

ಮಡಿಕೇರಿ NEWS DESK ಜೂ.9 : ಮಡಿಕೇರಿ ನಗರದ ಮಹದೇವಪೇಟೆಯ ಎಸ್.ಎಸ್ ಆಸ್ಪತ್ರೆಯ 5ನೇ ವಾರ್ಷಿಕೋತ್ಸವವನ್ನು ಸಂಭ್ರಮದಿoದ ನಡೆಯಿತು. ಆಸ್ಪತ್ರೆಯಲ್ಲಿ ನಡೆದ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ನಗರಸಭಾ ಅಧ್ಯಕ್ಷೆ ಪಿ.ಕಲಾವತಿ ಅವರು, ಇಬ್ಬರು ವಿಶೇಷ ಚೇತನ ಮಕ್ಕಳ ಪೋಷಕರಿಗೆ ಆರ್ಥಿಕ ನೆರವು ನೀಡುವ ಮೂಲಕ ಎಸ್.ಎಸ್ ಆಸ್ಪತ್ರೆಯ ಆಡಳಿತ ಮಂಡಳಿ 5ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿರುವುದು ಶ್ಲಾಘನೀಯ. ಈ ಕಾರ್ಯ ಇತರರಿಗೂ ಮಾದರಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ನಗರಸಭೆಯ ಉಪಾಧ್ಯಕ್ಷ ಮಹೇಶ್ ಜೈನಿ ಅವರು ಮಾತನಾಡಿ, ಎಸ್.ಎಸ್ ಆಸ್ಪತ್ರೆ ಪ್ರತಿವರ್ಷ ಸಮಾಜಮುಖಿ ಕಾರ್ಯದೊಂದಿಗೆ ವಾರ್ಷಿಕೋತ್ಸವವನ್ನು ವಿಭಿನ್ನ ರೀತಿಯಲ್ಲಿ ಆಚರಿಸಿಕೊಂಡು ಬರುತ್ತಿದೆ. ವೈದ್ಯಕೀಯ ಸೇವೆಯೊಂದಿಗೆ ಸಮಾಜಕ್ಕೆ ಮಾದರಿಯಾದ ಕಾರ್ಯವನ್ನು ಮಾಡಿರುವುದು ಹೆಮ್ಮೆಯ ವಿಚಾರ. ಮುಂದಿನ ದಿನಗಳಲ್ಲಿ ಸುಸಜ್ಜಿತ ಆಸ್ಪತ್ರೆಯನ್ನು ನಿರ್ಮಾಣ ಮಾಡಿ ಕೊಡಗಿನ ಜನತೆಗೆ ಹೆಚ್ಚಿನ ವೈದ್ಯಕೀಯ ಸೇವೆಯನ್ನು ನೀಡುವಂತಾಗಲಿ ಎಂದು ಶುಭ ಹಾರೈಸಿದರು.
ನಗರಸಭೆಯ ಮಾಜಿ ಅಧ್ಯಕ್ಷ ಹೆಚ್.ಎಂ.ನoದಕುಮಾರ್ ಅವರು ಮಾತನಾಡಿ ಎಸ್.ಎಸ್ ಆಸ್ಪತ್ರೆ ಸೇವಾ ಮನೋಭಾವನೆಯೊಂದಿಗೆ ಕಾರ್ಯನಿರ್ವಹಿಸುತ್ತಿದ್ದು, ಆಸ್ಪತ್ರೆಯ ಸಾಮಾಜಿಕ ಕಳಕಳಿ ಇತರರಿಗೆ ಮಾದರಿಯಾಗಿದೆ ಎಂದರು. ಮಾಜಿ ಉಪಾಧ್ಯಕ್ಷೆ ಸವಿತಾ ರಾಕೇಶ್ ಅವರು ಮಾತನಾಡಿ, ಎಸ್.ಎಸ್. ಆಸ್ಪತ್ರೆಯ ವೈದ್ಯರಾದ ಡಾ.ಸತೀಶ್ ಹಾಗೂ ಡಾ.ಶಿಲ್ಪಾ ಸತೀಶ್ ಅವರ ವೈದ್ಯಕೀಯ ಸೇವೆಯ ಕುರಿತು ಶ್ಲಾಘನೆ ವ್ಯಕ್ತಪಡಿಸಿದರು. ಎಸ್.ಎಸ್ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕರಾದ ಡಾ.ಶಿಲ್ಪಾ ಸತೀಶ್ ಅವರು ಮಾತನಾಡಿ, ಪ್ರತಿವರ್ಷ ವಾರ್ಷಿಕೋತ್ಸವವನ್ನು ವಿಭಿನ್ನ ಕಾರ್ಯಕ್ರಮಗಳೊಂದಿಗೆ ಆಚರಿಸಿಕೊಂಡು ಬರಲಾಗುತ್ತಿದೆ. ಕಳೆದ ಬಾರಿಯ ವಾರ್ಷಿಕೋತ್ಸವದಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಬ್ಯಾಗ್ ಮತು ಕೊಡೆಗಳನ್ನು ವಿತರಿಸಲಾಗಿದೆ. ಪ್ರಸ್ತುತ 5ನೇ ವಾರ್ಷಿಕೋತ್ಸವದ ಪ್ರಯುಕ್ತ ಇಬ್ಬರು ವಿಶೇಷ ಚೇತನ ಮಕ್ಕಳನ್ನು ಆಯ್ಕೆ ಮಾಡಿ ಆರ್ಥಿಕ ನೆರವು ಮತ್ತು ದೈನಂದಿನ ಬಳಕೆಯ ವಸ್ತುಗಳ ಕಿಟ್ ಗಳನ್ನು ನೀಡಲು ಉದ್ದೇಶಿಸಲಾಗಿದೆ ಎಂದರು. ವಿಶೇಷ ಚೇತನ ಮಕ್ಕಳ ಆರೈಕೆ ಸಾಮಾನ್ಯ ಮಕ್ಕಳಂತೆ ಅಷ್ಟು ಸುಲಭವಲ್ಲ. ಪೋಷಕರು ಸದಾ ಒತ್ತಡದಲ್ಲಿ ಬದುಕು ಸಾಗಿಸಬೇಕು. ದಿನದ 24 ಗಂಟೆಯು ಮಕ್ಕಳ ಬಗ್ಗೆ ವಿಶೇಷ ಮುತುವರ್ಜಿ ವಹಿಸಬೇಕು. ಆದ್ದರಿಂದ ಸಮಾಜ ವಿಶೇಷ ಚೇತನ ಮಕ್ಕಳ ಪೋಷಕರಿಗೆ ಸಹಕಾರ ನೀಡಬೇಕು ಎಂದು ತಿಳಿಸಿದರು. ವಿಶೇಷ ಚೇತನ ಮಕ್ಕಳ ಬಗ್ಗೆ ಪ್ರೀತಿ ವಾತ್ಸಲ್ಯ ತೋರಬೇಕೆಂಬ ಅರಿವು ಮೂಡಿಸುವ ಉದ್ದೇಶದಿಂದ ಇಬ್ಬರು ವಿಶೇಷ ಚೇತನ ಮಕ್ಕಳಿಗೆ ಆರ್ಥಿಕ ನೆರವು ನೀಡಲಾಗುತ್ತಿದೆ ಎಂದು ಡಾ.ಶಿಲ್ಪಾ ಸತೀಶ್ ಹೇಳಿದರು. ಎಸ್.ಎಸ್ ಆಸ್ಪತ್ರೆಯ ವೈದ್ಯ ಡಾ.ಸತೀಶ್ ಅವರು ಮಾತನಾಡಿ, ಮೈಸೂರು ಮಹಾರಾಜರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಜನ್ಮದಿನದಂದು 2021ರಲ್ಲಿ ಆಸ್ಪತ್ರೆಯನ್ನು ಆರಂಭಿಸಲಾಯಿತು. ಒಡೆಯರ್ ಅವರ ಆಡಳಿತವವನ್ನು ಮಾದರಿಯಾಗಿಟ್ಟುಕೊಂಡು ಜನರಿಗೆ ವೈದ್ಯಕೀಯ ಸೇವೆ ಕಲ್ಪಿಸುವ ಪ್ರಯತ್ನ ಮಾಡಲಾಗುತ್ತಿದೆ. ಸರಾಸರಿ 12ರಿಂದ 13 ಸಾವಿರ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ 50 ಹಾಸಿಗೆಗಳ ಸಾಮರ್ಥ್ಯದ ಸುಸಜ್ಜಿತ ಆಸ್ಪತ್ರೆಯನ್ನು ನಿರ್ಮಿಸಿ ತಜ್ಞ ವೈದ್ಯರ ಸೇವೆಯನ್ನು ಜನರಿಗೆ ನೀಡುವ ಉದ್ದೇಶ ಹೊಂದಲಾಗಿದೆ ಎಂದರು.
ಆರ್.ಕೆ ಪ್ರಯೋಗಾಲಯದ ಮಾಲೀಕ ಪ್ರದೀಪ್ ಕುಮಾರ್ ಕೆ.ಎಸ್ ಅವರು ಮಾತನಾಡಿ, ಇಲ್ಲಿಯವರೆಗೆ 50 ಸಾವಿರಕ್ಕೂ ಅಧಿಕ ರೋಗಿಗಳಿಗೆ ವೈದ್ಯಕೀಯ ಸೇವೆ ಒದಗಿಸಲಾಗಿದೆ. ಮುಂದಿನ ದಿನಗಳಲ್ಲಿ ಉತ್ತಮ ವೈದ್ಯಕೀಯ ಚಿಕಿತ್ಸೆ ಒಳಗೊಂಡ ಸುಸಜ್ಜಿತ ಆಸ್ಪತ್ರೆ ರೋಗಿಗಳ ಸೇವೆಗೆ ಒದಗಲಿದೆ ಎಂದು ತಿಳಿಸಿದರು. ಸಮಾರಂಭದಲ್ಲಿ ಇಬ್ಬರು ವಿಶೇಷ ಚೇತನ ಮಕ್ಕಳ ಪೋಷಕರಿಗೆ ಎಸ್.ಎಸ್ ಆಸ್ಪತ್ರೆ ವತಿಯಿಂದ ಆರ್ಥಿಕ ನೆರವು ಮತ್ತು ದೈನಂದಿನ ಅಗತ್ಯ ವಸ್ತುಗಳನ್ನು ವಿತರಿಸಲಾಯಿತು. ಮಡಿಕೇರಿ ನಗರದ ಎ.ಎಲ್.ಜಿ ಕ್ರೆಸೆಂಟ್ ಸ್ಕೂಲ್ ನ ಆಡಳಿತ ಮಂಡಳಿಯ ನಿರ್ದೇಶಕ ಹನೀಫ್, ಪ್ರಮುಖರಾದ ಹಂಝ, ಕವಿತಾ ಹಾಗೂ ಬಿ.ಎಸ್.ಮಣಿ ಉಪಸ್ಥಿತರಿದ್ದರು.









