
ಮಡಿಕೇರಿ NEWS DESK ಜೂ.1 : ರಾಜ್ಯ ಸರಕಾರದ ನೂತನ ಸಚಿವ ಸಂಪುಟ ರಚನೆಯ ಸಂದರ್ಭ ಯುವ ನಾಯಕ, ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಮಡಿಕೇರಿ ತಾಲ್ಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ವಿ.ಜಿ.ಮೋಹನ್ ಒತ್ತಾಯಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು ಅಭಿವೃದ್ಧಿಪರ ಚಿಂತನೆಯ ಡಾ.ಮಂತರ್ ಗೌಡ ಅವರು ನಿರಂತರ ಅಭಿವೃದ್ಧಿ ಕಾರ್ಯಗಳ ಮೂಲಕ ಮತ್ತು ಜನಸ್ನೇಹಿ ಗುಣದಿಂದ ಕೊಡಗಿನಲ್ಲಿ ಮನೆ ಮಾತಾಗಿದ್ದಾರೆ. ಇವರಿಗೆ ಸಚಿವ ಸ್ಥಾನವನ್ನು ನೀಡಿದರೆ ಕರ್ನಾಟಕದ ರಾಜಕಾರಣಕ್ಕೆ ದೊಡ್ಡ ಕೊಡುಗೆಯನ್ನು ನೀಡಿದಂತ್ತಾಗುತ್ತದೆ. ಅಲ್ಲದೆ ಕೊಡಗು ಜಿಲ್ಲೆಯ ಅಭಿವೃದ್ಧಿಗೆ ಹೆಚ್ಚು ಸಹಕಾರಿಯಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಡಾ.ಮಂತರ್ ಗೌಡ ಅವರು ಮಡಿಕೇರಿ ಕ್ಷೇತ್ರದ ಶಾಸಕರಾದ ನಂತರ ಜಾತ್ಯಾತೀತ ಮತ್ತು ಪಕ್ಷಾತೀತವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರತಿಯೊಬ್ಬರ ಸಮಸ್ಯೆಗಳಿಗೆ ಖುದ್ದು ಸ್ಪಂದಿಸುತ್ತಿರುವ ಶಾಸಕರ ಸೇವೆ ರಾಜ್ಯಕ್ಕೂ ವ್ಯಾಪಿಸಿದರೆ ಯುವಶಕ್ತಿಗೆ ಪ್ರೇರಣೆಯಾಗುತ್ತದೆ. ಆದ್ದರಿಂದ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಡಿ.ಕೆ.ಶಿವಕುಮಾರ್ ಅವರು ಡಾ.ಮಂತರ್ ಗೌಡ ಅವರಿಗೆ ಸಚಿವ ಸ್ಥಾನವನ್ನು ನೀಡಿ ರಾಜಕೀಯವಾಗಿ ಬಲ ತುಂಬಬೇಕು ಎಂದು ವಿ.ಜಿ.ಮೋಹನ್ ಮನವಿ ಮಾಡಿದ್ದಾರೆ. ಒಕ್ಕಲಿಗ ಸಮುದಾಯದ ಡಿ.ಕೆ.ಶಿವಕುಮಾರ್ ಅವರು ಈ ರಾಜ್ಯದ 25ನೇ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳುತ್ತಿರುವುದು ನಮಗೆಲ್ಲ ಹೆಮ್ಮೆ ಎನಿಸಿದೆ. ಇವರ ಅವಧಿಯಲ್ಲಿ ರಾಜ್ಯ ಮತ್ತಷ್ಟು ಅಭಿವೃದ್ಧಿಯನ್ನು ಕಂಡು ದೇಶಕ್ಕೆ ಮಾದರಿಯಾಗಲಿ ಎಂದು ತಿಳಿಸಿದ್ದಾರೆ.








