
ಮಡಿಕೇರಿ ಸೆ.2 NEWS DESK : ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಮಡಿಕೇರಿಯಲ್ಲಿ ಕರ್ನಾಟಕ ಆರ್ಥೋಪೆಡಿಕ್ ಅಸೋಸಿಯೇಷನ್ (KOA) ಹಾಗೂ ಸಂಸ್ಥೆಯ ಕೀಲು ಮತ್ತು ಮೂಳೆ ವಿಭಾಗದ ವತಿಯಿಂದ ಇದೇ ಮೊದಲ ಬಾರಿಗೆ ಮಧ್ಯವಾರ್ಷಿಕ ಸಮ್ಮೇಳನ ‘KOA-MYCON’ (Mid-Year Conference) ಅನ್ನು ಸೆಪ್ಟೆಂಬರ್ 5 ಮತ್ತು 6ರಂದು ಕಾಲೇಜು ಆವರಣದಲ್ಲಿ ಆಯೋಜಿಸಲಾಗಿದೆ. ಈ ಬಾರಿಯ ಸಮ್ಮೇಳನವು ‘KNEE 360’ ಎಂಬ ಶೀರ್ಷಿಕೆಯಡಿ ನಡೆಯಲಿದ್ದು, ಮಂಡಿ ಚಿಪ್ಪು ಮತ್ತು ಕೀಲು ಸಮಸ್ಯೆಗಳ ಕುರಿತು ಸಮಗ್ರ ಅಧ್ಯಯನ ಹಾಗೂ ಚರ್ಚೆಗೆ ವೇದಿಕೆ ಕಲ್ಪಿಸಲಿದೆ. ಸಮ್ಮೇಳನದಲ್ಲಿ ಮಂಡಿ ಕೀಲುಗಳಿಗೆ ಸಂಬಂಧಿಸಿದ ವಿವಿಧ ಸಮಸ್ಯೆಗಳು, ದಿನನಿತ್ಯದ ನಡಿಗೆ ಹಾಗೂ ಕಾರ್ಯಚಟುವಟಿಕೆಗಳಲ್ಲಿ ಎದುರಾಗುವ ತೊಂದರೆಗಳು, ಕ್ರೀಡಾಪಟುಗಳಲ್ಲಿ ಕಂಡುಬರುವ ಮಂಡಿ ಗಾಯಗಳು (Sports Injuries), ಸುಧಾರಿತ ಕೀಲು ಬದಲಿ ಶಸ್ತ್ರಚಿಕಿತ್ಸೆ (Arthroplasty), ಕೀಲು ತಪಾಸಣೆ ಮತ್ತು ಚಿಕಿತ್ಸಾ ವಿಧಾನಗಳು (Arthroscopy) ಸೇರಿದಂತೆ ನಾನಾ ಜಟಿಲ ಸಮಸ್ಯೆಗಳ ಕುರಿತು ರಾಜ್ಯದ ವಿವಿಧ ಭಾಗಗಳಿಂದ ಆಗಮಿಸುವ ತಜ್ಞ ವೈದ್ಯರು ಉಪನ್ಯಾಸ ನೀಡಲಿದ್ದಾರೆ. ಹಾಗೆಯೇ ವೈದ್ಯಕೀಯ ಕ್ಷೇತ್ರದ ನೂತನ ಬೆಳವಣಿಗೆಗಳು ಹಾಗೂ ಚಿಕಿತ್ಸಾ ವಿಧಾನಗಳ ಕುರಿತು ವಾದ-ಮಂಡನೆ, ವಿಚಾರ ವಿನಿಮಯ ಮತ್ತು ಸಂವಾದ ಕಾರ್ಯಕ್ರಮಗಳು ನಡೆಯಲಿವೆ. ಸಮ್ಮೇಳನವು ಸೆಪ್ಟೆಂಬರ್ 5 ಮತ್ತು 6ರಂದು ಮಡಿಕೇರಿಯ ಅಬ್ಬಿಫಾಲ್ಸ್ ರಸ್ತೆಯಲ್ಲಿರುವ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಬೋಧನಾ ಕೊಠಡಿಯಲ್ಲಿ ನಡೆಯಲಿದೆ. ಕಾರ್ಯಕ್ರಮಕ್ಕೆ ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ಮಂಥರ್ ಗೌಡ ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಮತ್ತು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎ.ಎಸ್. ಪೊನ್ನಣ್ಣ ಗೌರವಾನ್ವಿತ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಡೀನ್ ಹಾಗೂ ನಿರ್ದೇಶಕರಾದ ಡಾ. ಲೋಕೇಶ್ ಎ.ಜೆ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಕೊಡಗು ಜಿಲ್ಲಾಧಿಕಾರಿ ಸೋಮಶೇಖರ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಕರ್ನಾಟಕ ಆರ್ಥೋಪೆಡಿಕ್ ಅಸೋಸಿಯೇಷನ್ ಅಧ್ಯಕ್ಷ ಡಾ. ಸಚ್ಚಿದಾನಂದ ರೈ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ 300ಕ್ಕೂ ಹೆಚ್ಚು ಕೀಲು ಮತ್ತು ಮೂಳೆ ವಿಭಾಗದ ತಜ್ಞ ವೈದ್ಯರು ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ ಎಂದು ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಕೀಲು ಮತ್ತು ಮೂಳೆ ವಿಭಾಗದ ಮುಖ್ಯಸ್ಥ ಡಾ. ಆನಂದ್ ಕುಮಾರ್ ಬಿ.ಎಸ್. ತಿಳಿಸಿದ್ದಾರೆ.








