
ಸುಂಟಿಕೊಪ್ಪ, NEWS DESK ಅ.1: ಮಕ್ಕಳು ಕೇವಲ ವಿದ್ಯಾಭ್ಯಾಸ ಮಾಡುವುದಷ್ಟೇ ಅಲ್ಲದೆ, ಗುರು–ಹಿರಿಯರನ್ನು ಗೌರವಿಸುವ ಮೂಲಕ ಉತ್ತಮ ನಡವಳಿಕೆ ಹಾಗೂ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು ಎಂದು ಜಿಲ್ಲಾ ಶಿಕ್ಷಣ ಇಲಾಖೆಯ ನಿವೃತ್ತ ವಿಷಯ ಪರಿವೀಕ್ಷಕ ಎ.ಎಂ. ರವಿ ಚಂಗಪ್ಪ ಕರೆ ನೀಡಿದರು.
ಗುರುವಾರ 7ನೇ ಹೊಸಕೋಟೆಯ ದೀಪ್ತಿ ಶಾಲೆಯ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಶಾಲಾ ವಿದ್ಯಾರ್ಥಿಗಳ ಅಜ್ಜ–ಅಜ್ಜಿಯರ ದಿನಾಚರಣೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳು ಉತ್ತಮ ನಡವಳಿಕೆಯನ್ನು ರೂಢಿಸಿಕೊಂಡು ಉತ್ತಮ ವ್ಯಕ್ತಿತ್ವದವರಾಗಿ, ಸಮಾಜದ ಜವಾಬ್ದಾರಿಯುತ ನಾಗರಿಕರಾಗಿ ಬಾಳಬೇಕು. ಅಕ್ಟೋಬರ್ 1ರಂದು ವಿಶ್ವ ಹಿರಿಯ ನಾಗರಿಕರ ದಿನವನ್ನು ಆಚರಿಸಲಾಗುತ್ತಿದ್ದು, ಇದರ ಅಂಗವಾಗಿ ಸಂಸ್ಥೆಯಲ್ಲಿ ಹಿರಿಯರ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಿರುವುದು ಶ್ಲಾಘನೀಯ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ 7ನೇ ಹೊಸಕೋಟೆ ಸಂತ ಸೆಬಾಸ್ಟಿಯನ್ ದೇವಾಲಯದ ಧರ್ಮಗುರು ರೇ. ಫಾ. ಅಬ್ರಹಾಂ ಪಟೇಲ್ ಮಾತನಾಡಿ, ವಿಶ್ವ ಹಿರಿಯ ನಾಗರಿಕರ ದಿನಾಚರಣೆಯ ಅಂಗವಾಗಿ ಸಂಸ್ಥೆಯಲ್ಲಿ ಅಜ್ಜ–ಅಜ್ಜಿಯರ ದಿನವನ್ನು ಆಯೋಜಿಸಲಾಗಿದೆ. ಮಕ್ಕಳು ತಮ್ಮ ಪೋಷಕರೊಂದಿಗೆ ಅಜ್ಜ–ಅಜ್ಜಿಯರನ್ನು ಶಾಲೆಗೆ ಕರೆತರುವ ಮೂಲಕ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಿರುವುದು ಸಂತಸದ ವಿಚಾರ ಎಂದರು.
ನಮ್ಮ ಬಾಲ್ಯದಲ್ಲಿ ತಂದೆ–ತಾಯಿಗಿಂತಲೂ ಅಜ್ಜ–ಅಜ್ಜಿಯರು ನಮ್ಮ ಜೀವನದಲ್ಲಿ ಪ್ರಮುಖ ಸ್ಥಾನ ಹೊಂದಿದ್ದರು. ಆದರೆ ಇಂದಿನ ಮೊಬೈಲ್ ಯುಗದಲ್ಲಿ ಮಕ್ಕಳಿಗೆ ಮೊಬೈಲ್ವೇ ಸರ್ವಸ್ವವಾಗಿದ್ದು, ಸಂಬಂಧಗಳ ನಡುವೆ ಅಂತರ ಹೆಚ್ಚುತ್ತಿರುವುದು ವಿಷಾದನೀಯ ಎಂದು ಹೇಳಿದರು.
ಮಕ್ಕಳು ವಿದ್ಯಾಭ್ಯಾಸದ ಜೊತೆಗೆ ಗುರು–ಹಿರಿಯರಿಂದ ಉತ್ತಮ ಮಾನವೀಯ ಮೌಲ್ಯಗಳನ್ನು ಕಲಿತುಕೊಂಡು ಸಮಾಜದ ಆಸ್ತಿಯಾಗಿ ಹೊರಹೊಮ್ಮಬೇಕು ಎಂದು ಕಿವಿಮಾತು ಹೇಳಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ನಿವೃತ್ತ ಪೊಲೀಸ್ ಸಹಾಯಕ ಇನ್ಸ್ಪೆಕ್ಟರ್ ಪಾರ್ಥ ಮಾತನಾಡಿ, ಆಧುನಿಕತೆಯ ಭರಾಟೆಯಲ್ಲಿ ಮಾನವೀಯ ಮೌಲ್ಯಗಳನ್ನು ಕಳೆದುಕೊಳ್ಳುತ್ತಿರುವುದು ವಿಷಾದನೀಯ. ಮಕ್ಕಳು ಮೊಬೈಲ್ ಸೇರಿದಂತೆ ಮಾದಕ ವಸ್ತುಗಳ ದಾಸರಾಗದೆ, ಉತ್ತಮ ಶಿಕ್ಷಣ ಪಡೆದು ದೇಶದ ಸತ್ಪ್ರಜೆಗಳಾಗಿ, ಪೋಷಕರಿಗೆ ಕೀರ್ತಿ ತರುವಂತಾಗಬೇಕು. ಹಿರಿಯರನ್ನು ಗೌರವಿಸುವ ಗುಣವನ್ನು ಬಾಲ್ಯದಿಂದಲೇ ರೂಢಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ವೇದಿಕೆಯಲ್ಲಿ ನಿವೃತ್ತ ಮುಖ್ಯೋಪಾಧ್ಯಾಯಿನಿ ಗೀತಾ ಪಾರ್ಥ ಹಾಗೂ ಸೇಕ್ರೆಡ್ ಹಾರ್ಟ್ ಕಾನ್ವೆಂಟ್ನ ಮದರ್ ಸೂಪೀರಿಯರ್ ಎ.ಜೆ. ಉಷಾ ಮಾತನಾಡಿದರು.
ಸಮಾರಂಭದಲ್ಲಿ ಪಾಲ್ಗೊಂಡಿದ್ದ 100ಕ್ಕೂ ಅಧಿಕ ಅಜ್ಜ–ಅಜ್ಜಿಯರನ್ನು ಸನ್ಮಾನಿಸಿ, ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು. ಶಾಲಾ ಮಕ್ಕಳಿಂದ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರೆದಿದ್ದವರ ಗಮನ ಸೆಳೆದವು.
ಶಾಲಾ ಮಕ್ಕಳು ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭಿಸಿದರು. ಸಿಸ್ಟರ್ ಜಿನ್ಸಿ ನಿರೂಪಿಸಿದರು. ಶಾಲಾ ಮುಖ್ಯೋಪಾಧ್ಯಾಯಿನಿ ಟೆಸಿ ಮ್ಯಾನುಯೆಲ್ ಸ್ವಾಗತಿಸಿದರು. ಸತ್ಯದಾಸ್ ವಂದಿಸಿದರು.
ಈ ಸಂದರ್ಭದಲ್ಲಿ ಶಾಲೆಯ ಸಹ ಶಿಕ್ಷಕರು, ಶಾಲಾಭಿವೃದ್ಧಿ ಸಮಿತಿ ಸದಸ್ಯರು ಹಾಗೂ ಪೋಷಕರು ಉಪಸ್ಥಿತರಿದ್ದರು.









