
ಮಡಿಕೇರಿ ಜೂ.5 NEWS DESK : ಕಾಡಾನೆ ದಾಳಿಗೆ ಸಿಲುಕಿ ಮಹಿಳೆಯೊಬ್ಬರು ಮೃತಪಟ್ಟ ಘಟನೆ ತಿತಿಮತಿ ಸಮೀಪದ ಕೋಣನಕಟ್ಟೆ ಗ್ರಾಮದ ಕಾಫಿ ತೋಟವೊಂದರಲ್ಲಿ ನಡೆದಿದೆ. ನಾಗಲ್ಯಾಂಡ್ ಕೇಡರ್ ಹಿರಿಯ ಐಪಿಎಸ್ ಅಧಿಕಾರಿ ಐಜಿಪಿ ಅಣ್ಣಳಮಾಡ ಸುನಿಲ್ ಅಚ್ಚಯ್ಯ ಅವರ ಪತ್ನಿ ಸಂಧ್ಯಾ (51) ಎಂಬುವವರೇ ಮೃತ ದುರ್ದೈವಿ. ಇಂದು ಬೆಳಿಗ್ಗೆ ಕೋಣನಕಟ್ಟೆಯಲ್ಲಿರುವ ಕಾಫಿ ತೋಟವನ್ನು ವೀಕ್ಷಿಸುತ್ತಿದ್ದ ಸಂದರ್ಭ ಕಾಡಾನೆ ಏಕಾಏಕಿ ದಾಳಿ ಮಾಡಿದೆ. ತೀವ್ರವಾಗಿ ಗಾಯಗೊಂಡ ಸಂಧ್ಯಾ ಅವರನ್ನು ಗೋಣಿಕೊಪ್ಪಲು ಆಸ್ಪತ್ರೆಗೆ ಕರೆ ತರುವ ಸಂದರ್ಭ ಮಾರ್ಗ ಮಧ್ಯೆ ಮೃತಪಟ್ಟರು ಎಂದು ತಿಳಿದು ಬಂದಿದೆ.
ಕಾಡಾನೆ ದಾಳಿ ಸಂದರ್ಭ ತೋಟದಲ್ಲಿದ್ದ ಕೆಲವು ಕಾರ್ಮಿಕರು ಓಡಿ ಹೋಗಿ ಜೀವ ಉಳಿಸಿಕೊಂಡಿದ್ದಾರೆ. ಸ್ಥಳಕ್ಕೆ ಅರಣ್ಯ ಅಧಿಕಾರಿಗಳು ಭೇಟಿ ನೀಡಿದರು. ಕಾಡಾನೆಗಳ ಉಪಟಳ ಮಿತಿ ಮೀರಿರುವ ಕುರಿತು ಸ್ಥಳೀಯ ಗ್ರಾಮಸ್ಥರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಣ್ಣಳಮಾಡ ಸಂಧ್ಯಾ ಅವರು ತಮ್ಮ ಇಬ್ಬರು ಪುತ್ರಿಯರ ಜೊತೆಯಲ್ಲಿ ಬೆಂಗಳೂರಿನ ಸುಲ್ತಾನ್ ಪಾಳ್ಯದಲ್ಲಿ ವಾಸವಾಗಿದ್ದು, ಪತಿ ಸುನೀಲ್ ಅಚ್ಚಯ್ಯ ಅವರು ಐಜಿಪಿ ಹುದ್ದೆಯೊಂದಿಗೆ ದೆಹಲಿಯಲ್ಲಿ ಕರ್ತವ್ಯದಲ್ಲಿದ್ದಾರೆ. ಶುಕ್ರವಾರ ಬೆಳಿಗ್ಗೆ ಕೋಣನಕಟ್ಟೆ ತೋಟದ ಕಡೆಗೆ ತೆರಳಿದ ಸಂದರ್ಭ ಕಾಡಾನೆ ಎದುರಾಗಿದೆ. ಕಾರ್ಮಿಕರು ಸ್ಥಳದಿಂದ ಓಡಿ ಕಾಡಾನೆ ದಾಳಿಯಿಂದ ತಪ್ಪಿಸಿಕೊಂಡಿದ್ದಾರೆ. ಆದರೆ ಸಂಧ್ಯಾ ಅವರ ಮೇಲೆ ದಾಳಿ ಮಾಡಿದ ಕಾಡಾನೆ ಗಂಭೀರವಾಗಿ ಗಾಯಗೊಳಿಸಿದೆ. ಸಂಧ್ಯಾ ಅವರನ್ನು ಪರೀಕ್ಷಿಸಿದ ವೈದ್ಯರು ಅವರು ಮೃತಪಟ್ಟಿರುವುದಾಗಿ ಘೋಷಿಸಿದರು. ಮೃತ ಸಂಧ್ಯಾ ಅವರು ಪತಿ ಅಣ್ಣಳಮಾಡ ಸುನಿಲ್ ಅಚ್ಚಯ್ಯ, ಪುತ್ರಿಯರಾದ ವಿದುಷ ಹಾಗೂ ಅನನ್ಯ ಅವರನ್ನು ಅಗಲಿದ್ದಾರೆ. *ಪ್ರತಿಭಟನೆ* ವಿಷಯ ತಿಳಿದ ಗ್ರಾಮಸ್ಥರು ಗೋಣಿಕೊಪ್ಪ ಸಮುದಾಯ ಆರೋಗ್ಯ ಕೇಂದ್ರದ ಮುಂದೆ ಜಮಾಯಿಸಿ ಅರಣ್ಯ ಇಲಾಖೆ ವಿರುದ್ದ ತೀವ್ರ ಆಕ್ರೋಷ ವ್ಯಕ್ತಪಡಿಸಿದರು. ಕಾಡಾನೆಗಳು ತೋಟಗಳಲ್ಲಿ ಬೀಡು ಬಿಟ್ಟಿವೆ. ಅರಣ್ಯ ಇಲಾಖೆ ಕಾಡಾನೆಗಳನ್ನು ನಿಯಂತ್ರಿಸಲು ಯಾವುದೇ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ. ಮಾನವ ಜೀವ ಹಾನಿಯಾದ ಸಂದರ್ಭ ಪರಿಹಾರದ ಚೆಕ್ ವಿತರಿಸಲು ಮಾತ್ರವೇ ಅರಣ್ಯ ಇಲಾಖೆ ಮುಂದಾಗುತ್ತಿದೆ ಎಂದು ಆಕ್ರೋಷ ಹೊರಗೆಡವಿದರು. ತಕ್ಷಣವೇ ಕಾಡಾನೆಗಳನ್ನು ಕಾಡಿಗಟ್ಟಲು ಕ್ರಮ ಕೈಗೊಳ್ಳಬೇಕು. ಕಾಡಂಚಿನ ಪ್ರದೇಶಗಳಲ್ಲಿ ಸೋಲಾರ್ ಬೇಲಿ, ರೈಲ್ವೇ ಬ್ಯಾರಿಕೇಡ್, ಆನೆ ಕಂದಕಗಳ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು. ಮಾನವ ಜೀವ ಹಾನಿ ಮಾಡುವ ಕಾಡಾನೆಗಳನ್ನು ಸೆರೆ ಹಿಡಿದು ಬೇರೆಡೆಗೆ ಸ್ಥಳಾಂತರಿಸಬೇಕು ಎಂದು ಒತ್ತಾಯಿಸಿದರು. *ಶಾಸಕರ ಭೇಟಿ* ವಿಷಯ ತಿಳಿದ ತಕ್ಷಣವೇ ಲೋಪಮುದ್ರ ಆಸ್ಪತ್ರೆಗೆ ಭೇಟಿ ನೀಡಿದ ವಿರಾಜಪೇಟೆ ಕ್ಷೇತ್ರ ಶಾಸಕ ಮೃತರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಕಾಡಾನೆ ದಾಳಿ ನಡೆಸಿದ ಸಂದರ್ಭ ತಪ್ಪಿಸಿಕೊಳ್ಳುವ ವೇಳೆ ಬಿದ್ದು ಗಾಯಗೊಂಡ ಕಾರ್ಮಿಕರ ಆರೋಗ್ಯ ವಿಚಾರಿಸಿದರು. ಗಾಯಾಳುಗಳಿಗೆ ಉನ್ನತ ಚಿಕಿತ್ಸೆ ನೀಡುವಂತೆಯೂ ಶಾಸಕರು ಸೂಚಿಸಿದರಲ್ಲದೇ, ವೈದ್ಯರಿಂದ ಗಾಯಾಳುಗಳ ಆರೋಗ್ಯದ ಕುರಿತು ಮಾಹಿತಿ ಪಡೆದರು. ಇದೇ ವೇಳೆ ಮಾನವ ಜೀವ ಹಾನಿ ಎಸಗಿದ ಕಾಡಾನೆಯ ಸೆರೆಗೂ ಶಾಸಕರು ಸೂಚನೆ ನೀಡಿದರು. ತೋಟಗಳಲ್ಲಿ ಬೀಡು ಬಿಟ್ಟಿರುವ ಕಾಡಾನೆಗಳನ್ನು ತಕ್ಷಣವೇ ಕಾಡಿಗೆ ಅಟ್ಟುವಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಶಾಸಕ ಪೊನ್ನಣ್ಣ ಸೂಚಿಸಿದರು.








