
ಮಡಿಕೇರಿ ಸೆ.22 NEWS DESK : ರಾಷ್ಟ್ರೀಯ ಹೆದ್ದಾರಿ 275 ಆನೆಕಾಡು ಬಳಿ ಇತ್ತೀಚೆಗೆ ಸಂಭವಿಸಿದ ರಸ್ತೆ ಅಪಘಾತ ಸ್ಥಳಕ್ಕೆ ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಅವರು ಮಂಗಳವಾರ ಭೇಟಿ ನೀಡಿ ಪರಿಶೀಲಿಸಿದರು. ಆನೆಕಾಡು ಬಳಿಯ ಹೆದ್ದಾರಿಯಲ್ಲಿ ಪದೇ ಪದೇ ಅಪಘಾತ ಸಂಭವಿಸಿ ಸಾವು ನೋವುಗಳು ಉಂಟಾಗುತ್ತಿದ್ದು, ಇದನ್ನು ತಡೆಯಬೇಕಿದೆ. ಆ ನಿಟ್ಟಿನಲ್ಲಿ ಎಚ್ಚರಿಕೆಯ ಫಲಕಗಳು, ವೇಗ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳುವಂತೆ ಹೆದ್ದಾರಿ ವಿಭಾಗದ ಎಂಜಿಯರ್‍ಗೆ ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಅವರು ತಾಕೀತು ಮಾಡಿದರು. ರಸ್ತೆ ಸುರಕ್ಷತಾ ಮಾರ್ಗಸೂಚಿ ಸಂಬಂಧ ತಾತ್ಕಾಲಿಕವಾಗಿ ಆಗಬೇಕಿರುವ ಕೆಲಸಗಳನ್ನು ತ್ವರಿತವಾಗಿ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಅವರು ನಿರ್ದೇಶನ ನೀಡಿದರು. ಹೆದ್ದಾರಿಯಲ್ಲಿ ರಸ್ತೆ ಉಬ್ಬು ನಿರ್ಮಾಣ, ಜೀಬ್ರಾ ಕ್ರಾಸ್ ಮತ್ತಿತರ ವೇಗ ನಿಯಂತ್ರಕಗಳನ್ನು ಅಳವಡಿಸಬೇಕು. ರಸ್ತೆ ಸುರಕ್ಷಿತ ಸಂಬಂಧ ಹಲವು ಮಾರ್ಗ ಸೂಚಿಗಳನ್ನು ಪಾಲಿಸುವಂತೆ ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಅವರು ಸೂಚಿಸಿದರು. ಹೆದ್ದಾರಿ ವಿಭಾಗದಲ್ಲಿ ಬ್ಲಾಕ್ ಸ್ಪಾಟ್‍ಗಳನ್ನು ಗುರುತಿಸಲಾಗಿದ್ದು, ಈ ಬಗ್ಗೆ ಹೆದ್ದಾರಿ ವಿಭಾಗದ ಎಂಜಿನಿಯರ್‍ಗಳು ಅಗತ್ಯ ರಸ್ತೆ ಸುರಕ್ಷತಾ ಕ್ರಮ ಕೈಗೊಳ್ಳಬೇಕಿದೆ ಎಂದು ಕುಶಾಲನಗರ ಪೊಲೀಸ್ ವೃತ್ತ ನಿರೀಕ್ಷಕರಾದ ಪ್ರದೀಪ್ ಅವರು ಮಾಹಿತಿ ನೀಡಿದರು. ಹೆದ್ದಾರಿ ವಿಭಾಗದ ಎಂಜಿನಿಯರ್ ಸಂಜೀವ್ ನಾಯಕ್, ಲೋಕೋಪಯೋಗಿ ಇಲಾಖೆಯ ಎಂಜಿನಿಯರ್ ಕೆ.ಟಿ.ಪ್ರಭು, ಇತರರು ಈ ಸಂದರ್ಭದಲ್ಲಿ ಇದ್ದರು.










