
ಮಡಿಕೇರಿ ಜೂ.9 NEWS DESK : ವಿರಾಜಪೇಟೆ ಕಾವೇರಿ ಪದವಿ ಪೂರ್ವ ಕಾಲೇಜಿನಲ್ಲಿ “ಅಂತರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಿನವನ್ನು ಆಚರಿಸಲಾಯಿತು. ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾದ ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯ ಉಪ ನಿರೀಕ್ಷಕರಾದ ಎನ್.ಜೆ.ಲತಾ ಅವರು ವಿದ್ಯಾರ್ಥಿಗಳಿಗೆ ಮಾದಕ ವ್ಯಸನ ಮತ್ತು ಮಾದಕ ವಸ್ತುಗಳ ಕುರಿತು ವಿದ್ಯಾರ್ಥಿಗಳಿಗೆ ಅರಿವು ಮೂಡಿಸಿದರು. ಮಾದಕ ವಸ್ತುಗಳ ಸೇವನೆಯು ಇಂದಿನ ಸಮಾಜದ ಒಂದು ಗಂಭೀರ ಸಮಸ್ಯೆಯಾಗಿದೆ. ಯುವಜನತೆ ಕುತೂಹಲ, ಸ್ನೇಹಿತರ ಒತ್ತಡ ಹಾಗೂ ತಪ್ಪು ಅಭ್ಯಾಸಗಳಿಂದ ಮಾದಕ ವಸ್ತುಗಳ ವ್ಯಸನಕ್ಕೆ ಒಳಗಾಗುತ್ತಿದ್ದಾರೆ. ಆರಂಭದಲ್ಲಿ ಇದು ತಾತ್ಕಾಲಿಕ ಸಂತೋಷವನ್ನು ನೀಡಿದರೂ, ನಂತರ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಹಾಳುಮಾಡುತ್ತದೆ ಎಂದರು. ಮಾದಕ ವಸ್ತುಗಳ ವ್ಯಸನದಿಂದ ಶಿಕ್ಷಣ, ಉದ್ಯೋಗ, ಕುಟುಂಬ ಮತ್ತು ಸಾಮಾಜಿಕ ಜೀವನದ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ. ವ್ಯಸನಿಗಳು ಅನೇಕ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಾರೆ ಮತ್ತು ಕೆಲವೊಮ್ಮೆ ಅಪರಾಧ ಚಟುವಟಿಕೆಗಳತ್ತವೂ ತಿರುಗುವ ಸಾಧ್ಯತೆ ಇರುತ್ತದೆ. ಈ ಸಮಸ್ಯೆಯನ್ನು ತಡೆಗಟ್ಟಲು ಪೋಷಕರು, ಶಿಕ್ಷಕರು, ಸರ್ಕಾರ ಮತ್ತು ಸಮಾಜ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು. ಶಾಲಾ-ಕಾಲೇಜುಗಳಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಯುವಜನತೆ ಉತ್ತಮ ಸ್ನೇಹ ಬಳಗವನ್ನು ಆಯ್ಕೆ ಮಾಡಿಕೊಂಡು ಕ್ರೀಡೆ, ಓದು ಮತ್ತು ಸೃಜನಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕೆಂದು ಸಲಹೆ ನೀಡಿದರು. ಕಾರ್ಯಕ್ರಮದಲ್ಲಿ ವೀಣಾ ಮತ್ತು ತಂಡದವರು ಪ್ರಾರ್ಥಿಸಿದರು. ವಿದ್ಯಾರ್ಥಿಗಳಾದ ವೀಣಾ ಮತ್ತು ಕಾವ್ಯ ನಿರೂಪಿಸಿದರು. ಕಾಲೇಜಿನ ಪ್ರಾಂಶುಪಾಲರಾದ ಎಂ.ಕೆ.ಪದ್ಮ ಸ್ವಾಗತಿಸಿದರು. ರಾಷ್ಟ್ರೀಯ ಸೇವಾ ಯೋಜನಾ ಘಟಕದ ಕಾರ್ಯಕ್ರಮಾಧಿಕಾರಿ ಅನುಪಮಾ ತಿಮ್ಮಯ್ಯ ವಂದಿಸಿದರು. ಕಾರ್ಯಕ್ರಮದಲ್ಲಿ ಉಪನ್ಯಾಸಕ ವೃಂದದವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದು, ರಾಷ್ಟ್ರ ಗೀತೆಯೊಂದಿಗೆ ಮುಕ್ತಯಗೊಳಿಸಲಾಯಿತು.









