
ವಿರಾಜಪೇಟೆ ಜೂ.10 NEWS DESK : ವಿದ್ಯಾರ್ಥಿಗಳು ಓದಿನ ಜೊತೆಗೆ ಕೌಶಲ್ಯವನ್ನು ಬೆಳೆಸಿಕೊಳ್ಳಬೇಕು ಎಂದು ಕೊಡಗು ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಅಶೋಕ ಸಂಗಪ್ಪ ಆಲೂರು ಅವರು ಹೇಳಿದರು. ವಿರಾಜಪೇಟೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಾರ್ಷಿಕೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿಗಳು ದೇಶದ ಅಭಿವೃದ್ಧಿಯ ರೂವಾರಿಗಳು. ಮೂರು ವರ್ಷಗಳ ಪದವಿ ಶಿಕ್ಷಣವನ್ನು ಪಡೆದು ತೆರಳುವ ನೀವು ಸಮಾಜ ನೀಡುವ ಸವಾಲುಗಳನ್ನು ಧೈರ್ಯದಿಂದ ಎದುರಿಸಬೇಕು. ಓದುಗಾರಿಕೆಯ ಜೊತೆಗೆ ವಿವಿಧ ಕೌಶಲ್ಯಗಳನ್ನು ರೂಢಿಸಿಕೊಂಡು ಸಮಾಜದಲ್ಲಿ ಸತ್ಪ್ರಜೆಗಳಾಗಿ ಬಾಳಿರಿ ಎಂದು ಹೇಳಿದರು. ಭಾಗಮಂಡಲ ಕಾವೇರಿ ಪದವಿ ಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಕೆ.ಜೆ.ದಿವಾಕರ ಕುಂದಲ್ಪಾಡಿ ಅವರು ಮಾತನಾಡಿ, ವಿದ್ಯಾರ್ಥಿಗಳು ಉನ್ನತ ಶಿಕ್ಷಣವನ್ನು ಪಡೆಯಿರಿ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಾಗುವುದರ ಮೂಲಕ ಉತ್ತಮ ಉದ್ಯೋಗವನ್ನು ಪಡೆದು ಪೋಷಕರನ್ನು ಚೆನ್ನಾಗಿ ನೋಡಿಕೊಳ್ಳಿ ಎಂದು ಹಿತ ನುಡಿಗಳನ್ನಾಡಿದರು. ಸಮಾಜ ಹಾಗೂ ರಾಷ್ಟ್ರಕ್ಕೂ ಕೀರ್ತಿ ತನ್ನಿ ಎಂದು ಶುಭ ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲೆ ಡಾ. ಸರಸ್ವತಿ, ವಿದ್ಯಾರ್ಥಿಗಳು ಜೀವನದ ಮೌಲ್ಯಗಳಾದ ನಿಷ್ಠೆ, ಪ್ರಾಮಾಣಿಕತೆಗಳನ್ನು ರೂಢಿಸಿಕೊಳ್ಳಿ. ಸಮಾಜಕ್ಕೆ ಉತ್ತಮ ವ್ಯಕ್ತಿಗಳಾಗಿ ಎಂದು ಹೇಳಿದರು. ಮುಂಬರುವ ಪರೀಕ್ಷೆಗಳನ್ನು ದೈರ್ಯದಿಂದ ಎದುರಿಸಿರಿ ಎಂದು ಶುಭ ಹಾರೈಸಿದರು. ಈ ಸಂದರ್ಭ ಕಾಲೇಜಿನ ವಾರ್ಷಿಕ ಸಂಚಿಕೆಯಾದ ವಿರಾಜಮಾರ್ಗವನ್ನು ಬಿಡುಗಡೆಗೊಳಿಸಿದರು. ಸಮಾರಂಭದಲ್ಲಿ ವರ್ಷದ ಅತ್ಯುತ್ತಮ ವಿದ್ಯಾರ್ಥಿ ಪ್ರಶಸ್ತಿಯನ್ನು ತೃತೀಯ ಬಿಎ ವಿದ್ಯಾರ್ಥಿನಿ ಕೀರ್ತನ ಪಡೆದರು. ಅತ್ಯುತ್ತಮ ವಿದ್ಯಾರ್ಥಿ ನಾಯಕ ಪ್ರಶಸ್ತಿಯನ್ನು ತೃತೀಯ ಬಿಎ ವಿದ್ಯಾರ್ಥಿ ನಿಶಾನ್ ಜೋಸೆಫ್, ಅತ್ಯುತ್ತಮ ಶ್ರದ್ಧಾ ವಿದ್ಯಾರ್ಥಿ ಪ್ರಶಸ್ತಿಯನ್ನು ದರ್ಶನ್, ಅತ್ಯುತ್ತಮ ಕ್ರೀಡಾ ಪಟು ಪ್ರಶಸ್ತಿಯನ್ನು ರಸೀನ , ಅತ್ಯುತ್ತಮ ಸಾಂಸ್ಕೃತಿಕ ಪ್ರತಿಭೆ ಪ್ರಶಸ್ತಿಯನ್ನು ಸುಹೈರಾ ರವರಿಗೆ ವಿತರಿಸಲಾಯಿತು. ಎನ್ ಎಸ್ ಎಸ್ ಘಟಕದ ಅತ್ಯುತ್ತಮ ಸ್ವಯಂ ಸೇವಕರಾದ ತೃತೀಯ ಬಿಎ ವಿದ್ಯಾರ್ಥಿಗಳಾದ ಮಂಜು,ಚಂದ್ರಶೇಖರ, ಪುನೀತ್, ಕುಮಾರ್, ಸೋನಾ, ನಿವಿತಾ ರವರನ್ನು ಸನ್ಮಾನಿಸಿ ಗೌರವಿಸಲಾಯಿತು. ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಲಾಯಿತು. ಕಾಲೇಜಿನ ಸಾಂಸ್ಕೃತಿಕ ಸಮಿತಿಯ ಸಂಚಾಲಕರಾದ ಪ್ರೊ. ಬಸವರಾಜು ಕೆ ಕಾಲೇಜಿನ ವಾರ್ಷಿಕ ವರದಿಯನ್ನು ವಾಚಿಸಿದರು. ವಿದ್ಯಾರ್ಥಿ ಕ್ಷೇಮಪಾಲನ ಸಮಿತಿಯ ಸಂಚಾಲಕರಾದ ಡಾ. ದಯಾನಂದ ಕೆ ಸಿ ಸ್ವಾಗತಿಸಿ, ಕ್ರೀಡಾ ಸಮಿತಿಯ ಸಂಚಾಲಕ ಪ್ರೊ. ಗುರುಪ್ರಸಾದ್ ವಂದಿಸಿದರು. ಈ ಸಂದರ್ಭದಲ್ಲಿ ಪ್ರಾದ್ಯಾಪಕರುಗಳು, ಸಿಬ್ಬಂದಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.









