
ಮಡಿಕೇರಿ NEWS DESK ಜೂ.1 : ರಾಜ್ಯ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಡಿ.ಕೆ.ಶಿವಕುಮಾರ್ ಅವರ ನೇತೃತ್ವದ ನೂತನ ಸಚಿವ ಸಂಪುಟದಲ್ಲಿ ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿಯ ಸದಸ್ಯ ಎಂ.ಎ.ಕಲೀಲ್ ಬಾಷ ಒತ್ತಾಯಿಸಿದ್ದಾರೆ. ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಜೂ.3ರಂದು ಅಧಿಕಾರ ವಹಿಸಿಕೊಳ್ಳುತ್ತಿರುವ ಡಿ.ಕೆ.ಶಿವಕುಮಾರ್ ಅವರಿಗೆ ಅಭಿನಂದನೆ ಸಲ್ಲಿಸಿರುವ ಅವರು, ಕೊಡಗಿನ ಶಾಸಕದ್ವಯರಿಗೆ ಸಚಿವ ಸ್ಥಾನ ಸಿಗುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಜಿಲ್ಲೆಯ ಇಬ್ಬರು ಯುವ ಶಾಸಕರನ್ನು ಈ ಹಿಂದೆ ಡಿ.ಕೆ.ಶಿವಕುಮಾರ್ ಅವರು ಮುತ್ತು ರತ್ನಗಳೆಂದು ಕೊಂಡಾಡಿದ್ದರು. ಇಬ್ಬರು ಮುತ್ತು ರತ್ನಗಳನ್ನು ಸಚಿವ ಸಂಪುಟಕ್ಕೆ ಸೇರ್ಪಡೆಗೊಳಿಸಿದರೆ ರಾಜ್ಯದಲ್ಲಿ ದಕ್ಷ ಆಡಳಿತಕ್ಕೆ ಸಹಕಾರಿಯಾಗಲಿದೆ, ಅಲ್ಲದೆ ಕೊಡಗು ಸಮಗ್ರ ಅಭಿವೃದ್ಧಿಯನ್ನು ಕಾಣಲಿದೆ. ಉತ್ಸಾಹಿ ರಾಜಕಾರಣಿಗಳಾಗಿರುವ ಇಬ್ಬರು ಶಾಸಕರು ಅಭಿವೃದ್ಧಿ ಕಾರ್ಯಗಳಲ್ಲಿ ಇತರರಿಗೆ ಮಾದರಿಯಾಗಿದ್ದಾರೆ. ಜನಸ್ನೇಹಿ ಗುಣದಿಂದಲೇ ಜನಪ್ರಿಯತೆಯನ್ನು ಗಳಿಸಿರುವ ಶಾಸಕರುಗಳು ಸಚಿವ ಸ್ಥಾನವನ್ನು ನಿಭಾಯಿಸಲು ಸಮರ್ಥರಾಗಿದ್ದಾರೆ. ಆದ್ದರಿಂದ ಇಬ್ಬರಿಗೆ ಮಂತ್ರಿಗಿರಿಯನ್ನು ನೀಡುವ ಮೂಲಕ ಡಿ.ಕೆ.ಶಿವಕುಮಾರ್ ಅವರು ಕೊಡಗಿನ ಮೇಲಿನ ಅಭಿಮಾನವನ್ನು ಮತ್ತೆ ಸಾಕ್ಷೀಕರಿಸಲಿ ಎಂದು ಎಂ.ಎ.ಕಲೀಲ್ ಬಾಷ ಮನವಿ ಮಾಡಿದ್ದಾರೆ. *ಡಿಸಿಎಂ ಹುದ್ದೆ ನೀಡಲಿ* ವಿಧಾನಸಭಾ ಅಧ್ಯಕ್ಷರಾಗಿ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಿರುವ ಯು.ಟಿ.ಖಾದರ್ ಹಾಗೂ ಸಚಿವರಾಗಿ ಜನಮನ್ನಣೆಯ ಕಾರ್ಯಗಳನ್ನು ಮಾಡಿರುವ ಜಮೀರ್ ಅಹಮ್ಮದ್ ಅವರುಗಳು ಉಪ ಮುಖ್ಯಮಂತ್ರಿ ಸ್ಥಾನವನ್ನು ಅಲಂಕರಿಸಲು ಅರ್ಹರಾಗಿದ್ದಾರೆ. ಆದ್ದರಿಂದ ಇವರಿಬ್ಬರಲ್ಲಿ ಒಬ್ಬರಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡಬೇಕೆಂದು ಅವರು ಒತ್ತಾಯಿಸಿದ್ದಾರೆ.








