
ಮಡಿಕೇರಿ NEWS DESK ಜೂ.8 : ರಾಜ್ಯದ ಸರಕಾರಿ ಶಾಲೆಗಳಲ್ಲಿ ಹೊಸ ಶೈಕ್ಷಣಿಕ ವರ್ಷ ಆರಂಭವಾಗಿದೆ. ಅನೇಕ ಸಮಸ್ಯೆಗಳು ಮತ್ತು ಕೊರತೆಗಳು ಶಾಲೆಗಳನ್ನು ಕಾಡುತ್ತಿದೆ. ನೂತನ ಮುಖ್ಯಮಂತ್ರಿಗಳು ಸಂಭ್ರಮಾಚರಣೆಯನ್ನು ಬಿಟ್ಟು ಸರಕಾರಿ ಶಾಲೆಗಳಿಗೆ ಭೇಟಿ ನೀಡಿ ಸಮಸ್ಯೆಗಳಿಗೆ ಪರಿಹಾರ ಸೂಚಿಸಲಿ ಎಂದು ಆಮ್ ಆದ್ಮಿ ಪಾರ್ಟಿಯ ಕೊಡಗು ಜಿಲ್ಲಾಧ್ಯಕ್ಷ ಮುಕ್ಕಾಟಿರ ಅಪ್ಪಯ್ಯ ಅವರು ಒತ್ತಾಯಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ಸರಕಾರಿ ಶಾಲೆಗಳಲ್ಲಿ ಮೂಲಭೂತ ಸೌಲಭ್ಯಗಳ ಕೊರತೆಯಿದ್ದು, ಶಾಲಾ ಕೊಠಡಿ, ಪೀಠೋಪಕರಣಗಳು, ಶೌಚಾಲಯ ಸಮರ್ಪಕವಾಗಿಲ್ಲ. ನಲಿ-ಕಲಿ ಪದ್ಧತಿಯಿಂದ ದ್ವಿಭಾಷಾ ತರಗತಿಗಳ ವ್ಯವಸ್ಥೆಗೆ ಬದಲಾವಣೆ ಮಾಡಿರುವುದಾಗಿ ದೊಡ್ಡ ಪ್ರಮಾಣದಲ್ಲಿ ಪ್ರಚಾರ ಮಾಡಿಕೊಂಡಿದ್ದರೂ, ಅಗತ್ಯ ಮೂಲಸೌಕರ್ಯಗಳನ್ನು ಒದಗಿಸುವಲ್ಲಿ ಸರಕಾರ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿದ್ದಾರೆ. ಸರಕಾರಿ ಶಾಲೆಗಳು ದಾನಿಗಳಿಂದ ನೆರವು ಕೇಳುವ ಪರಿಸ್ಥಿತಿ ನಿರ್ಮಾಣವಾಗಿರುವುದು ದುರಂತ. ಕೆಲವು ಶಾಲೆಗಳಲ್ಲಿ ಬಿಸಿಯೂಟಕ್ಕೆ ಅಡುಗೆ ಅನಿಲದ ಕೊರತೆಯೂ ಎದುರಾಗಿರುವ ಮಾಹಿತಿ ಲಭಿಸಿದೆ. ರಾಜ್ಯದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಮತ್ತು ಗೌರವಯುತ ಕಲಿಕಾ ವಾತಾವರಣ ಒದಗಿಸುವುದು ಸರಕಾರದ ಜವಾಬ್ದಾರಿಯಾಗಿದೆ. ಈ ಜವಾಬ್ದಾರಿಯಿಂದ ಸರಕಾರ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಶೈಕ್ಷಣಿಕ ವರ್ಷ ಆರಂಭಗೊಳ್ಳುವ ಮೊದಲೇ ಎಲ್ಲಾ ಮೂಲಭೂತ ಸೌಲಭ್ಯಗಳನ್ನು ಒದಗಿಸದೆ ಶಿಕ್ಷಣ ಇಲಾಖೆ ನಿರ್ಲಕ್ಷ್ಯ ವಹಿಸಿದೆ. ಮಕ್ಕಳ ಭವಿಷ್ಯದೊಂದಿಗೆ ಯಾರೂ ಚೆಲ್ಲಾಟವಾಡಬಾರದು. ಈ ಬಗ್ಗೆ ಸರಕಾರ ಕೂಲಂಕುಷವಾಗಿ ಪರಿಶೀಲಿಸಿ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿರುವ ಮುಕ್ಕಾಟಿರ ಅಪ್ಪಯ್ಯ ಶಾಲೆಗಳು ಮತ್ತು ಶೈಕ್ಷಣಿಕ ಅಭಿವೃದ್ಧಿಗೆ ಮೀಸಲಿಟ್ಟ ಹಣ ಎಲ್ಲಿಗೆ ಹೋಗುತ್ತಿದೆ ಎಂದು ಪ್ರಶ್ನಿಸಿದ್ದಾರೆ. *ಕೊಡಗಿಗೆ ಭೇಟಿ ನೀಡಲಿ* ಕಾವೇರಿ ನಾಡು ಕೊಡಗು ಜಿಲ್ಲೆಯಲ್ಲಿ ಅನೇಕ ಸಮಸ್ಯೆಗಳಿವೆ. ವನ್ಯಜೀವಿಗಳ ದಾಳಿಯಿಂದ ಅಮಾಯಕ ಜೀವಗಳು ಬಲಿಯಾಗುತ್ತಿವೆ, ಮಳೆಗಾಲದಲ್ಲಿ ಕಷ್ಟನಷ್ಟಗಳು ಸಂಭವಿಸುತ್ತವೆ. ಆದ್ದರಿಂದ ಮುಖ್ಯಮಂತ್ರಿಗಳು ಜಿಲ್ಲೆಗೆ ಬಂದು ಅಧಿಕಾರಿಗಳ ಸಭೆ ನಡೆಸಿ ಸಮಸ್ಯೆಗಳಿಗೆ ಪರಿಹಾರ ಸೂಚಿಸಲಿ ಎಂದು ಒತ್ತಾಯಿಸಿದ್ದಾರೆ.








