
ಅಮ್ಮತಿ, ಮೇ 29 NEWS DESK : ಅಮೃತ ಯುವ ಮೊಗೇರ ಸೇವಾ ಸಮಿತಿ ಇವರ ಸಹಭಾಗಿತ್ವದಲ್ಲಿ, ಶ್ರೀ ಕಲ್ಲುರ್ಟಿ ಮೊಗೇರ ಫುಟ್ಬಾಲ್ ಅಮ್ಮತಿ ವತಿಯಿಂದ ರಾಜ್ಯ ಮಟ್ಟದ “ಮೊಗೇರ ಫುಟ್ಬಾಲ್ ಪ್ರೀಮಿಯರ್ ಲೀಗ್ – 2026” ಪಂದ್ಯಾವಳಿಯನ್ನು ಮೇ 30 ಹಾಗೂ 31 ರಂದು ಅಮ್ಮತಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ವಿಜೃಂಭಣೆಯಿಂದ ಆಯೋಜಿಸಲಾಗಿದೆ. ಮೊಗೇರ ಸಮುದಾಯದ ಕ್ರೀಡಾಪಟುಗಳಿಗೆ ಮಾತ್ರ ಸೀಮಿತವಾಗಿರುವ ಈ ರಾಜ್ಯ ಮಟ್ಟದ ಲೀಗ್ ಪಂದ್ಯಾವಳಿಯಲ್ಲಿ ಒಟ್ಟು 8 ಮಾಲೀಕತ್ವದ ತಂಡಗಳು ಭಾಗವಹಿಸಲಿದ್ದು, ಎರಡು ದಿನಗಳ ಕಾಲ ಲೀಗ್ ಹಾಗೂ ನಾಕೌಟ್ ಮಾದರಿಯಲ್ಲಿ ಪಂದ್ಯಗಳು ನಡೆಯಲಿವೆ. ಕೊಡಗು ಸೇರಿದಂತೆ ಮಂಗಳೂರು, ಉಡುಪಿ, ಕಾಸರಗೋಡು ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಪ್ರತಿಭಾವಂತ ಆಟಗಾರರು ಭಾಗವಹಿಸಲಿದ್ದು, ಪ್ರತಿಯೊಂದು ಪಂದ್ಯವೂ ರೋಚಕ ಪೈಪೋಟಿಗೆ ಸಾಕ್ಷಿಯಾಗಲಿದೆ ಎಂದು ಆಯೋಜಕರು ತಿಳಿಸಿದ್ದಾರೆ. ಪಂದ್ಯಾವಳಿಯ ಚಾಂಪಿಯನ್ ತಂಡಕ್ಕೆ ರೂ.50,000 ನಗದು ಬಹುಮಾನ ಹಾಗೂ ಆಕರ್ಷಕ ಟ್ರೋಫಿ ನೀಡಲಾಗುತ್ತಿದ್ದು, ರನ್ನರ್ಸ್ ತಂಡಕ್ಕೆ ರೂ.30,000 ನಗದು ಮತ್ತು ಟ್ರೋಫಿ ನೀಡಲಾಗುತ್ತದೆ. ತೃತೀಯ ಹಾಗೂ ಚತುರ್ಥ ಸ್ಥಾನ ಪಡೆದ ತಂಡಗಳಿಗೆ ವಿಶೇಷ ಟ್ರೋಫಿಗಳನ್ನು ವಿತರಿಸಲಾಗುತ್ತದೆ. ಜೊತೆಗೆ ಉತ್ತಮ ಆಟಗಾರ, ಅತ್ಯುತ್ತಮ ಗೋಲ್ ಕೀಪರ್, ಬೆಸ್ಟ್ ಡಿಫೆಂಡರ್, ಉದಯೋನ್ಮುಖ ಆಟಗಾರ ಹಾಗೂ ಮ್ಯಾನ್ ಆಫ್ ದಿ ಸೀರೀಸ್ ಸೇರಿದಂತೆ ಹಲವು ವೈಯಕ್ತಿಕ ಪ್ರಶಸ್ತಿಗಳನ್ನು ಕ್ರೀಡಾಪಟುಗಳಿಗೆ ಪ್ರದಾನ ಮಾಡಲಾಗುತ್ತದೆ. ಈ ಪಂದ್ಯಾವಳಿಯ ಪ್ರಮುಖ ಉದ್ದೇಶ ಯುವ ಪ್ರತಿಭೆಗಳಿಗೆ ದೊಡ್ಡ ವೇದಿಕೆ ಕಲ್ಪಿಸುವುದರ ಜೊತೆಗೆ, ಕ್ರೀಡಾ ಮನೋಭಾವ ಮತ್ತು ಸಹೋದರತ್ವವನ್ನು ಬೆಳೆಸುವುದಾಗಿದೆ. ಯುವಕರಲ್ಲಿ ದೈಹಿಕ ಸಾಮರ್ಥ್ಯ, ತಂಡ ಮನೋಭಾವ ಹಾಗೂ ನಾಯಕತ್ವ ಗುಣಗಳನ್ನು ಬೆಳೆಸುವ ನಿಟ್ಟಿನಲ್ಲಿ ಇಂತಹ ಕ್ರೀಡಾಕೂಟಗಳು ಸಹಕಾರಿಯಾಗಲಿವೆ ಎಂದು ಸಮಿತಿಯ ಪದಾಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ. ಕ್ರೀಡಾಕೂಟದ ಉದ್ಘಾಟನಾ ಸಮಾರಂಭವು ಆಯೋಜಕರಾದ ಶಿವಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದ್ದು, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ.ಎಸ್. ಪೊನ್ನಣ್ಣ ಅವರು ಪಂದ್ಯಾವಳಿಯನ್ನು ಉದ್ಘಾಟಿಸಲಿದ್ದಾರೆ. ಸಮಾಜದ ಹಿರಿಯರು ಹಾಗೂ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಸಮಾರಂಭಕ್ಕೆ ವಿಶೇಷ ಮೆರುಗು ತರಲಿದ್ದಾರೆ. ಸಮಾರೋಪ ಸಮಾರಂಭದಲ್ಲಿ ಮಡಿಕೇರಿ ಕ್ಷೇತ್ರದ ಶಾಸಕರಾದ ಡಾ. ಮಂತರ್ ಗೌಡ, ಕೊಡಗು ಜಿಲ್ಲಾ ಮೊಗೇರ ಸೇವಾ ಸಮಾಜದ ಅಧ್ಯಕ್ಷರಾದ ಜನಾರ್ಧನ್ ಮರಗೋಡು, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ನಿಕಟ ಪೂರ್ವ ಸದಸ್ಯರಾದ ಪಿ.ಎಂ. ರವಿ, ಕೊಡಗು ಜಿಲ್ಲಾ ಮೊಗೇರ ಸೇವಾ ಸಮಾಜದ ಕ್ರೀಡಾ ಅಧ್ಯಕ್ಷರಾದ ಎಂ.ಜಿ. ಚಂದ್ರು ಸೇರಿದಂತೆ ಹಲವಾರು ಗಣ್ಯರು ಭಾಗವಹಿಸಲಿದ್ದಾರೆ. ವಿಜೇತ ತಂಡಗಳಿಗೆ ಬಹುಮಾನ ವಿತರಣೆ ನಡೆಯಲಿದ್ದು, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮೊಗೇರ ಸಮುದಾಯದ ಗಣ್ಯರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಗುತ್ತದೆ. ಸಮಾಜ ಸೇವೆ, ಕ್ರೀಡೆ, ಶಿಕ್ಷಣ, ಕಲೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ವಿಶೇಷ ಸಾಧನೆ ಮಾಡಿದ ಪ್ರತಿಭಾವಂತರಿಗೆ ಗೌರವ ಸಲ್ಲಿಸಿ ಅಭಿನಂದಿಸಲಾಗುವುದು.
ಪಂದ್ಯ ವೀಕ್ಷಣೆಗೆ ಹೆಚ್ಚಿನ ಸಂಖ್ಯೆಯಲ್ಲಿ ಕ್ರೀಡಾಭಿಮಾನಿಗಳು ಆಗಮಿಸುವ ನಿರೀಕ್ಷೆಯಿದ್ದು, ಅಮ್ಮತಿಯಲ್ಲಿ ಎರಡು ದಿನಗಳ ಕಾಲ ಹಬ್ಬದ ವಾತಾವರಣ ನಿರ್ಮಾಣವಾಗಲಿದೆ. ಮೊಗೇರ ಸಮುದಾಯದ ಏಕತೆ, ಸಂಘಟನೆ ಹಾಗೂ ಕ್ರೀಡಾ ಚಟುವಟಿಕೆಗಳಿಗೆ ಮತ್ತಷ್ಟು ಬಲ ತುಂಬುವ ಉದ್ದೇಶದಿಂದ ಆಯೋಜಿಸಿರುವ ಈ ರಾಜ್ಯ ಮಟ್ಟದ ಪಂದ್ಯಾವಳಿಯನ್ನು ಯಶಸ್ವಿಗೊಳಿಸಲು ಸಮುದಾಯದ ಸದಸ್ಯರು ಹಾಗೂ ಯುವಕರು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ರಾಜ್ಯ ಮಟ್ಟದ ಈ ಕ್ರೀಡಾಕೂಟಕ್ಕೆ ಕ್ರೀಡಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಆಟಗಾರರನ್ನು ಪ್ರೋತ್ಸಾಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಪ್ರಕಟಣೆಯಲ್ಲಿ ಆಯೋಜಕರಾದ, ಶಿವಪ್ಪ, ಮಂಜು ಬಬ್ಳಿ, ಶೇಷಪ್ಪ, ಹರೀಶ್, ಕೃಷ್ಣ, ರಾಮು, ಶಂಕರ್ , ರಕ್ಷಿತ್, ಗಣೇಶ್, ಮನವಿ ಮಾಡಿದ್ದಾರೆ.
ವರದಿ : ಅಶೋಕ್, ಮಡಿಕೇರಿ









