
ಮಡಿಕೇರಿ NEWS DESK ಜೂ.8 : ವಿರಾಜಪೇಟೆ ಕ್ಷೇತ್ರದ ಜನಸ್ನೇಹಿ ಶಾಸಕ ಎ.ಎಸ್.ಪೊನ್ನಣ್ಣ ಅವರಿಗೆ ರಾಜ್ಯ ಸಚಿವ ಸಂಪುಟ ವಿಸ್ತರಣೆಯ ಸಂದರ್ಭ ಸಚಿವ ಸ್ಥಾನ ಸಿಗಲಿದೆ ಎಂದು ಕೊಡಗು ಕ್ರಿಶ್ಚಿಯನ್ ಅಸೋಸಿಯೇಷನ್ ವಿಶ್ವಾಸ ವ್ಯಕ್ತಪಡಿಸಿದೆ. ಪತ್ರಿಕಾ ಪ್ರಕಟಣೆ ನೀಡಿರುವ ಅಸೋಸಿಯೇಷನ್ ಅಧ್ಯಕ್ಷ ಎ.ಜೆ.ಬಾಬು ಅವರು ಮೊದಲ ಸಂಪುಟ ರಚನೆಯ ಸಂದರ್ಭವೇ ಪೊನ್ನಣ್ಣ ಅವರು ಸಚಿವರಾಗಿ ಅಧಿಕಾರ ವಹಿಸಿಕೊಳ್ಳಬೇಕಿತ್ತು. ಆದರೆ ಸಚಿವ ಸ್ಥಾನ ಘೋಷಣೆಯಾಗಿಲ್ಲ, ಇದರಿಂದ ನಾವು ನಿರಾಶೆಗೊಂಡಿಲ್ಲ. ಬದಲಿಗೆ ಅತ್ಯಂತ ತಾಳ್ಮೆ ಮತ್ತು ವಿಶ್ವಾಸದೊಂದಿಗೆ ಸಚಿವ ಸಂಪುಟ ವಿಸ್ತರಣೆಯನ್ನು ಎದುರು ನೋಡುತ್ತಿದ್ದೇವೆ. ಕರ್ನಾಟಕದ ಆರ್ಥಿಕತೆ, ಪರಿಸರ ವ್ಯವಸ್ಥೆ ಮತ್ತು ಸಂಸ್ಕೃತಿಗೆ ಅಪಾರ ಕೊಡುಗೆ ನೀಡಿರುವ ಕೊಡಗು ಜಿಲ್ಲೆಯ ಬೇಡಿಕೆಗೆ ಸೂಕ್ತ ಮನ್ನಣೆ ದೊರೆಯುತ್ತದೆ ಎನ್ನುವ ವಿಶ್ವಾಸ ನಮ್ಮಲ್ಲಿದೆ ಎಂದು ತಿಳಿಸಿದ್ದಾರೆ. ಸಚಿವ ಸಂಪುಟ ರಚನೆಗೆ ಮೊದಲೇ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಕೊಡಗು ಕ್ರಿಶ್ಚಿಯನ್ ಅಸೋಸಿಯೇಷನ್ ವಿವರವಾದ ಮನವಿ ಪತ್ರವನ್ನು ಸಲ್ಲಿಸಿ, ಪೊನ್ನಣ್ಣ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಕೋರಿತ್ತು. ಇದೀಗ ಮತ್ತೊಮ್ಮೆ ಸಚಿವ ಸ್ಥಾನ ನೀಡಲೇಬೇಕೆನ್ನುವ ನಮ್ಮ ಒತ್ತಾಯವನ್ನು ಪುನರುಚ್ಚರಿಸುತ್ತಿದ್ದೇವೆ. ವೈಯುಕ್ತಿಕ ಗೌರವಕ್ಕಾಗಿ ಸಚಿವ ಸ್ಥಾನವನ್ನು ಕೇಳುತ್ತಿಲ್ಲ, ದಕ್ಷ ರಾಜಕಾರಣಿ ಪೊನ್ನಣ್ಣ ಅವರು ಈ ನೆಲದ ಜನರ ಸೇವೆಯನ್ನು ಶ್ರೇಷ್ಠತೆಯಿಂದ ಮಾಡಬೇಕೆನ್ನುವುದು ನಮ್ಮ ಉದ್ದೇಶ. ಯೋಗ್ಯ ಸ್ಥಾನ ದೊರೆಯುವ ದೃಢ ವಿಶ್ವಾಸವಿದೆ. ಕ್ರೆöÊಸ್ತ ಸಮುದಾಯ ಹಾಗೂ ಕೊಡಗಿನ ಎಲ್ಲಾ ನಿವಾಸಿಗಳು ಐಕ್ಯರಾಗಿ, ಪ್ರಾರ್ಥನಾಪೂರ್ವಕರಾಗಿ ಮತ್ತು ದೃಢವಾಗಿ ಇರಬೇಕೆಂದು ಕೊಡಗು ಕ್ರಿಶ್ಚಿಯನ್ ಅಸೋಸಿಯೇಷನ್ ಕರೆ ನೀಡುತ್ತದೆ. ಇದು ಅನುಮಾನದ ಕ್ಷಣವಲ್ಲ, ಬದಲಿಗೆ ನಂಬಿಕೆಯ ಮಹಾಕ್ಷಣವಾಗಿದೆ ಎಂದು ಎ.ಜೆ.ಬಾಬು ತಿಳಿಸಿದ್ದಾರೆ.








