
ಮೂರ್ನಾಡು ಸೆ.21 NEWS DESK : ಮೂರ್ನಾಡು ಪಟ್ಟಣದಲ್ಲಿ ವಿವಿಧ ಸಂಘ-ಸಂಸ್ಥೆಗಳ ವತಿಯಿಂದ ಪ್ರತಿಷ್ಠಾಪಿಸಲಾಗಿದ್ದ ಗೌರಿ-ಗಣೇಶೋತ್ಸವದ ಗಣೇಶ ಮೂರ್ತಿಗಳನ್ನು ಏಳು ದಿನಗಳ ಪೂಜಾ ಕೈಂಕರ್ಯಗಳ ಬಳಿಕ ಭಾನುವಾರ ರಾತ್ರಿ ಬಲಮುರಿ ಕಾವೇರಿ ನದಿಯಲ್ಲಿ ಭಕ್ತಿಭಾವದಿಂದ ವಿಸರ್ಜಿಸಲಾಯಿತು. ವೆಂಕಟೇಶ್ವರ ಕಾಲೋನಿಯ ವಿನಾಯಕ ಯುವಕ ಮಂಡಳಿಯ ವತಿಯಿಂದ 35ನೇ ವರ್ಷದ ಗೌರಿ-ಗಣೇಶೋತ್ಸವ, ಗಾಂಧಿನಗರದ ಶ್ರೀರಾಮ ಮಂದಿರ ಸೇವಾ ಸಮಿತಿಯ ವತಿಯಿಂದ 34ನೇ ವರ್ಷದ ಗೌರಿ-ಗಣೇಶೋತ್ಸವ, ವಿಘ್ನೇಶ್ವರ ಸೇವಾ ಸಮಿತಿಯ ವತಿಯಿಂದ ಟಿ-ಜಂಕ್ಷನ್‌ನಲ್ಲಿ 32ನೇ ವರ್ಷದ ಗಣೇಶೋತ್ಸವ, ಗಜೇಂದ್ರ ಯುವಶಕ್ತಿ ಸಂಘದ ವತಿಯಿಂದ 7ನೇ ವರ್ಷದ ಗಣೇಶೋತ್ಸವ, ಅಯ್ಯಪ್ಪ ಗೆಳೆಯರ ಬಳಗ (ಎಂ-ಟೌನ್) ವತಿಯಿಂದ 3ನೇ ವರ್ಷದ ಗಣೇಶೋತ್ಸವ ಹಾಗೂ ಕೋಡಂಬೂರಿನ ವಿಘ್ನೇಶ್ವರ ಗೆಳೆಯರ ಬಳಗದ ವತಿಯಿಂದ 18ನೇ ವರ್ಷದ ಗಣೇಶೋತ್ಸವ ಅಂಗವಾಗಿ ಪ್ರತಿಷ್ಠಾಪಿಸಲಾಗಿದ್ದ ಗಣೇಶ ಮೂರ್ತಿಗಳನ್ನು ಅಲಂಕೃತ ಮಂಟಪಗಳಲ್ಲಿ ಇರಿಸಿ ಮೂರ್ನಾಡಿನ ಮುಖ್ಯ ರಸ್ತೆಗಳಲ್ಲಿ ಮೆರವಣಿಗೆ ನಡೆಸಲಾಯಿತು. ಆರು ವಿದ್ಯುತ್ ಅಲಂಕೃತ ಮಂಟಪಗಳೊಂದಿಗೆ ನಡೆದ ಶೋಭಾಯಾತ್ರೆಯಲ್ಲಿ ಡಿಜೆ ಸೌಂಡ್‌ಗಳ ಸದ್ದುಗದ್ದಲವೂ ಕಂಡುಬಂತು. ಮೂರ್ನಾಡು ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಂದ ಆಗಮಿಸಿದ್ದ ಸಾವಿರಾರು ಭಕ್ತರು, ಮಹಿಳೆಯರು, ಮಕ್ಕಳು ಹಾಗೂ ಸಾರ್ವಜನಿಕರು ಮೆರವಣಿಗೆಯಲ್ಲಿ ಪಾಲ್ಗೊಂಡು ಸಂಭ್ರಮಿಸಿದರು. ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿ ಚಂದ್ರಶೇಖರ್ ಅವರ ನೇತೃತ್ವದಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು. ಬಳಿಕ ಎಲ್ಲ ಗಣೇಶ ಮೂರ್ತಿಗಳನ್ನು ಬಲಮುರಿ ಕಾವೇರಿ ನದಿಯಲ್ಲಿ ವಿಧಿವಿಧಾನಗಳೊಂದಿಗೆ ವಿಸರ್ಜಿಸಲಾಯಿತು.
ವರದಿ: ಟಿ.ಸಿ. ನಾಗರಾಜ್, ಮೂರ್ನಾಡು











