ಸೋಮವಾರಪೇಟೆ, NEWS DESK ಸೆ.21: ತಾಲೂಕು ಹಿಂದೂ ಮಲಯಾಳ ಸಮಾಜದ ವತಿಯಿಂದ ಪಟ್ಟಣದ ಜಾನಕಿ ಸಭಾಂಗಣದಲ್ಲಿ ಓಣಂ ಉತ್ಸವ ಹಾಗೂ ಸಂಘದ ದಶಮಾನೋತ್ಸವ ಸಮಾರಂಭ ಭಾನುವಾರ ನಡೆಯಿತು.
ಕಾರ್ಯಕ್ರಮವನ್ನು ಶಾಸಕ ಡಾ. ಮಂತರ್ ಗೌಡ ಉದ್ಘಾಟಿಸಿ ಮಾತನಾಡಿ, ಹಬ್ಬಾಚರಣೆಗಳು ಸಾಮರಸ್ಯದ ಸಂಕೇತವಾಗಿದ್ದು, ಸಾಮೂಹಿಕ ಆಚರಣೆಗಳು ಸಂಭ್ರಮವನ್ನು ಹೆಚ್ಚಿಸುತ್ತವೆ. ಹಿಂದೂ ಮಲಯಾಳ ಸಮಾಜದ ಸಮುದಾಯ ಭವನ ನಿರ್ಮಾಣಕ್ಕೆ ಸರ್ಕಾರದಿಂದ ಅನುದಾನ ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಸಮುದಾಯದ ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಬೇಕು ಎಂದು ಕರೆ ನೀಡಿದ ಅವರು, ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಾದ ಗುರುವಾಯೂರು ಹಾಗೂ ಪರಶಿನಕಡವು ಕ್ಷೇತ್ರಗಳಿಗೆ ಕೊಡಗಿನಿಂದ ಬಸ್ ವ್ಯವಸ್ಥೆ ಕಲ್ಪಿಸಲು ಪ್ರಯತ್ನಿಸಲಾಗುವುದು ಎಂದರು.
ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಎರ್ನಾಕುಲಂ ಶಿವಗಿರಿನಂದ ಮಠದ ಶ್ರೀ ಶಿವಸ್ವರೂಪಾನಂದ ಸ್ವಾಮೀಜಿ ಮಾತನಾಡಿ, ಮಕ್ಕಳಿಗೆ ಮನೆಯಿಂದಲೇ ಉತ್ತಮ ಸಂಸ್ಕಾರ ಕಲಿಸಬೇಕು. ಧಾರ್ಮಿಕತೆಯೊಂದಿಗೆ ಮಕ್ಕಳು ಬೆಳೆಯುವಂತೆ ನೋಡಿಕೊಳ್ಳಬೇಕು ಹಾಗೂ ದುಶ್ಚಟಗಳಿಂದ ದೂರವಿರಿಸಬೇಕು. ಸಮುದಾಯದ ಹೆಣ್ಣುಮಕ್ಕಳ ರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಬೇಕು. ವಿವಾಹ ಸಂದರ್ಭದಲ್ಲಿ ಮತಾಂತರ ಅಥವಾ ಧರ್ಮಾಂತರ ನಡೆಯದಂತೆ ಜಾಗ್ರತೆ ವಹಿಸಬೇಕು ಎಂದು ಸಲಹೆ ನೀಡಿದರು.
“ನಾವು ಎಷ್ಟೇ ಅದ್ದೂರಿಯಾಗಿ ಸಭೆ-ಸಮಾರಂಭಗಳನ್ನು ನಡೆಸಿದರೂ, ಸಂಸ್ಕೃತಿಯ ಕೊಂಡಿ ಕಳಚಿದರೆ ಸಮುದಾಯ ಅಳಿಯುತ್ತದೆ,” ಎಂದು ಅವರು ಸಮುದಾಯ ಬಾಂಧವರಿಗೆ ಎಚ್ಚರಿಕೆ ನೀಡಿದರು.
ಹಿಂದೂ ಮಲಯಾಳ ಸಮಾಜದ ಅಧ್ಯಕ್ಷ ವಿ.ಎಂ. ವಿಜಯ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಕೇರಳ ಕಾಂಞAಗಾಡ್ನ ಗೃಹಸ್ಥಾಶ್ರಮ ಮಠಾಧೀಶರಾದ ಶ್ರೀ ಗಂಗಾಜೀ ನಾಯರ್ ಸ್ವಾಮೀಜಿ, ಮಾಜಿ ಶಾಸಕರಾದ ಎಂ.ಪಿ. ಅಪ್ಪಚ್ಚು ರಂಜನ್, ಕೆ.ಜಿ. ಬೋಪಯ್ಯ, ಹೈಕೋರ್ಟ್ನ ಹಿರಿಯ ವಕೀಲ ಎಚ್.ಎಸ್. ಚಂದ್ರಮೌಳಿ, ರಾಜ್ಯ ಒಕ್ಕಲಿಗರ ಸಂಘದ ಕೊಡಗು ಜಿಲ್ಲಾ ನಿರ್ದೇಶಕ ಹರಪಳ್ಳಿ ರವೀಂದ್ರ, ಚೌಡ್ಲು ವಿಎಸ್ಎಸ್ಎನ್ ಅಧ್ಯಕ್ಷ ಕೆ.ಟಿ. ಪರಮೇಶ್, ಹಿಂದೂ ಮಲಯಾಳ ಸಮಾಜದ ಪ್ರಮುಖರಾದ ಪಿ.ಡಿ. ಪ್ರಕಾಶ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಮಲಯಾಳ ಸಮುದಾಯ ಬಾಂಧವರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಶೈಕ್ಷಣಿಕ ಹಾಗೂ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಸಮಾಜದ ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಆರ್ಥಿಕ ನೆರವು ನೀಡಲಾಯಿತು.
ಸಭಾ ಕಾರ್ಯಕ್ರಮಕ್ಕೂ ಮುನ್ನ ಪಟ್ಟಣದ ಶ್ರೀ ಮುತ್ತಪ್ಪ ದೇವಾಲಯದಿಂದ ಪ್ರಮುಖ ರಸ್ತೆಗಳಲ್ಲಿ ಓಣಾಘೋಷ ಮೆರವಣಿಗೆ ನಡೆಯಿತು. ಪಟ್ಟಣದಲ್ಲಿರುವ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡಲಾಯಿತು. ಕೇರಳದ ಚೆಂಡೆ ವಾದ್ಯ ಹಾಗೂ ಬಲಿ ಚಕ್ರವರ್ತಿಯ ವೇಷಧಾರಿಗಳು ಗಮನ ಸೆಳೆದರು. ಮಲಯಾಳ ಸಮುದಾಯದ ಮಹಿಳೆಯರು ಮತ್ತು ಪುರುಷರು ಸಾಂಪ್ರದಾಯಿಕ ಉಡುಗೆ ತೊಟ್ಟು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.









