ಕುಶಾಲನಗರ, NEWS DESK ಸೆ.4: ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು (ಕ.ಸಾ.ಪ.), ಕುಶಾಲನಗರ ತಾಲ್ಲೂಕು ಕ.ಸಾ.ಪ. ಘಟಕ ಹಾಗೂ ಕುಶಾಲನಗರ ಕನ್ನಡ ಭಾರತಿ ಪ್ರಥಮ ದರ್ಜೆ ಕಾಲೇಜಿನ ಸಂಯುಕ್ತಾಶ್ರಯದಲ್ಲಿ ಸೆ.8ರಂದು (ಮಂಗಳವಾರ) ಬೆಳಿಗ್ಗೆ 10.45 ಗಂಟೆಗೆ ಇಲ್ಲಿನ ಕನ್ನಡ ಭಾರತಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕೊಡಗಿನ ತ್ರಿಭಾಷಾ ಸಾಹಿತಿ ದಿವಂಗತ ವಿ.ಎಸ್. ರಾಮಕೃಷ್ಣ ಅವರ ದತ್ತಿ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.
ಕುಶಾಲನಗರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ಎಸ್. ನಾಗೇಶ್ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಯಕ್ರಮವನ್ನು ಕನ್ನಡ ಭಾರತಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಕೆ.ಎಸ್. ರುದ್ರಪ್ಪ ಉದ್ಘಾಟಿಸಲಿದ್ದಾರೆ.
ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಪಿ. ಕೇಶವಕಾಮತ್ ಪ್ರಾಸ್ತಾವಿಕ ಭಾಷಣ ಮಾಡಲಿದ್ದಾರೆ.
ಕೊಡಗು ಜಿಲ್ಲಾ ಲೇಖಕರ ಮತ್ತು ಕಲಾವಿದರ ಬಳಗದ ಅಧ್ಯಕ್ಷ ಟಿ.ಜಿ. ಪ್ರೇಮಕುಮಾರ್ ಅವರು “ಕೊಡಗಿನ ತ್ರಿಭಾಷಾ ಸಾಹಿತಿ ದಿವಂಗತ ವಿ.ಎಸ್. ರಾಮಕೃಷ್ಣ ಅವರ ಕೃತಿಗಳು” ಕುರಿತು ಉಪನ್ಯಾಸ ನೀಡಲಿದ್ದಾರೆ ಎಂದು ತಾಲ್ಲೂಕು ಕಸಾಪ ಕೋಶಾಧಿಕಾರಿ ಕೆ.ವಿ. ಉಮೇಶ್ ತಿಳಿಸಿದ್ದಾರೆ.
ಮುಖ್ಯ ಅತಿಥಿಗಳಾಗಿ ಕುಶಾಲನಗರ ವಕೀಲರ ಸಂಘದ ಅಧ್ಯಕ್ಷ ಆರ್.ಕೆ. ನಾಗೇಂದ್ರಬಾಬು, ತಾಲ್ಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ಸಿ. ದಿನೇಶ್ ಹಾಗೂ ಕನ್ನಡ ಭಾರತಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ. ನಾಗೇಂದ್ರಸ್ವಾಮಿ ಎನ್. ಭಾಗವಹಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.








