
ಮಡಿಕೇರಿ ಸೆ.18 NEWS DESK : ಮತದಾರರ ಪಟ್ಟಿಯನ್ನು ಮತ್ತಷ್ಟು ನಿಖರ ಹಾಗೂ ಪರಿಷ್ಕೃತಗೊಳಿಸುವ ಉದ್ದೇಶದಿಂದ ಜಿಲ್ಲೆಯಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ ಅಭಿಯಾನ 2026 ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಸ್ವೀಪ್ ಅಧ್ಯಕ್ಷರು ಹಾಗೂ ಕೊಡಗು ಜಿಲ್ಲಾ ಪಂಚಾಯತ್ ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆನಂದ್ ಪ್ರಕಾಶ್ ಮೀನಾ ಅವರು ತಿಳಿಸಿದ್ದಾರೆ. ಅಭಿಯಾನದ ಅಂಗವಾಗಿ ಸೆಪ್ಟೆಂಬರ್, 19 ಮತ್ತು 20 ರಂದು ವಿಶೇಷ ಚಟುವಟಿಕೆಗಳನ್ನು ಆಯೋಜಿಸಲಾಗಿದ್ದು, ಜಿಲ್ಲೆಯ ಅರ್ಹ ನಾಗರಿಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಅವರು ತಿಳಿಸಿದ್ದಾರೆ. ಮತದಾರರ ಪಟ್ಟಿಗೆ ಹೊಸದಾಗಿ ಹೆಸರು ಸೇರ್ಪಡೆಗೊಳಿಸಲು ನಮೂನೆ 6, ಅನಿವಾಸಿ ಭಾರತೀಯರ(ಎನ್‍ಆರ್‍ಐ) ಮತದಾರರ ನೋಂದಣಿಗೆ ನಮೂನೆ 6ಎ, ಮತದಾರರ ಪಟ್ಟಿಯಿಂದ ಹೆಸರು ತೆಗೆದುಹಾಕಲು ಅಥವಾ ಆಕ್ಷೇಪಣೆ ಸಲ್ಲಿಸಲು ನಮೂನೆ 7 ಹಾಗೂ ಮತದಾರರ ಪಟ್ಟಿಯಲ್ಲಿನ ವಿವರಗಳ ತಿದ್ದುಪಡಿ, ವಿಳಾಸ ಬದಲಾವಣೆ, ಮತದಾರರ ಗುರುತಿನ ಚೀಟಿ ಸೇರಿದಂತೆ ವಿವಿಧ ಬದಲಾವಣೆಗಳಿಗೆ ನಮೂನೆ 8 ಬಳಸಬಹುದಾಗಿದೆ. ಜೊತೆಗೆ ಅರ್ಹ ಮತದಾರರು ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಇರುವುದನ್ನು ಪರಿಶೀಲಿಸಿಕೊಳ್ಳುವುದರ ಜೊತೆಗೆ, ವಿವರಗಳಲ್ಲಿ ಯಾವುದೇ ವ್ಯತ್ಯಾಸ ಕಂಡುಬಂದಲ್ಲಿ ಅಗತ್ಯ ತಿದ್ದುಪಡಿಗೆ ಅರ್ಜಿ ಸಲ್ಲಿಸುವಂತೆ ತಿಳಿಸಲಾಗಿದೆ. ಮತದಾರರು ವೋಟರ್ ಹೆಲ್ಪ್‍ಲೈನ್ ಆಪ್ ಹಾಗೂ ಚುನಾವಣಾ ಆಯೋಗದ ಅಧಿಕೃತ ವೆಬ್‍ಸೈಟ್ voters.eci.gov.in ಮೂಲಕವೂ ಅಗತ್ಯ ಸೇವೆಗಳನ್ನು ಪಡೆಯಬಹುದಾಗಿದ್ದು, ತಮ್ಮ ವ್ಯಾಪ್ತಿಯ ಬಿಎಲ್‍ಒ, ಎಇಆರ್‍ಒ ಹಾಗೂ ಇಆರ್‍ಒ ಅವರನ್ನು ಸಂಪರ್ಕಿಸಿ ಹೆಚ್ಚಿನ ಮಾಹಿತಿ ಪಡೆದುಕೊಳ್ಳಬಹುದು ಎಂದು ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅವರು ತಿಳಿಸಿದ್ದಾರೆ. ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಅಭಿಯಾನ ಯಶಸ್ವಿಯಾಗಲು ಜಿಲ್ಲೆಯ ಸಾರ್ವಜನಿಕರು ಸಕ್ರಿಯವಾಗಿ ಪಾಲ್ಗೊಂಡು ಸಹಕರಿಸುವಂತೆ ಅವರು ತಿಳಿಸಿದ್ದಾರೆ.









