ಮಡಿಕೇರಿ, NEWS DESK ಸೆ. 28: ಕೊಡವ ನ್ಯಾಷನಲ್ ಕೌನ್ಸಿಲ್ (ಸಿಎನ್‌ಸಿ) ವತಿಯಿಂದ ಕೊಡವ ಪ್ರದೇಶದಾದ್ಯಂತ ನಡೆಸುತ್ತಿರುವ ಜನಜಾಗೃತಿ ಕಾರ್ಯಕ್ರಮದ ಅಂಗವಾಗಿ ಅ.1ರಂದು ಗುರುವಾರ ಬೆಳಿಗ್ಗೆ 10.30 ಗಂಟೆಗೆ ಸಿದ್ದಾಪುರದಲ್ಲಿ ಶಾಂತಿಯುತ ಮಾನವ ಸರಪಳಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಿಎನ್‌ಸಿ ಅಧ್ಯಕ್ಷ ಎನ್.ಯು. ನಾಚಪ್ಪ ತಿಳಿಸಿದ್ದಾರೆ.
ಕಾರ್ಯಕ್ರಮದಲ್ಲಿ ಕೊಡವಲ್ಯಾಂಡ್ ಭೌಗೋಳಿಕ-ರಾಜಕೀಯ ಸ್ವಾಯತ್ತತೆ, ಸಂವಿಧಾನದ 244 ಮತ್ತು 371ನೇ ವಿಧಿಗಳು ಹಾಗೂ 5 ಮತ್ತು 6ನೇ ಶೆಡ್ಯೂಲ್‌ಗಳ ಅಡಿಯಲ್ಲಿ ಸ್ವ-ಆಡಳಿತಕ್ಕೆ ಒತ್ತಾಯಿಸಲಾಗುವುದು. ಕೊಡವ ಜನಾಂಗಕ್ಕೆ ವಿಶೇಷ ಸಂವಿಧಾನಬದ್ಧ ಮಾನ್ಯತೆ, ಪವಿತ್ರ ಗನ್-ತೋಕ್ ಆಚರಣೆಗೆ ಸಂವಿಧಾನಾತ್ಮಕ ರಕ್ಷಣೆ ಹಾಗೂ ಕೊಡವರಿಗೆ ಪ್ರತ್ಯೇಕ ಅಮೂರ್ತ ಲೋಕಸಭಾ ಮತ್ತು ವಿಧಾನಸಭಾ ಕ್ಷೇತ್ರಗಳನ್ನು ಕಲ್ಪಿಸುವಂತೆ ಆಗ್ರಹಿಸಲಾಗುವುದು ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೊಡವ ಭಾಷೆಯನ್ನು ಸಂವಿಧಾನದ 8ನೇ ಶೆಡ್ಯೂಲ್‌ಗೆ ಸೇರಿಸಬೇಕು, ಐತಿಹಾಸಿಕವಾಗಿ ಕೊಡವರಿಂದ ವಶಪಡಿಸಿಕೊಂಡ ವಂಶಪಾರಂಪರ್ಯ ಆಸ್ತಿಗಳನ್ನು ಮರಳಿ ನೀಡಬೇಕು, 2027ರ ರಾಷ್ಟ್ರೀಯ ಜನಗಣತಿ ಹಾಗೂ ಜಾತಿ ಗಣತಿಯಲ್ಲಿ ಕೊಡವರನ್ನು ಪ್ರತ್ಯೇಕವಾಗಿ ದಾಖಲಿಸಬೇಕು ಮತ್ತು ಕೊಡವರಿಗಾಗಿ ಪ್ರತ್ಯೇಕ ‘ಕೋಡ್’ ಹಾಗೂ ಕಾಲಮ್ ವ್ಯವಸ್ಥೆ ಮಾಡಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಕುರಿತು ಜನಜಾಗೃತಿ ಮೂಡಿಸಲಾಗುವುದು ಎಂದು ತಿಳಿಸಿದ್ದಾರೆ.
1871-72ರಿಂದ 1941ರವರೆಗಿನ ಜನಗಣತಿಗಳಲ್ಲಿ ಕೊಡವರನ್ನು ಪ್ರತ್ಯೇಕ ಜನಾಂಗೀಯ ಸಮುದಾಯವಾಗಿ ದಾಖಲಿಸಲಾಗಿತ್ತು. 1941ರ ನಂತರ ಕೊಡವರ ಪ್ರತ್ಯೇಕ ಗುರುತನ್ನು ದೊಡ್ಡ ಸಮುದಾಯಗಳೊಂದಿಗೆ ವಿಲೀನಗೊಳಿಸಲಾಯಿತು. 1956ರ ರಾಜ್ಯ ಮರುಸಂಘಟನಾ ಕಾಯ್ದೆಯಡಿ ಕೊಡಗು ‘ಸಿ’ ರಾಜ್ಯವನ್ನು ಕರ್ನಾಟಕಕ್ಕೆ ವಿಲೀನಗೊಳಿಸಿರುವುದು ಐತಿಹಾಸಿಕ ಅನ್ಯಾಯ ಎಂದು ಸಿಎನ್‌ಸಿ ಆರೋಪಿಸಿದೆ.
ಕರ್ನಾಟಕ ಭೂ ಕಂದಾಯ ಕಾಯ್ದೆ ಹಾಗೂ ಭೂ ಸುಧಾರಣಾ ಕಾಯ್ದೆಗಳಿಗೆ ಮಾಡಲಾದ ತಿದ್ದುಪಡಿಗಳಿಂದ ಕೊಡಗಿನಲ್ಲಿ ಭೂ ಪರಿವರ್ತನೆಗೆ ಅವಕಾಶ ಹೆಚ್ಚಾಗಿ, ಹೊರಗಿನ ಬಂಡವಾಳಶಾಹಿಗಳು ದೊಡ್ಡ ಪ್ರಮಾಣದಲ್ಲಿ ಭೂಮಿ ಖರೀದಿಸಿ ಮೆಗಾ ಟೌನ್‌ಶಿಪ್, ರೆಸಾರ್ಟ್ ಹಾಗೂ ಲೇಔಟ್‌ಗಳನ್ನು ನಿರ್ಮಿಸುತ್ತಿದ್ದಾರೆ. ಸಿದ್ದಾಪುರದಲ್ಲಿ ಈ ರೀತಿಯ ಪ್ರಕರಣಗಳು ಕಂಡುಬಂದಿದ್ದು, ಇಂತಹ ಬೆಳವಣಿಗೆಗಳು ಕಾವೇರಿ ನದಿಯ ಮೂಲಗಳು, ಕಾಫಿ ತೋಟಗಳು, ಕೃಷಿ ಪ್ರದೇಶ ಹಾಗೂ ಅರಣ್ಯ ಪ್ರದೇಶಗಳ ಮೇಲೆ ಪರಿಣಾಮ ಬೀರುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಕೊಡವ ಜನಾಂಗ, ಕೊಡವಲ್ಯಾಂಡ್, ಕೊಡವ ಸಂಸ್ಕೃತಿ, ಕೊಡವ ಪರಂಪರೆ ಮತ್ತು ಕೊಡವ ಗುರುತಿನ ರಕ್ಷಣೆಗಾಗಿ ಸರ್ವ ಕೊಡವರು ಜಾಗೃತರಾಗಬೇಕಾದ ಅನಿವಾರ್ಯತೆ ಎದುರಾಗಿದೆ. ಇದೇ ಕಾರಣಕ್ಕೆ ಸಿಎನ್‌ಸಿ ಸಾರ್ವಜನಿಕ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಕೊಡವರು ಸಾಂಪ್ರದಾಯಿಕ ಉಡುಪಿನಲ್ಲಿ ಪಾಲ್ಗೊಳ್ಳುವಂತೆ ಎನ್.ಯು. ನಾಚಪ್ಪ ಮನವಿ ಮಾಡಿದ್ದಾರೆ.







