
ಬೆಂಗಳೂರು ಸೆ.26 NEWS DESK : ಕೊಡಗಿನ ನಾಡುಗಳ ಕುರಿತು ಅಧ್ಯಯನ ಕೈಗೊಂಡಿರುವ ಪತ್ರಕರ್ತ ಐತಿಚಂಡ ರಮೇಶ್ ಉತ್ತಪ್ಪ ಅವರು ಮೊದಲ ಹಂತವಾಗಿ ಸಿದ್ಧಪಡಿಸಿರುವ 808 ಪುಟಗಳನ್ನು ಒಳಗೊಂಡಿರುವ ಕಡಿಯತನಾಡಿನ ಸಮಗ್ರ ಅಧ್ಯಯನ ಕೃತಿ ಬೆಂಗಳೂರಿನಲ್ಲಿ ಲೋಕಾರ್ಪಣೆಗೊಳ್ಳಲಿದೆ. ಕಳೆದ ದಶಕದಿಂದ ಅಧ್ಯಯನ ನಡೆಸುತ್ತಿರುವ ರಮೇಶ್ ಉತ್ತಪ್ಪ ಅವರ ಈ ಕೃತಿಯನ್ನು ಬೆಂಗಳೂರಿನ ಕಡಿಯತನಾಡ್ ಕೊಡವ ಕೂಟ ಪ್ರಕಟಿಸುತ್ತಿದೆ. ಅಂದು ಪೂರ್ವಾಹ್ನ 10 ಗಂಟೆಗೆ ಬೆಂಗಳೂರು ಕೊಡವ ಸಮಾಜ ಕ್ಲಬ್ ರೂಫ್ ಗಾರ್ಡನ್‌ನಲ್ಲಿ ಕೂಟದ ಅಧ್ಯಕ್ಷ ಐಚೋಡಿಯಂಡ ಎಂ. ದೇವಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಒತ್ತೋಮೆ ಕೂಟ ಕಾರ್ಯಕ್ರಮದಲ್ಲಿ ಬ್ರಿಗೇಡಿಯರ್ ಚೇನಂಡ ಚೀಯಣ್ಣ (ನಿ), ಬೆಂಗಳೂರು ಕೊಡವ ಸಮಾಜದ ಅಧ್ಯಕ್ಷ, ಚಿರಿಯಪಂಡ ಸುರೇಶ್ ನಂಜಪ್ಪ, ಲೇಖಕ ಐತಿಚಂಡ ರಮೇಶ್ ಉತ್ತಪ್ಪ ಅವರು ಪಾಲ್ಗೊಳ್ಳಲಿದ್ದಾರೆ. ಅಂದು ಬಿಡುಗಡೆಯಾಗಲಿರುವ ಕಡಿಯತನಾಡ್ ಕೃತಿ ಇತಿಹಾಸ, ಸಂಸ್ಕೃತಿ ಹಾಗೂ ಜನಜೀವನದ ಸಮಗ್ರ ಅಧ್ಯಯನವಾಗಿದೆ. ಈ ಕೃತಿಯಲ್ಲಿ ಕಡಿಯತನಾಡಿನ ಮೂಲ, ಇತಿಹಾಸ, ನಾಯಕರು, ತಕ್ಕ ವ್ಯವಸ್ಥೆ, ಬಾವಲಿಪಟ್ಟಿ, ಊರ್ ಮಂದ್, ಕೊಡವರ ಐನ್‌ಮನೆ, ಕೈಮಡ, ದೇವರ ನೆಲೆ, ಜಾನಪದ, ಸಂಗ್ರಹವಾಗದೆ ಉಳಿದಿದ್ದ ಕರಡ ಮಲೆ ತಂಬ್ರಾನ್ ಬಾಳೋಪಾಟ್, ವೀರಪುರುಷರ ವಿವರ, ಕಡಿಯತ ನಾಡಿನ ವೀರ ಸೇನಾನಿಗಳು, ಕಡಿಯತನಾಡಿನ ಕ್ರೀಡಾ ಸಾಧನೆ, ಸಾಹಿತ್ಯ ಸಾಧನೆ ಮುಂತಾದ ಸಮಗ್ರ ವಿಷಯವನ್ನು ಹೊಂದಿದೆ. ಅಂದು ನಡೆಯುವ ಕಾರ್ಯಕ್ರಮದಲ್ಲಿ ಬೆಂಗಳೂರು ಕಡಿಯತನಾಡ್ ಕೊಡವ ಕೂಟದ ಅಧ್ಯಕ್ಷ ಐಚೋಡಿಯಂಡ ಎಂ. ದೇವಪ್ಪ, ಉಪಾಧ್ಯಕ್ಷೆ ಚೊಟ್ಟೆಯಂಡ ಆರತಿ ಅಯ್ಯಮ್ಮ, ಗೌರವ ಕಾರ್ಯದರ್ಶಿ ನಾಯಕಂಡ ಟಿ.ಈರಪ್ಪ, ಜಂಟಿ ಕಾರ್ಯದರ್ಶಿ ಬೊಳ್ಳಂಡ ಎ.ರೋಷನ್, ಖಜಾಂಚಿ ಪಾಲೆಯಂಡ ಎ.ಬಸಪ್ಪ, ಜಂಟಿ ಕಾರ್ಯದರ್ಶಿ ಮೂಡೆರ ಡಿ. ತಮ್ಮಯ್ಯ ಹಾಗೂ ಒತ್ತೋರ್ಮೆ ಕೂಟದ ಸಂಚಾಲಕ ಚೆನಿಯಪಂಡ ಮನು ಮಂದಣ್ಣ ಅವರುಗಳು ಪಾಲ್ಗೊಳ್ಳಲಿದ್ದಾರೆ.









