ಪೊನ್ನಂಪೇಟೆ, NEWS DESK ಸೆ.15: ಕೊಡಗು ಜಿಲ್ಲೆಯಲ್ಲಿ ಕ್ರೀಡಾ ಪ್ರತಿಭೆಗಳಿಗೆ ಉತ್ತಮ ಅವಕಾಶ ಕಲ್ಪಿಸುವ ಉದ್ದೇಶದಿಂದ ಕ್ರೀಡಾ ಮೂಲಸೌಕರ್ಯ ಅಭಿವೃದ್ಧಿಗೆ ರಾಜ್ಯ ಸರ್ಕಾರ ಆದ್ಯತೆ ನೀಡಿದೆ ಎಂದು ವಿರಾಜಪೇಟೆ ಶಾಸಕರು ಹಾಗೂ ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿಗಳಾದ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಹೇಳಿದರು.
ಪೊನ್ನಂಪೇಟೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕ್ರೀಡಾ ಕೇಂದ್ರ ನಿರ್ಮಾಣಕ್ಕೆ ರಾಜ್ಯ ಬಜೆಟ್‌ನಲ್ಲಿ ₹30 ಕೋಟಿ ಮೊತ್ತದ ಪ್ರಸ್ತಾವನೆ ಸಿದ್ಧವಾಗಿದ್ದು, ಪ್ರಸಕ್ತ ಸಾಲಿನಲ್ಲಿ ₹10 ಕೋಟಿ ಅನುದಾನ ನೀಡುವ ಭರವಸೆ ದೊರೆತಿದೆ. ಮಳೆಗಾಲದ ಹಿನ್ನೆಲೆಯಲ್ಲಿ ಗುದ್ದಲಿಪೂಜೆ ಮುಂದೂಡಲಾಗಿದ್ದರೂ ಕಾಮಗಾರಿ ಸ್ಥಗಿತಗೊಳಿಸದೆ ಮುಂದುವರಿಸಲಾಗುತ್ತಿದೆ ಎಂದು ತಿಳಿಸಿದರು.
ವಿರಾಜಪೇಟೆ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಬಾಸ್ಕೆಟ್‌ಬಾಲ್ ಕೋರ್ಟ್ ನಿರ್ಮಾಣ ಪೂರ್ಣಗೊಂಡಿದ್ದು, ಅದನ್ನು ಒಳಾಂಗಣ ಕ್ರೀಡಾಂಗಣವಾಗಿ ಅಭಿವೃದ್ಧಿಪಡಿಸಲು ₹1 ಕೋಟಿಗೂ ಅಧಿಕ ಮೊತ್ತದ ಕಾಮಗಾರಿಗೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ. ಜಿಲ್ಲೆಯ ವಿವಿಧ ಕ್ರೀಡಾ ಯೋಜನೆಗಳಿಗೂ ಅಗತ್ಯ ಅನುದಾನ ಒದಗಿಸಲಾಗುತ್ತಿದೆ ಎಂದರು.
ಕೊಡಗು ಜಿಲ್ಲೆ ಕ್ರೀಡೆಗೆ ಹೆಸರುವಾಸಿಯಾಗಿದ್ದರೂ ಇತ್ತೀಚಿನ ದಿನಗಳಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಜಿಲ್ಲೆಯನ್ನು ಪ್ರತಿನಿಧಿಸುವ ಕ್ರೀಡಾಪಟುಗಳ ಸಂಖ್ಯೆ ಕಡಿಮೆಯಾಗಿದೆ. ಕ್ರೀಡಾ ಮೂಲಸೌಕರ್ಯ ಹಾಗೂ ವೈಜ್ಞಾನಿಕ ತರಬೇತಿಯ ಕೊರತೆಯನ್ನು ನಿವಾರಿಸಿ, ಮುಂದಿನ ದಿನಗಳಲ್ಲಿ ಕೊಡಗಿನಿಂದ ಅಂತರರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳು ಹೊರಹೊಮ್ಮುವಂತೆ ಮಾಡುವುದು ತಮ್ಮ ಉದ್ದೇಶವಾಗಿದೆ ಎಂದು ಪೊನ್ನಣ್ಣ ಹೇಳಿದರು.
ಪೊನ್ನಂಪೇಟೆ ಕ್ರೀಡಾ ಟರ್ಫ್ ಕಾಮಗಾರಿಯನ್ನು ನಡೆಯುತ್ತಿರುವ ಹಾಕಿ ಲೀಗ್‌ಗೆ ಅಡ್ಡಿಯಾಗದಂತೆ ಸೆಪ್ಟೆಂಬರ್ 28ರಿಂದ ಆರಂಭಿಸಿ ಶೀಘ್ರ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. 2027ರ ಹಾಕಿ ಹಬ್ಬವನ್ನು ಇದೇ ಮೈದಾನದಲ್ಲಿ ಆಯೋಜಿಸುವ ನಿಟ್ಟಿನಲ್ಲಿ ಟರ್ಫ್ ಅಭಿವೃದ್ಧಿಪಡಿಸಲಾಗುತ್ತಿದ್ದು, ಮೈದಾನದ ಪಕ್ಕದಲ್ಲಿ ಶಾಶ್ವತ ಗ್ಯಾಲರಿ ನಿರ್ಮಿಸುವ ಬಗ್ಗೆಯೂ ಚಿಂತನೆ ನಡೆಸಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ರಾಜ್ಯ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಚೆಪ್ಪುಡೀರ ಅರುಣ್ ಮಾಚಯ್ಯ, ಪೊನ್ನಂಪೇಟೆ ಬ್ಲಾಕ್ ಅಧ್ಯಕ್ಷ ಮಿದೇರಿರ ನವೀನ್, ಬ್ಲಾಕ್ ಮಹಿಳಾ ಅಧ್ಯಕ್ಷೆ ಆಶಾ ಪೂಣಚ್ಚ, ಅಜ್ಜಿಕುಟ್ಟಿರ ಹಾಕಿ ನಮ್ಮೆಯ ಅಧ್ಯಕ್ಷ ಅಜ್ಜಿಕುಟ್ಟಿರ ನರೇನ್ ಎಸ್. ಕಾರ್ಯಪ್ಪ, ಒಲಿಂಪಿಯನ್ ಬಾಳೇಯಾಡ ಸುಬ್ರಮಣ್ಯ, ಚೆಪ್ಪುಡೀರ ಪೂಣಚ್ಚ, ಅಜ್ಜಿಕುಟ್ಟಿರ ಕುಟುಂಬದ ಸದಸ್ಯರು, ಹಿರಿಯರಾದ ಮುಕಳೇರ ಕುಶಾಲಪ್ಪ, ವಾಸು ಕುಟ್ಟಪ್ಪ, ಅಧಿಕಾರಿಗಳಾದ ವಿಸ್ಮಯ ಚಕ್ರವರ್ತಿ, ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ಸ್ಥಳೀಯ ಪ್ರಮುಖರು ಉಪಸ್ಥಿತರಿದ್ದರು.







