
ಮಡಿಕೇರಿ NEWS DESK ಜೂ.2 : ರಾಜ್ಯ ಸರಕಾರದ ನೂತನ ಸಚಿವ ಸಂಪುಟದಲ್ಲಿ ಕೊಡಗು ಜಿಲ್ಲೆಯ ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಕೊಡಗು ಗೌಡ ಯುವ ವೇದಿಕೆ ಒತ್ತಾಯಿಸಿದೆ.
ಪತ್ರಿಕಾ ಪ್ರಕಟಣೆ ನೀಡಿರುವ ಯುವ ವೇದಿಕೆಯ ಅಧ್ಯಕ್ಷ ಬಾಲಾಡಿ ಮನೋಜ್ ಹಾಗೂ ಆಡಳಿತ ಮಂಡಳಿಯ ಸದಸ್ಯರು ಕೊಡಗಿನ ಜನತೆಯ ಆಕಾಂಕ್ಷೆ ಹಾಗೂ ವಿಶೇಷವಾಗಿ ಕೊಡಗಿನ ಒಕ್ಕಲಿಗ ಜನಾಂಗದ ನಿರೀಕ್ಷೆಯಂತೆ ಡಿ.ಕೆ.ಶಿವಕುಮಾರ್ ಅವರು ಕರ್ನಾಟಕ ರಾಜ್ಯದ 25ನೇ ಮುಖ್ಯಮುಖ್ಯಂತ್ರಿಗಳಾಗಿ ಅಧಿಕಾರ ಸ್ವೀಕರಿಸುತ್ತಿರುವುದು ಹೆಮ್ಮೆ ಎನಿಸಿದೆ. ನೂತನ ಸಚಿವ ಸಂಪುಟದಲ್ಲಿ ಯುವ ಶಾಸಕರಾದ ಡಾ.ಮಂತರ್ ಗೌಡ ಹಾಗೂ ಎ.ಎಸ್.ಪೊನ್ನಣ್ಣ ಅವರಿಗೆ ಸಚಿವ ಸ್ಥಾನ ನೀಡಿದರೆ ಯುವ ಸಮೂಹಕ್ಕೆ ಮತ್ತಷ್ಟು ಬಲ ಬಂದoತ್ತಾಗುತ್ತದೆ ಮತ್ತು ರಾಜಕೀಯ ಸ್ಫೂರ್ತಿ ತುಂಬಿದoತ್ತಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಜಿಲ್ಲೆಯ ಇಬ್ಬರು ಶಾಸಕರು ಅಭಿವೃದ್ಧಿ ಕಾರ್ಯಗಳನ್ನು ಜಾತ್ಯಾತೀತ ಮತ್ತು ಪಕ್ಷಾತೀತವಾಗಿ ನಡೆಸುತ್ತಿದ್ದಾರೆ. ವೀರ ಸೈನಿಕರ ಪ್ರತಿಮೆ ಮರುನಿರ್ಮಾಣ ಕಾರ್ಯ, ಪ್ರಸ್ತುತ ಮಡಿಕೇರಿ ನಗರದಲ್ಲಿರುವ ವೀರಸೇನಾನಿಗಳ ವೃತ್ತಗಳ ಅಭಿವೃದ್ಧಿ ಮಾಡಲಾಗಿದೆ. ಮದೆನಾಡಿನಲ್ಲಿ ಗೌಡ ಸಮಾಜಕ್ಕೆ ಭೂಮಿಯನ್ನು ಮಂಜೂರು ಮಾಡಲಾಗಿದೆ. ಕೊಡಗಿನ ಪ್ರತಿ ಹಳ್ಳಿಗಳ ರಸ್ತೆ, ನೀರು ಮತ್ತು ವಿದ್ಯುತ್ ಸಂಪರ್ಕ ವ್ಯವಸ್ಥೆ ಸುಲಲಿತವಾಗಿದೆ. ಅಭಿವೃದ್ಧಿ ಕಾರ್ಯಗಳಲ್ಲಿ ಇವರು ತೋರುತ್ತಿರುವ ಆಸಕ್ತಿ ಮತ್ತು ಶ್ರಮ ಅವಿಸ್ಮರಣೀಯವಾಗಿದೆ. ಕೊಡಗು ಗೌಡ ಯುವ ವೇದಿಕೆಯ ಕಾರ್ಯಕ್ರಮಗಳಿಗೆ ಶಾಸಕರಿಬ್ಬರು ಸಂಪೂರ್ಣ ಸಹಕಾರ ನೀಡಿದ್ದಾರೆ. ಮುಂದಿನ ದಿನಗಳಲ್ಲಿಯೂ ವೇದಿಕೆಯ ಕಾರ್ಯಕ್ರಮಕ್ಕೆ ಸರಕಾರದ ಮೂಲಕ ಅನುದಾನ ಕೊಡಿಸುವ ಭರವಸೆ ದೊರೆತ್ತಿದೆ. ಉತ್ಸಾಹಿ ಯುವ ಶಾಸಕರು ಮತ್ತಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು, ಯುವಶಕ್ತಿಗೆ ಸ್ಫೂರ್ತಿ ತುಂಬಲು ಮತ್ತು ಇವರ ಸೇವೆ ರಾಜ್ಯದ ಜನತೆಗೆ ಲಭಿಸಲು ಸಚಿವ ಸ್ಥಾನದ ಅನಿವಾರ್ಯತೆ ಇದೆ. ನೂತನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಕೊಡಗಿನ ಜನರ ಈ ಬೇಡಿಕೆಯನ್ನು ಈಡೇರಿಸಬೇಕೆಂದು ಬಾಲಾಡಿ ಮನೋಜ್ ಮನವಿ ಮಾಡಿದ್ದಾರೆ.








