ವಿರಾಜಪೇಟೆ, NEWS DESK ಸೆ.24: ಸ್ವಯಂ ಸೇವೆಯು ನಿರಂತರವಾಗಿ ನಡೆಯುವ ಪ್ರಕ್ರಿಯೆಯಾಗಿದ್ದು, ವಿದ್ಯಾರ್ಥಿಗಳಿಗೆ ಸಮಾನತೆ, ನೈರ್ಮಲ್ಯ, ನಾಯಕತ್ವ ಗುಣ, ಶಿಸ್ತು ಹಾಗೂ ಸಮಯದ ಸದ್ಬಳಕೆಯಂತಹ ವಿಚಾರಗಳನ್ನು ಕಲಿತು ಜೀವನದಲ್ಲಿ ಅಳವಡಿಸಿಕೊಳ್ಳಲು ಎನ್‌ಎಸ್‌ಎಸ್ ಹಾಗೂ ಯೂತ್ ರೆಡ್ ಕ್ರಾಸ್ ಉತ್ತಮ ವೇದಿಕೆಯಾಗಿದೆ ಎಂದು ಕೊಡಗು ಎಜುಕೇಶನಲ್ ಮತ್ತು ಸೋಶಿಯಲ್ ಟ್ರಸ್ಟ್‌ನ ಕಾರ್ಯದರ್ಶಿ ಮಾರ್ಚಂಡ ಗಣೇಶ್ ಪೊನ್ನಪ್ಪ ಅಭಿಪ್ರಾಯಪಟ್ಟರು.
ವಿರಾಜಪೇಟೆಯ ಕಾವೇರಿ ಪದವಿ ಕಾಲೇಜಿನ ಕೌಸ್ತುಭ ಸಭಾಭವನದಲ್ಲಿ ಬುಧವಾರ ನಡೆದ ಎನ್‌ಎಸ್‌ಎಸ್ ಮತ್ತು ಯೂತ್ ರೆಡ್ ಕ್ರಾಸ್ ಘಟಕದ ಉದ್ಘಾಟನೆ ಹಾಗೂ ಪೌರ ಕಾರ್ಮಿಕರಿಗೆ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ, ನಾಯಕರಿಗೆ ಬ್ಯಾಡ್ಜ್ ವಿತರಿಸಿ ಹಾಗೂ ಸ್ವಯಂಸೇವಕರಿಗೆ ಪ್ರಮಾಣ ವಚನ ಬೋಧಿಸಿ ಅವರು ಮಾತನಾಡಿದರು.
ಎನ್‌ಎಸ್‌ಎಸ್ ಘಟಕವನ್ನು ಮಹಾತ್ಮ ಗಾಂಧೀಜಿಯವರ ನೂರನೇ ಜನ್ಮದಿನದ ಸವಿನೆನಪಿಗಾಗಿ ಆರಂಭಿಸಲಾಗಿದ್ದು, ಇಂದು ಹೆಮ್ಮರವಾಗಿ ಬೆಳೆದು ದೇಶದಾದ್ಯಂತ ಕಾಲೇಜುಗಳಲ್ಲಿ ತನ್ನ ಘಟಕಗಳನ್ನು ಹೊಂದಿದೆ. ‘ನನಗಲ್ಲ, ನಿನಗೆ’ ಎಂಬ ಧ್ಯೇಯವಾಕ್ಯದಂತೆ ಸಮಾಜದಲ್ಲಿ ಸರ್ವರೂ ಸ್ವಾರ್ಥವನ್ನು ತೊರೆದು ಸಮಾನತೆ, ಸೌಹಾರ್ದತೆ ಹಾಗೂ ಪರಸ್ಪರ ಸಹಕಾರದಿಂದ ಒಗ್ಗೂಡಬೇಕು ಎಂದರು.
ಪರಿಸರ ಕಾಳಜಿ ಹಾಗೂ ನೈರ್ಮಲ್ಯವನ್ನು ಜೀವನದಲ್ಲಿ ಅಳವಡಿಸಿಕೊಂಡು, ಇತರರಲ್ಲಿಯೂ ಈ ಕುರಿತು ಅರಿವು ಮೂಡಿಸುವ ಕಾರ್ಯವನ್ನು ಸ್ವಯಂಸೇವಕರು ಮಾಡಬೇಕು. ಸ್ವಯಂ ಸೇವೆ ಕೇವಲ ವಿದ್ಯಾರ್ಥಿ ಜೀವನಕ್ಕೆ ಸೀಮಿತವಾಗದೆ, ಜೀವನದ ಉದ್ದಕ್ಕೂ ಅಳವಡಿಸಿಕೊಳ್ಳಬೇಕು. ಸಮಾಜದ ಏಳಿಗೆಗೆ ಸದಾ ಸಿದ್ಧರಾಗಿ ಮಾನಸಿಕ ಹಾಗೂ ದೈಹಿಕ ಸ್ವಾಸ್ಥ್ಯ ಹೊಂದಿರುವ ಸಮಾಜ ನಿರ್ಮಾಣಕ್ಕೆ ಕೊಡುಗೆ ನೀಡಬೇಕು ಎಂದು ಕರೆ ನೀಡಿದರು.
ಕಾಲೇಜಿನ ಪ್ರಾಂಶುಪಾಲರಾದ ಡಾ. ಕೆ.ಜಿ. ವೀಣಾ ಮಾತನಾಡಿ, ಸ್ವಚ್ಛತೆ ಎಂಬುದು ನಮ್ಮ ಮನೆಗಳಿಗೆ ಮಾತ್ರ ಸೀಮಿತವಾಗಿರಬಾರದು. ನಮ್ಮ ಸುತ್ತಲಿನ ಪರಿಸರ ಹಾಗೂ ಸಮಾಜವನ್ನು ಸ್ವಚ್ಛವಾಗಿಡುವ ಕಾರ್ಯವನ್ನು ಸ್ವಯಂಸೇವಕರು ಕೈಗೊಳ್ಳಬೇಕು ಎಂದರು.
ಸಮಾಜದಲ್ಲಿ ನೈರ್ಮಲ್ಯ, ಪೌಷ್ಟಿಕ ಆಹಾರದ ಮಹತ್ವ ಹಾಗೂ ಪರಿಸರ ರಕ್ಷಣೆಯಂತಹ ವಿಚಾರಗಳ ಕುರಿತು ಅರಿವು ಮೂಡಿಸುವ ಜವಾಬ್ದಾರಿ ಎನ್‌ಎಸ್‌ಎಸ್ ಮತ್ತು ಯೂತ್ ರೆಡ್ ಕ್ರಾಸ್ ಘಟಕಗಳ ಮೇಲಿದೆ. ಅದೇ ರೀತಿ ರಕ್ತದಾನ ಮಾಡುವ ಮೂಲಕ ಜೀವ ಉಳಿಸುವ ಕಾರ್ಯದಲ್ಲೂ ವಿದ್ಯಾರ್ಥಿಗಳು ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ವಿರಾಜಪೇಟೆ ಪುರಸಭೆಯ ಹಿರಿಯ ಪೌರ ಕಾರ್ಮಿಕರಾದ ಹೆಚ್.ಎಂ. ಸುಬ್ರಮಣಿ ಹಾಗೂ ಹೆಚ್.ಜಿ. ಶಂಕ್ರಮ್ಮ ಅವರನ್ನು ಕಾಲೇಜಿನ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಐಕ್ಯೂಎಸಿ ಸಂಯೋಜಕ ಎಲ್.ಆರ್. ರಾಘವೇಂದ್ರ, ವಿದ್ಯಾರ್ಥಿ ಕ್ಷೇಮಪಾಲನ ಸಮಿತಿಯ ಮುಖ್ಯಸ್ಥ ಸೋಮಣ್ಣ, ಎನ್‌ಎಸ್‌ಎಸ್ ಸಮಿತಿ ಸದಸ್ಯರಾದ ಪವಿತ್ರ, ಮಾಣಿಕ್ಯ ಹಾಗೂ ಲೋಚನ, ಉಪನ್ಯಾಸಕರಾದ ಅಕ್ಷಿತಾ ನಾಯ್ಕ್ ಮತ್ತು ವನಿತಾ ಸೇರಿದಂತೆ ಎನ್‌ಎಸ್‌ಎಸ್ ಸ್ವಯಂಸೇವಕರು ಉಪಸ್ಥಿತರಿದ್ದರು.







