
ಗೋಣಿಕೊಪ್ಪ ಜೂ.9 NEWS DESK : ಕೊಡಗು ಜಿಲ್ಲೆಯಲ್ಲಿ ಹಸಿರು ಹೊದಿಕೆ ಹೆಚ್ಚಿದ್ದರೂ ಸಹ ಪ್ರಾಕೃತಿಕ ವಿಕೋಪಗಳು ಸಂಭವಿಸಿದೆ ಹಾಗೂ ವನ್ಯಜೀವಿ ಮಾನವ ಸಂಘರ್ಷ ಹೆಚ್ಚಿದೆ. ಪ್ರಕೃತಿ, ವನ್ಯಜೀವಿಗಳ ಮೇಲೆ ಕಾಳಜಿಯೊಂದಿಗೆ ಜನರಿಗೆ ನೆಮ್ಮದಿಯಿಂದ ಬದುಕುವ ಅವಕಾಶ ಕೂಡ ಆಗಬೇಕು ಎಂದು ಮೈಸೂರು ಕೊಡಗು ಸಂಸದ ಯದುವೀರ್ ಒಡೆಯರ್ ಅಭಿಪ್ರಾಯಪಟ್ಟರು. ಗೋಣಿಕೊಪ್ಪ ಕೃಷಿ ವಿಜ್ಞಾನ ಕೇಂದ್ರದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ನಡೆದ ಒಂದು ಗಿಡ ತಾಯಿಯ ಹೆಸರಿನಲ್ಲಿ ಕಾರ್ಯಕ್ರಮವನ್ನು ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ವನ್ಯಜೀವಿ ಮಾನವ ಸಂಘಷಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಿದೆ. ಎಲ್ಲಾ ಜಿಲ್ಲೆಗಳಲ್ಲಿ ಪ್ರಕೃತಿಗೆ ಸಂಬ0ಧಿಸಿದ ಸಮಸ್ಯೆಗಳು ಇದೆ. ಇದಕ್ಕೆ ಪೂರಕವಾಗಿ ಹಸಿರು ಹೊದಿಕೆ ಹೆಚ್ಚಿಸುವ ಕಾರ್ಯಕ್ರಮಗಳನ್ನು ಹೆಚ್ಚು ಮಾಡಬೇಕಿದೆ. ಪರಿಸರ ಕಾಳಜಿಯಿಂದ ಕೈಗೊಳ್ಳುವ ಕಾರ್ಯಕ್ರಮಗಳಿಗೆ ಸಮಾಜದಲ್ಲಿ ಸಕಾರಾತ್ಮಕವಾದ ಪ್ರತಿಕ್ರಿಯೆಗಳು ಸಿಗಲಿದೆ ಎಂದು ಹೇಳಿದರು. ಎಂಎಲ್ಸಿ ಮಂಡೇಪ0ಡ ಸುಜಾಕುಶಾಲಪ್ಪ ಮಾತನಾಡಿ, ಹಸಿರೆಲೆ ಗೊಬ್ಬರಗಳ ಬಳಕೆ ಕಡೆಗೆ ಹೆಚ್ಚು ಗಮನ ಹರಿಸಬೇಕು. ಹಿರಿಯರು ಕಿರಿಯರಿಗೆ ತಮ್ಮ ತೋಟಗಳಲ್ಲಿ ಕೃಷಿಯ ಜವಾಬ್ದಾರಿಯನ್ನು ಅರಿವಿಕೆಗೆ ತರುವ ಮೂಲಕ ಕೃಷಿಯಲ್ಲಿ ತೊಡಗಿಸಿಕೊಳ್ಳಲು ಪ್ರೇರಣೆ ನೀಡಬೇಕು. ಇದರಿಂದ ಪರಿಸರ ಕಾಳಜಿ ಕೂಡಾ ಹೆಚ್ಚಾಗಲಿದೆ ಎಂದು ಹೇಳಿದರು. ಈ ಸಂದರ್ಭ ಎಂಎಲ್ಸಿ ಸುಜಾ ಕುಶಾಲಪ್ಪ, ಮಾಜಿ ಶಾಸಕ ಕೆ.ಜಿ ಬೋಪಯ್ಯ, ಬಿಜೆಪಿ ಜಿಲ್ಲಾಧ್ಯಕ್ಷ ನಾಪಂಡ ರವಿ ಕಾಳಪ್ಪ, ಕೆವಿಕೆ ಮುಖ್ಯಸ್ಥ ಮುರಳಿದರ್ ಇದ್ದರು.









