜಿಲ್ಲಾ ಕಿವುಡರ ಸಂಘದ ಒಂಬತ್ತನೇ ವರ್ಷದ ವಾರ್ಷಿಕ ಸಾಮಾನ್ಯ ಮಹಾಸಭೆ ಮತ್ತು ಚುನಾವಣೆಯಲ್ಲಿ ಆಯ್ಕೆ ಮಾಡಲಾಯಿತು. ಈ ಸಂದರ್ಭ ಮಾತನಾಡಿದ, ಕೊಡಗು ಜಿಲ್ಲಾ ಕಿವುಡರ ಸಂಘದ ಅಧ್ಯಕ್ಷ ಮಾತಂಡ ಗೌರು ಸೋಮಣ್ಣ ಸಂಘದ ಸರ್ವ ಸದಸ್ಯರ ಉಪಸ್ಥಿತಿ ಮತ್ತು ಭಾಗವಹಿಸುವಿಕೆ ನಮ್ಮ ಸಂಘಕ್ಕೆ ಶಕ್ತಿ, ಏಕತೆ ಮತ್ತು ಮುಂದಿನ ಉದ್ದೇಶವನ್ನು ಒಳಗೊಂಡಿರುತ್ತದೆ. ಕಳೆದ ಸಾಲಿನಲ್ಲಿ ಸರ್ವರೂ ಒಟ್ಟುಗೂಡಿ ಸಮರ್ಪಣಾ ಭಾವದಿಂದ ಒಟ್ಟಾಗಿ ಸೇವೆ ಸಲ್ಲಿಸುವುದರ ಮೂಲಕ ಕೆಡಿಡಿಎ ಗೆ ಒಳ್ಳೆಯ ಕಾರ್ಯವನ್ನು ಮಾಡುತ್ತಾ ಬರುತ್ತಿದ್ದೇವೆ .ನಮ್ಮ ಸಂಘದ ಗೌರವಾಧ್ಯಕ್ಷರು ದಣಿವರಿಯದೆ ನಮ್ಮ ಜೊತೆಗೆ ನಿರಂತರ ಸೇವೆ ಸಲ್ಲಿಸುತ್ತಾ ಬರುತ್ತಿದ್ದಾರೆ. ಅವರ ದೂರ ದೃಷ್ಟಿಯಿಂದ ಇಂದು ಸಂಘ ಯಶಸ್ವಿಯ ಹಾದಿಯಲ್ಲಿದೆ. ಸಂಘದ ಸರ್ವ ಪದಾಧಿಕಾರಿಗಳಿಗೆ ಧನ್ಯವಾದಗಳು ಸಲ್ಲಿಸಿದರು. ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಗೌರವಾಧ್ಯಕ್ಷ ಜೋಸೆಫ್ ಸ್ಯಾಮ್ ಕಳೆದ ಸಪ್ಟೆಂಬರ್ ನಲ್ಲಿ ನಡೆದ ಕಿವುಡ ಮಕ್ಕಳ ಕ್ರೀಡಾಕೂಟಕ್ಕೆ ಸುಮಾರು ಎರಡು ಲಕ್ಷದ ಎಪ್ಪತ್ತೆರಡು ಸಾವಿರ ರೂಪಾಯಿ ದೇಣಿಗೆಯನ್ನು ಸಂಗ್ರಹಿಸಿರುವುದು ಶ್ಲಾಘನೀಯ. ಮುಂದೆ ತಾನು ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು. ಸಂಘದ ಪದಾಧಿಕಾರಿಗಳಾಗಿ ಆಯ್ಕೆಯಾಗಿರುವವರು ಕೂಡ ಸಂಘದ ಅಭಿವೃದ್ಧಿಗಾಗಿ ಶ್ರಮಿಸಬೇಕಿದೆ. ಪ್ರಸ್ತುತ ಅವಿರೋದವಾಗಿ ಆಯ್ಕೆಯಾಗಿರುವ ಸರ್ವ ಪದಾಧಿಕಾರಿಗಳು ಮುಂದೆ ಒಳ್ಳೆಯ ಸೇವಾ ಕಾರ್ಯವನ್ನು ಮಾಡಬೇಕಿದೆ ಎಂದು ಹೇಳಿದರು. ಆಯೇಷಾ ಮಾತನಾಡಿ ನೂತನವಾಗಿ ಆಯ್ಕೆಯಾದ ಆಡಳಿತ ಮಂಡಳಿಯ ಸರ್ವರಿಗೂ ಅಭಿನಂದನೆಗಳನ್ನು ಸಲ್ಲಿಸಿ, ಸರ್ಕಾರದಿಂದ ಸಿಗುವಂತಹ ಸೌಲಭ್ಯವನ್ನು ಪಡೆದುಕೊಳ್ಳಬೇಕಿದೆ. ವಿಶೇಷ ಚೇತನರಿಗೆ ನಮ್ಮಿಂದಾಗುವ ಸಹಾಯವನ್ನು ಮಾಡಬೇಕಿದೆ ಎಂದರು. ಕಾರ್ಯಕ್ರಮದಲ್ಲಿ ಕೆಡಿಡಿಎ ಪ್ರಧಾನ ಕಾರ್ಯದರ್ಶಿ ರಂಜಿತ್ ಪುದಿಯತಂಡ ಕಳೆದ ಸಾಲಿನ ಸಂಘದ ಸೇವಾ ಕಾರ್ಯಗಳನ್ನು ವಾಚಿಸಿದರು. ಕೊಡಗು ಜಿಲ್ಲಾ ಕಿವುಡರ ಸಂಘದ ಅಧ್ಯಕ್ಷ ಹಾಗೂ ಪದಾಧಿಕಾರಿಗಳ ಸ್ಥಾನಕ್ಕೆ ನಡೆದ ಚುನಾವಣೆಗೆ ಚುನಾವಣಾ ಅಧಿಕಾರಿಯಾಗಿ ಕೆ ಎಸ್ ಎಫ್ ಡಿ ಪ್ರಧಾನ ಕಾರ್ಯದರ್ಶಿ ನವೀನ್ ಕುಮಾರ್ ಜಿ.ಎಸ್. ಮತ್ತು ಮತಗಟ್ಟೆ ಅಧಿಕಾರಿಯಾಗಿ ಕೆ ಎಸ್ ಡಿ ಡಬ್ಲ್ಯೂ ಎ ಕಡೂರುವಿನ ಉಮಾ ಶಂಕರ್ ಅವರು ಕಾರ್ಯನಿರ್ವಹಿಸಿದರು. ಕಾರ್ಯಕ್ರಮದಲ್ಲಿ ನೂತನವಾಗಿ ಆಯ್ಕೆಯಾದ ಅಧ್ಯಕ್ಷರು ಮತ್ತು ಕಾರ್ಯಕಾರಿ ಮಂಡಳಿಯವರನ್ನು, ಗೌರವಾಧ್ಯಕ್ಷರನ್ನು ಮತ್ತು ಕು. ಆಯೇಷಾರವರನ್ನು ಸನ್ಮಾನಿಸಲಾಯಿತು. ಕೊಡಗು ಜಿಲ್ಲಾ ಕಿವುಡರ ಸಂಘದ ನೂತನ ಅಧ್ಯಕ್ಷರಾಗಿ ಮಾತoಡ ಗೌರು ಸೋಮಣ್ಣ, ಉಪಾಧ್ಯಕ್ಷರಾಗಿ ಕೆ.ಕೆ.ಶಂಕರನಾರಾಯಣ, ಪ್ರಧಾನ ಕಾರ್ಯದರ್ಶಿಯಾಗಿ ರಂಜಿತ್ ಪುದಿಯತಂಡ, ಜಂಟಿ ಕಾರ್ಯದರ್ಶಿಯಾಗಿ ನಾಗೇಶ್, ಖಜಾಂಚಿಯಾಗಿ ಕೆ ಎ ಸುರೇಶ್, ಕ್ರೀಡಾ ಕಾರ್ಯದರ್ಶಿಯಾಗಿ ಅವಿನಾಶ್ ಜೋಸೆಫ್, ಸದಸ್ಯರುಗಳಾಗಿ ಬಿ.ಎ.ಛಾಯಾದೇವಿ , ಬಿಂದಿಯಾ ಎಂ.ಜಿ. ,ಶಬರಿ ಕೆ.ಸಿ, ಮದನ್ ಎಂಕೆ, ವೆಂಕಟೇಶ್, ಕಿರಣ್ ಕೆ ಎಸ್, ಮೋಹನ್ ಚಂಗಪ್ಪ ಕೆ ನೂತನ ಆಡಳಿತ ಮಂಡಳಿಗೆ ಆಯ್ಕೆಯಾದರು. ಈ ಸಂದರ್ಭದಲ್ಲಿ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.










