
ಭಾಗಮಂಡಲ NEWS DESK ಸೆ.16 : : ಶ್ರೀ ಕಾವೇರಿ ತುಲಾ ಸಂಕ್ರಮಣ ಪವಿತ್ರ ತೀರ್ಥೋದ್ಭವ–2026ರ ಜಾತ್ರೆಯ ಪ್ರಯುಕ್ತ ಶ್ರೀ ಭಗಂಡೇಶ್ವರ ಹಾಗೂ ತಲಕಾವೇರಿ ದೇವಾಲಯಗಳಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆ ತಿಳಿಸಿದೆ. ಶ್ರೀ ಭಗಂಡೇಶ್ವರ ದೇವಾಲಯದಲ್ಲಿ ಸೆಪ್ಟೆಂಬರ್ 27ರಂದು ಭಾನುವಾರ ಬೆಳಿಗ್ಗೆ 8.45ಕ್ಕೆ ಸಲ್ಲುವ ತುಲಾ ಲಗ್ನದಲ್ಲಿ ‘ಪತ್ತಾಯಕ್ಕೆ ಅಕ್ಕಿ’ ಹಾಕುವ ಕಾರ್ಯಕ್ರಮ ನಡೆಯಲಿದೆ. ಅಕ್ಟೋಬರ್ 5ರಂದು ಸೋಮವಾರ ಬೆಳಿಗ್ಗೆ 10.35ಕ್ಕೆ ಸಲ್ಲುವ ವೃಶ್ಚಿಕ ಲಗ್ನದಲ್ಲಿ ‘ಆಜ್ಞಾ ಮುಹೂರ್ತ’ ನೆರವೇರಲಿದೆ. ಅಕ್ಟೋಬರ್ 15ರಂದು ಗುರುವಾರ ಮಧ್ಯಾಹ್ನ 12.35ಕ್ಕೆ ಸಲ್ಲುವ ಧನು ಲಗ್ನದಲ್ಲಿ ‘ಅಕ್ಷಯ ಪಾತ್ರೆ’ ಕಾರ್ಯಕ್ರಮ ನಡೆಯಲಿದೆ. ಅದೇ ದಿನ ಸಂಜೆ 6.03ಕ್ಕೆ ಸಲ್ಲುವ ಮೀನ ಲಗ್ನದಲ್ಲಿ ‘ಕಾಣಿಕೆ ಡಬ್ಬಿ’ಗಳನ್ನು ಇಡುವ ಕಾರ್ಯಕ್ರಮ ಜರುಗಲಿದೆ. ಇನ್ನು ಶ್ರೀ ತಲಕಾವೇರಿ ದೇವಾಲಯದಲ್ಲಿ ಅಕ್ಟೋಬರ್ 17ರಂದು ಶನಿವಾರ ರಾತ್ರಿ 7.50ಕ್ಕೆ ಸಲ್ಲುವ ಮೇಷ ಲಗ್ನದಲ್ಲಿ ‘ಶ್ರೀ ಕಾವೇರಿ ತುಲಾ ಸಂಕ್ರಮಣ ಪವಿತ್ರ ತೀರ್ಥೋದ್ಭವ’ ನಡೆಯಲಿದೆ. ಕಾವೇರಿ ತುಲಾ ಸಂಕ್ರಮಣದ ಅಂಗವಾಗಿ ನಡೆಯುವ ಈ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾಗುವಂತೆ ದೇವಾಲಯದ ಆಡಳಿತ ಮಂಡಳಿ ಮನವಿ ಮಾಡಿದೆ.









