ವಿರಾಜಪೇಟೆ, NEWS DESK ಸೆ.25: ಅರಣ್ಯದಂಚಿನ ಜನರ ಸಮಸ್ಯೆಗಳಿಗೆ ಶೀಘ್ರವಾಗಿ ಸ್ಪಂದಿಸುವುದು ಹಾಗೂ ಅರಣ್ಯ ಇಲಾಖೆಯ ಸೇವಾ ಕಾರ್ಯಗಳನ್ನು ಮತ್ತಷ್ಟು ಪರಿಣಾಮಕಾರಿಯಾಗಿ ನಿರ್ವಹಿಸುವ ಉದ್ದೇಶದಿಂದ ರಾಜ್ಯ ಸರ್ಕಾರದ ವತಿಯಿಂದ ವಿರಾಜಪೇಟೆ ವಲಯ ಅರಣ್ಯ ಇಲಾಖೆಗೆ ನೂತನ ಮಹೇಂದ್ರ ಬೊಲೆರೋ ವಾಹನವನ್ನು ಒದಗಿಸಲಾಗಿದೆ.
ಕೊಡಗಿಗೆ ಅರಣ್ಯ ಸಚಿವರು ಆಗಮಿಸಿದ್ದ ಸಂದರ್ಭದಲ್ಲಿ ವಿರಾಜಪೇಟೆ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಅವರು ಅರಣ್ಯ ಇಲಾಖೆಗೆ ಉತ್ತಮ ವಾಹನ ಸೌಲಭ್ಯ ಕಲ್ಪಿಸುವಂತೆ ಸಚಿವರಲ್ಲಿ ಮನವಿ ಮಾಡಿದ್ದರು. ಮನವಿಗೆ ಸ್ಪಂದಿಸಿದ ಸರ್ಕಾರ ಈಗಾಗಲೇ ಕ್ಷೇತ್ರದ ಕೆಲವು ಭಾಗಗಳಿಗೆ ವಾಹನ ಸೌಲಭ್ಯ ಒದಗಿಸಿದ್ದು, ಇದೀಗ ಮತ್ತೊಂದು ನೂತನ ವಾಹನವನ್ನು ವಿರಾಜಪೇಟೆ ವಲಯ ಅರಣ್ಯ ಇಲಾಖೆಗೆ ಹಸ್ತಾಂತರಿಸಲಾಗಿದೆ.
ನೂತನ ವಾಹನವನ್ನು ಶಾಸಕ ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಅವರು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಹಸ್ತಾಂತರಿಸಿದರು.
ಈ ಸಂದರ್ಭ ಮಾತನಾಡಿದ ಅವರು, ಜನರ ಸಮಸ್ಯೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ಸರ್ಕಾರ ಹಾಗೂ ಅಧಿಕಾರಿಗಳು ಕೈಜೋಡಿಸಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು. ಅರಣ್ಯ ಇಲಾಖೆಯ ಬೇಡಿಕೆಯಂತೆ ಸರ್ಕಾರ ನೂತನ ವಾಹನವನ್ನು ಒದಗಿಸಿದ್ದು, ಅಧಿಕಾರಿಗಳು ಈ ಸೌಲಭ್ಯವನ್ನು ಸಮರ್ಪಕವಾಗಿ ಬಳಸಿಕೊಂಡು ಜನರ ಸಮಸ್ಯೆಗಳಿಗೆ ಕ್ಷಿಪ್ರವಾಗಿ ಸ್ಪಂದಿಸಬೇಕು. ಸಾರ್ವಜನಿಕರಿಗೆ ಯಾವುದೇ ಅನಾನುಕೂಲವಾಗದಂತೆ ಕಾರ್ಯನಿರ್ವಹಿಸಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ, ಮಾಳೇಟೀರ ಬೋಪಣ್ಣ, ತಾಲೂಕು ಕೆಡಿಪಿ ಸದಸ್ಯ ರಫೀಕ್, ಮಚ್ಚಾರಂಡ ಕಿರಣ್, ಮಹಾದೇವ, ಶಬೀರ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.








