
ಸೋಮವಾರಪೇಟೆ ಜೂ.12 NEWS DESK : ಜಿಲ್ಲಾ, ತಾಲೂಕು, ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಐಗೂರು ಗ್ರಾಮದಲ್ಲಿ ತಾಲೂಕು 9ನೇ ಕನ್ನಡ ಸಾಹಿತ್ಯ ಸಮ್ಮೇಳನ ಅಭಿನಂದನಾ ಕಾರ್ಯಕ್ರಮ ಐಗೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಭವನದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಪರಿಷತ್‍ನ ಮಾಜಿ ಜಿಲ್ಲಾಧ್ಯಕ್ಷ ಟಿ.ಪಿ.ರಮೇಶ್ ಉದ್ಘಾಟಿಸಿದರು. ಜಿಲ್ಲಾಧ್ಯಕ್ಷ ಎಂ.ಪಿ.ಕೇಶವ ಕಾಮತ್ ಅವರು ಐಗೂರು ಐಸಿರಿ ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಿದರು. ನಂತರ ಅವರು ಮಾತನಾಡಿ, ಗ್ರಾಮೀಣ ಪ್ರದೇಶವಾದ ಐಗೂರು ಗ್ರಾಮದಲ್ಲಿ ಕನ್ನಡ ಮನಸ್ಸು ನಿರಂತರ ಶ್ರಮದಿಂದ ಕನ್ನಡ ಹಬ್ಬ ಯಶಸ್ವಿಯಾಗಿದೆ. 12 ಸಮಿತಿಗಳ ಸದಸ್ಯರುಗಳು ಹೆಚ್ಚಿನ ಆಸಕ್ತಿಯಿಂದ ತಮ್ಮ ಕರ್ತವ್ಯವನ್ನು ನಿಭಾಯಿಸಿದ್ದಾರೆ. ಶಾಸಕ ಡಾ.ಮಂತರ್‍ಗೌಡ ಅವರು ಎಲ್ಲ ರೀತಿಯಲ್ಲೂ ಸಹಕಾರ ನೀಡಿದ್ದಾರೆ ಎಂದು ಹೇಳಿದರು. ಇದೇ ಸಂದರ್ಭ ವಿವಿಧ ಸಮಿತಿಗಳ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಸಮ್ಮೇಳನಾಧ್ಯಕ್ಷರಾಗಿದ್ದ ಜಲಜಾ ಶೇಖರ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಸಂಜಯ್ ಜೀವಿಜಯ, ಐಗೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಚ್.ಬಿ.ಶಿವಕುಮಾರ್, ಕ.ಸಾ.ಪ ತಾಲೂಕು ಅಧ್ಯಕ್ಷ ಎಸ್.ಡಿ.ವಿಜೇತ್, ಗೌರವ ಕಾರ್ಯದರ್ಶಿ ಜ್ಯೋತಿ ಅರುಣ್, ನಿಕಟಪೂರ್ವ ಅಧ್ಯಕ್ಷ ಎಚ್.ಜೆ.ಜವರಪ್ಪ, ಹಣಕಾಸು ಸಮಿತಿ ಅಧ್ಯಕ್ಷ ಕೆ.ಪಿ.ರಾಯ್, ಆಹಾರ ಸಮಿತಿ ಅಧ್ಯಕ್ಷ ಮಚ್ಚಂಡ ಅಶೋಕ್, 8ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷೆ ನಯನತಾರ, ಐಗೂರು ಗ್ರಾಪಂ ಮಾಜಿ ಅಧ್ಯಕ್ಷ ವಿನೋದ್ ಮತ್ತಿತರರು ಇದ್ದರು.









