
ಮಡಿಕೇರಿ NEWS DESK ಮೇ 30 : ರಾಜ್ಯದ ನೂತನ ಮಂತ್ರಿಮoಡಲದಲ್ಲಿ ವಿರಾಜಪೇಟೆ ಕ್ಷೇತ್ರದ ಶಾಸಕ ಅಜ್ಜಿಕುಟ್ಟಿರ ಎಸ್.ಪೊನ್ನಣ್ಣ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಕೊಡವ ಸಮಾಜಗಳ ಒಕ್ಕೂಟದ ಅಧ್ಯಕ್ಷ ಕಳ್ಳಿಚಂಡ ವಿಷ್ಣು ಕಾರ್ಯಪ್ಪ ಅವರು ಮನವಿ ಮಾಡಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ಜಾತ್ಯಾತೀತ ಹಾಗೂ ಪಕ್ಷಾತೀತ ನಾಯಕರಾಗಿರುವ ಎ.ಎಸ್.ಪೊನ್ನಣ್ಣ ಅವರು ಕೇವಲ ಕೊಡಗು ಮಾತ್ರವಲ್ಲ ಇಡೀ ಕರ್ನಾಟಕದ ಆಸ್ತಿಯಾಗಿದ್ದು, ಇವರಿಗೆ ಸಚಿವ ಸ್ಥಾನ ನೀಡುವುದರಿಂದ ರಾಜ್ಯದ ಭವಿಷ್ಯ ಉತ್ತಮವಾಗಲಿದೆ ಎಂದು ತಿಳಿಸಿದ್ದಾರೆ. ವಿರಾಜಪೇಟೆ ಶಾಸಕರಾಗಿ ಯಾವುದೇ ಬೇಧಭಾವವಿಲ್ಲದೆ ಸರ್ವರೂ ಸಮಾನರು ಎಂಬ ಭಾವನೆಯಲ್ಲಿ ಪಕ್ಷಾತೀತವಾಗಿ ಕ್ಷೇತ್ರದ ಅಭಿವೃದ್ಧಿಗಾಗಿ ಹಾಗೂ ಜನಹಿತಕ್ಕಾಗಿ ಶ್ರಮಿಸಿದ್ದಾರೆ. ಕಳೆದ 10 ವರ್ಷಗಳಿಂದ ಸರಕಾರದೊಂದಿಗೆ ಒಡನಾಟ ಹೊಂದಿರುವ ಪೊನ್ನಣ್ಣ ಅವರು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರನ ಹುದ್ದೆಯನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ಮಂತ್ರಿಮAಡಲದ ಪ್ರತಿಯೊಬ್ಬರೊಂದಿಗೆ ಆತ್ಮೀಯರಾಗಿರುವ ಅವರು ತಮ್ಮ ದಕ್ಷ ಕಾರ್ಯವೈಖರಿಯಿಂದಲೇ ಹೈಕಮಾಂಡ್ ನ ಮೆಚ್ಚುಗೆ ಪಡೆದಿದ್ದಾರೆ. ಇವರಿಂದ ಕೊಡಗಿನಲ್ಲಿ ಸಮಗ್ರ ಅಭಿವೃದ್ಧಿ ಕಾರ್ಯಗಳು ನಡೆದಿದೆ. ಎಂ.ಸಿ.ನಾಣಯ್ಯ, ಎಂ.ಎo.ನಾಣಯ್ಯ ಹಾಗೂ ಎಂ.ಪಿ.ಅಪ್ಪಚ್ಚು ರಂಜನ್ ಅವರ ನಂತರ ಯಾವ ಕೊಡವರಿಗೂ ಸಚಿವ ಸ್ಥಾನ ಲಭಿಸಿಲ್ಲ. ಆದ್ದರಿಂದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಮುಂದಿನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಕೊಡವ ಜನಾಂಗಕ್ಕೆ ಸಚಿವ ಸ್ಥಾನ ನೀಡಲು ಕ್ರಮ ಕೈಗೊಳ್ಳಬೇಕು ಎಂದು ವಿಷ್ಣು ಕಾರ್ಯಪ್ಪ ಕೋರಿದ್ದಾರೆ.
ಯಾವುದೇ ಕುಂದು ಕೊರತೆಗಳಿಲ್ಲದ ಎ.ಎಸ್.ಪೊನ್ನಣ್ಣ ಅವರಿಗೆ ಸಚಿವ ಸ್ಥಾನ ನೀಡುವುದರಿಂದ ಕೊಡವರಿಗೆ ಮಾತ್ರವಲ್ಲ ಇಡೀ ಕೊಡಗು ಜಿಲ್ಲೆಗೆ ಲಾಭವಾಗಲಿದೆ. ಅಲ್ಲದೆ ರಾಜ್ಯಕ್ಕೆ ಒಬ್ಬ ಸಮರ್ಥ ನಾಯಕ ದೊರಕಿದಂತ್ತಾಗುತ್ತದೆ. ಈಗಾಗಲೇ ಇವರು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾಗಿ ಅತ್ಯಂತ ಯಶಸ್ವಿಯಾಗಿ ಕಾರ್ಯ ನಿರ್ವಹಿಸಿರುವುದರಿಂದ ಕಾನೂನು ಸಚಿವ ಸ್ಥಾನ ನೀಡಬೇಕೆಂದು ಒತ್ತಾಯಿಸಿದ್ದಾರೆ.








