ವಿರಾಜಪೇಟೆ, NEWS DESK ಸೆ.19: ದಫ್ ಕಲಾ ಒಕ್ಕೂಟ ಕೊಡಗು ವತಿಯಿಂದ ಜಿಲ್ಲಾ ಮಟ್ಟದ ದಫ್ ಸ್ಪರ್ಧೆಯನ್ನು ಅಕ್ಟೋಬರ್ 18ರಂದು ಚೋಕಂಡಳ್ಳಿಯಲ್ಲಿ ನಡೆಸಲು ಸಮಿತಿಯು ತೀರ್ಮಾನಿಸಿದೆ ಎಂದು ದಫ್ ಕಲಾ ಒಕ್ಕೂಟ ಕೊಡಗು ಇದರ ಕಾರ್ಯದರ್ಶಿ ಸಿ.ಹೆಚ್. ರಫೀಕ್ ತಿಳಿಸಿದರು.
ವಿರಾಜಪೇಟೆ ಪತ್ರಕರ್ತರ ವೇದಿಕೆಯಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕಳೆದ ಹಲವು ವರ್ಷಗಳಿಂದ ಕೊಡಗು ಜಿಲ್ಲೆಯ ದಫ್ ಕಲಾ ತಂಡಗಳಿಗೆ ಸೂಕ್ತ ವೇದಿಕೆ ಒದಗಿಸುವ ನಿಟ್ಟಿನಲ್ಲಿ ದಫ್ ಕಲಾ ಒಕ್ಕೂಟ ಕೊಡಗು ವತಿಯಿಂದ ಜಿಲ್ಲಾ ಮಟ್ಟದ ದಫ್ ಸ್ಪರ್ಧೆಯನ್ನು ಆಯೋಜಿಸಿಕೊಂಡು ಬರಲಾಗುತ್ತಿದೆ. ಅದರಂತೆ ಈ ವರ್ಷವೂ ಅಕ್ಟೋಬರ್ 18ರಂದು ಚೋಕಂಡಳ್ಳಿಯಲ್ಲಿ ಜಿಲ್ಲಾ ಮಟ್ಟದ ದಫ್ ಸ್ಪರ್ಧೆ ನಡೆಸಲು ತೀರ್ಮಾನಿಸಲಾಗಿದೆ. ಈ ಬಾರಿ ಸುಮಾರು 30ಕ್ಕೂ ಹೆಚ್ಚಿನ ತಂಡಗಳು ಭಾಗವಹಿಸುವ ನಿರೀಕ್ಷೆಯಿದ್ದು, ಈಗಾಗಲೇ 15 ತಂಡಗಳು ನೋಂದಣಿ ಮಾಡಿಕೊಂಡಿವೆ. ಜಿಲ್ಲೆಯಾದ್ಯಂತ ಇರುವ ದಫ್ ಕಲಾ ತಂಡಗಳು ಸೆಪ್ಟೆಂಬರ್ 25ರೊಳಗಾಗಿ ನೋಂದಣಿ ಮಾಡಿಕೊಂಡು ಸ್ಪರ್ಧೆಯ ಯಶಸ್ಸಿಗೆ ಸಹಕರಿಸಬೇಕೆಂದು ಅವರು ಮನವಿ ಮಾಡಿದರು.
ದಫ್ ಕಲಾ ಒಕ್ಕೂಟ ಕೊಡಗು ಅಧ್ಯಕ್ಷ ಮಜೀದ್ ಚೋಕಂಡಳ್ಳಿ ಮಾತನಾಡಿ, ಜಿಲ್ಲೆಯಾದ್ಯಂತ ಇರುವ ಎಲ್ಲಾ ಮದರಸಾಗಳಿಗೆ ಹಾಗೂ ದಫ್ ಕಲಾ ತಂಡಗಳಿಗೆ ಈ ಸ್ಪರ್ಧೆಗೆ ಸ್ವಾಗತ ಬಯಸುತ್ತೇನೆ. ಒಕ್ಕೂಟದ ವತಿಯಿಂದ ಆಯೋಜಿಸುತ್ತಿರುವ ಜಿಲ್ಲಾ ಮಟ್ಟದ ದಫ್ ಸ್ಪರ್ಧೆಯು ಬೆಳಗ್ಗೆ 8 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ನಡೆಯಲಿದೆ. ಸಮಾರೋಪ ಸಮಾರಂಭದಲ್ಲಿ ಜುಬೇದ್ ತೋಟಿಕಲ್ ಅವರ ಕಥಾ ಪ್ರಸಂಗ ನಡೆಯಲಿದ್ದು, ಕಾರ್ಯಕ್ರಮದಲ್ಲಿ ಪಂಡಿತರು, ಸಾಮಾಜಿಕ ಹಾಗೂ ರಾಜಕೀಯ ಮುಖಂಡರು ಭಾಗವಹಿಸಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದಫ್ ಕಲಾ ಒಕ್ಕೂಟದ ಉಪಾಧ್ಯಕ್ಷ ಶಫೀಕ್ ಗುಂಡಿಕೆರೆ, ಜಿಲ್ಲೆಯ ದಫ್ ಕಲಾವಿದರಿಗೆ ಪ್ರೋತ್ಸಾಹ ನೀಡುವ ಹಾಗೂ ಕಲಾವಿದರಿಗೆ ತಮ್ಮ ಕಲೆಯನ್ನು ಪ್ರದರ್ಶಿಸಲು ಸೂಕ್ತ ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ ಒಕ್ಕೂಟವು ಸತತವಾಗಿ ಈ ಸ್ಪರ್ಧೆಯನ್ನು ಆಯೋಜಿಸುತ್ತಿದೆ. ಸ್ಪರ್ಧೆಯಲ್ಲಿ ಉತ್ತಮ ಪ್ರದರ್ಶನ ನೀಡಿದ ತಂಡಗಳನ್ನು ರಾಜ್ಯ ಮಟ್ಟದ ಸ್ಪರ್ಧೆಗೆ ಆಯ್ಕೆ ಮಾಡಲಾಗುತ್ತದೆ. ಸ್ಪರ್ಧೆಯ ಕುರಿತು ಹೆಚ್ಚಿನ ಮಾಹಿತಿಗಾಗಿ ಹಾಗೂ ನೋಂದಣಿಗಾಗಿ 9972068760, 8123173789 ಸಂಖ್ಯೆಗೆ ಸಂಪರ್ಕಿಸಬಹುದು ಎಂದರು.
ಸುದ್ದಿಗೋಷ್ಠಿಯಲ್ಲಿ ಕೊಡಗು ಜಿಲ್ಲಾ ದಫ್ ಒಕ್ಕೂಟದ ಸಹ ಕಾರ್ಯದರ್ಶಿ ಮೈದು ಹಾಜಿ ಗುಂಡಿಕೆರೆ ಹಾಜರಿದ್ದರು.








