ನಾಪೋಕ್ಲು, NEWS DESK ಸೆ.27: ಕೊಡಗು ಜಿಲ್ಲೆಯಲ್ಲಿ ಕಳೆದ ಎರಡು ತಿಂಗಳಿನಿಂದ ತೀವ್ರ ಮಳೆ ಕೊರತೆ ಉಂಟಾಗಿರುವ ಹಿನ್ನೆಲೆಯಲ್ಲಿ ಇಡೀ ಜಿಲ್ಲೆಯನ್ನು ತಕ್ಷಣ ಬರಪೀಡಿತ ಪ್ರದೇಶವೆಂದು ಘೋಷಿಸಿ, ಬೆಳೆ ನಷ್ಟ ಅನುಭವಿಸುತ್ತಿರುವ ರೈತರಿಗೆ ಪ್ರತಿ ಹೆಕ್ಟೇರ್‌ಗೆ ₹50 ಸಾವಿರ ಪರಿಹಾರ ನೀಡಬೇಕೆಂದು ಭಾರತೀಯ ಕಾಫಿ ಮಂಡಳಿಯ ಮಾಜಿ ಉಪಾಧ್ಯಕ್ಷ ಡಾ. ಕಾವೇರಪ್ಪ ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತವನ್ನು ಆಗ್ರಹಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಸರ್ಕಾರವು ವಿರಾಜಪೇಟೆ, ಪೊನ್ನಂಪೇಟೆ ಮತ್ತು ಸೋಮವಾರಪೇಟೆ ತಾಲೂಕುಗಳನ್ನು ಬರಪೀಡಿತ ಪ್ರದೇಶಗಳೆಂದು ಘೋಷಿಸಿರುವುದು ಸ್ವಾಗತಾರ್ಹ. ಆದರೆ, ತೀವ್ರ ನೀರಿನ ಅಭಾವ ಎದುರಿಸುತ್ತಿರುವ ಮಡಿಕೇರಿ ಮತ್ತು ಕುಶಾಲನಗರ ತಾಲೂಕುಗಳನ್ನು ಪಟ್ಟಿಯಿಂದ ಕೈಬಿಟ್ಟಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕಳೆದ ಒಂದು ತಿಂಗಳಿಗೂ ಹೆಚ್ಚು ಕಾಲದಿಂದ ಕೊಡಗು ಜಿಲ್ಲೆಯಲ್ಲಿ ನಿರೀಕ್ಷಿತ ಪ್ರಮಾಣದ ಮಳೆಯಾಗದೆ ಪರಿಸ್ಥಿತಿ ಆತಂಕಕಾರಿಯಾಗಿದೆ. ಕುಡಿಯುವ ನೀರಿನ ಬಾವಿಗಳು ಬತ್ತಿಹೋಗುತ್ತಿದ್ದು, ಭತ್ತದ ಗದ್ದೆಗಳು ಬಿರುಕು ಬಿಟ್ಟು ಒಣಗುತ್ತಿವೆ. ಇದೇ ಪರಿಸ್ಥಿತಿ ಮುಂದುವರಿದರೆ ಮುಂಬರುವ ಕಾಫಿ, ಕಾಳುಮೆಣಸು, ಅಡಿಕೆ ಹಾಗೂ ಏಲಕ್ಕಿ ಬೆಳೆಗಳ ಇಳುವರಿಯ ಮೇಲೂ ತೀವ್ರ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ಅವರು ಎಚ್ಚರಿಸಿದ್ದಾರೆ.
ಕೆಆರ್ಎಸ್ ಜಲಾಶಯದಲ್ಲಿ ನೀರಿನ ಮಟ್ಟ ಗಣನೀಯವಾಗಿ ಕುಸಿಯುತ್ತಿರುವುದು ಕೊಡಗಿನಲ್ಲಿ ಮಳೆಯ ಕೊರತೆಯ ಪರಿಸ್ಥಿತಿಗೆ ಸಾಕ್ಷಿಯಾಗಿದೆ. ಆದ್ದರಿಂದ ಸರ್ಕಾರದ ಜನಪ್ರತಿನಿಧಿಗಳು ಹಾಗೂ ಜಿಲ್ಲಾಡಳಿತ ತಕ್ಷಣ ಮಧ್ಯಪ್ರವೇಶಿಸಿ ಇಡೀ ಕೊಡಗು ಜಿಲ್ಲೆಯನ್ನು ಬರಪೀಡಿತ ಪ್ರದೇಶವೆಂದು ಘೋಷಿಸಬೇಕು. ಸಂಕಷ್ಟದಲ್ಲಿರುವ ರೈತರ ನೆರವಿಗೆ ಧಾವಿಸಿ ಪ್ರತಿ ಹೆಕ್ಟೇರ್‌ಗೆ ₹50 ಸಾವಿರ ನಷ್ಟಪರಿಹಾರ ಒದಗಿಸಬೇಕು ಎಂದು ಡಾ. ಕಾವೇರಪ್ಪ ಮನವಿ ಮಾಡಿದ್ದಾರೆ.








