
ಮಡಿಕೇರಿ NEWS DESK ಮೇ 31 : ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಡಿ.ಕೆ.ಶಿವಕುಮಾರ್ ಅವರ ನೇತೃತ್ವದ ಸಚಿವ ಸಂಪುಟದಲ್ಲಿ ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಕೊಡಗು ಜಿಲ್ಲಾ ಒಕ್ಕಲಿಗರ ಸಂಘ ಒತ್ತಾಯಿಸಿದೆ. ಜಂಟಿ ಪತ್ರಿಕಾ ಪ್ರಕಟಣೆ ನೀಡಿರುವ ಸಂಘದ ಜಿಲ್ಲಾಧ್ಯಕ್ಷ ಎಸ್.ಎಂ.ಚಂಗಪ್ಪ, ಸೋಮವಾರಪೇಟೆ ತಾಲ್ಲೂಕು ಅಧ್ಯಕ್ಷ ಎ.ಆರ್.ಮುತ್ತಣ್ಣ ಹಾಗೂ ಕುಶಾಲನಗರ ತಾಲ್ಲೂಕು ಅಧ್ಯಕ್ಷ ಎಂ.ಕೆ.ದಿನೇಶ್ ಅವರು ಯುವ ಶಾಸಕ ಡಾ.ಮಂತರ್ ಗೌಡ ಅವರಿಗೆ ಸಚಿವ ಸ್ಥಾನ ನೀಡುವುದರಿಂದ ಜಿಲ್ಲೆಯ ಆಡಳಿತ ವ್ಯವಸ್ಥೆ ಚುರುಕುಗೊಳ್ಳಲಿದೆ. ಅಲ್ಲದೆ ಯುವಶಕ್ತಿಗೆ ಪ್ರೇರಣೆಯಾಗಲಿದ್ದಾರೆ ಎಂದು ತಿಳಿಸಿದ್ದಾರೆ. ಯುವ ರಾಜಕಾರಣಿಗಳಿಗೆ ಪ್ರೋತ್ಸಾಹ ನೀಡುತ್ತಾ ರಾಜಕೀಯ ಬಲ ತುಂಬುತ್ತಿರುವ ಎಐಸಿಸಿ ನಾಯಕ ರಾಹುಲ್ ಗಾಂಧಿ ಅವರು ಡಾ.ಮಂತರ್ ಗೌಡ ಅವರಿಗೆ ಸಚಿವ ಸ್ಥಾನ ನೀಡುವ ವಿಶ್ವಾಸವಿದೆ. ಡಾ.ಮಂತರ್ ಗೌಡ ಅವರು ಜನಾನುರಾಗಿ ಶಾಸಕರಾಗಿದ್ದು, ಮಡಿಕೇರಿ ಕ್ಷೇತ್ರದ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದಾರೆ. ಯಾವುದೇ ಗುಂಪುಗಾರಿಕೆಯನ್ನು ಮಾಡದೆ ಅಭಿವೃದ್ಧಿ ಮಂತ್ರದೊಂದಿಗೆ ಪಕ್ಷ ನಿಷ್ಠೆಯನ್ನೂ ತೋರುತ್ತಿದ್ದಾರೆ. ಸಮಸ್ಯೆಗಳ ಪರಿಹಾರ ಮತ್ತು ಅಭಿವೃಧ್ಧಿ ಕಾರ್ಯಗಳ ವೇಗಕ್ಕೆ ಈ ನಾಡಿಗೆ ಯುವ ನಾಯಕರ ಅಗತ್ಯವಿದೆ. ತಮ್ಮ 27ನೇ ವಯಸ್ಸಿನಲ್ಲಿ ಸಚಿವ ಸ್ಥಾನ ಪಡೆದು ಸಮರ್ಥ ಆಡಳಿತ ನೀಡಿದ್ದ ಡಿ.ಕೆ.ಶಿವಕುಮಾರ್ ಅವರು ಪ್ರಸ್ತುತ 43 ವರ್ಷದ ಯುವ ಶಾಸಕ ಡಾ.ಮಂತರ್ ಗೌಡ ಅವರಿಗೆ ಸಚಿವ ಸ್ಥಾನ ನೀಡುವ ಮೂಲಕ ರಾಜಕೀಯ ಶಕ್ತಿ ತುಂಬಲಿದ್ದಾರೆ ಎನ್ನುವ ನಂಬಿಕೆ ಇದೆ ಎಂದು ಎಸ್.ಎಂ.ಚಂಗಪ್ಪ, ಎ.ಆರ್.ಮುತ್ತಣ್ಣ ಹಾಗೂ ಎಂ.ಕೆ.ದಿನೇಶ್ ಹೇಳಿದ್ದಾರೆ. ಡಾ.ಮಂತರ್ ಗೌಡ ಅವರ ಪ್ರವೇಶದ ನಂತರ ಯುವ ಸಮೂಹ ಕಾಂಗ್ರೆಸ್ ಪಕ್ಷದೊಂದಿಗೆ ಗುರುತಿಸಿಕೊಳ್ಳುತ್ತಿದೆ. ಸಚಿವ ಸ್ಥಾನ ಹೊಂದಲು ಸಮರ್ಥರಾಗಿರುವ ಇವರು ಸಚಿವರಾದರೆ ಕೊಡಗಿನ ಎಲ್ಲಾ ಸಮುದಾಯದ ಪ್ರಗತಿಗೆ ಮತ್ತು ಪಕ್ಷ ಸಂಘಟನೆಗೂ ಅನುಕೂಲವಾಗಲಿದೆ ಅಭಿಪ್ರಾಯಪಟ್ಟಿದ್ದಾರೆ.








