
ಮಡಿಕೇರಿ ಅ.2 NEWS DESK : ನಗರದ ಗಾಂಧಿ ಮಂಟಪದ ಬಳಿ ನಿರ್ಮಾಣವಾಗುತ್ತಿರುವ ಗಾಂಧಿ ಸ್ಮಾರಕ ಉದ್ಯಾನವನಕ್ಕೆ ಶಾಸಕರ ನಿಧಿಯಿಂದ 20 ಲಕ್ಷ ರೂ. ಬಿಡುಗಡೆ ಮಾಡಲಾಗಿದ್ದು, ಶೀಘ್ರ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ.ಮಂತರ್ ಗೌಡ ಅವರು ತಿಳಿಸಿದ್ದಾರೆ. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ನಗರಸಭೆ, ಶಾಲಾ ಶಿಕ್ಷಣ, ಪದವಿ ಪೂರ್ವ ಶಿಕ್ಷಣ, ಕಾಲೇಜು ಶಿಕ್ಷಣ, ಕನ್ನಡ ಸಾಹಿತ್ಯ ಪರಿಷತ್ತು, ಸರ್ವೋದಯ ಸಮಿತಿ, ಸ್ಕೌಟ್ಸ್ ಮತ್ತು ಗೈಡ್ಸ್ ಹಾಗೂ ಜಾನಪದ ಪರಿಷತ್ತು ಇವರ ಸಹಕಾರದಲ್ಲಿ ನಗರದ ಗಾಂಧಿ ಭವನದಲ್ಲಿ ಶುಕ್ರವಾರ ನಡೆದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ 157 ನೇ ಜನ್ಮ ವರ್ಷಾಚರಣೆ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಅವರ 122 ನೇ ಜನ್ಮ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಕರ್ನಾಟಕ ಸರ್ಕಾರ 100 ದಿನ ಪೂರೈಸಿದ ಹಿನ್ನೆಲೆ ‘ದೃಢ ಕರ್ನಾಟಕದ ಸಂಕಲ್ಪ’ ಶತಕದ ಪಥ ಪ್ರಗತಿಯ ರಥ ಪುಸ್ತಕ ಬಿಡುಗಡೆ ಮಾಡಿ ಶಾಸಕರು ಮಾತನಾಡಿದರು. ಗಾಂಧಿ ಸ್ಮಾರಕ ಉದ್ಯಾನವನ ನಿರ್ಮಾಣಕ್ಕೆ ಸರ್ಕಾರ ಈ ಹಿಂದೆ 50 ಲಕ್ಷ ರೂ. ಬಿಡುಗಡೆ ಮಾಡಿತ್ತು, ಈಗ 20 ಲಕ್ಷ ರೂ. ಬಿಡುಗಡೆ ಮಾಡಲಾಗಿದ್ದು, ಕಾಮಗಾರಿ ಕೈಗೊಂಡು ಪೂರ್ಣಗೊಳಿಸಲಾಗುವುದು ಎಂದು ಶಾಸಕರಾದ ಡಾ.ಮಂತರ್ ಗೌಡ ಅವರು ಹೇಳಿದರು. ಮಹಾತ್ಮ ಗಾಂಧೀಜಿ ಅವರ ಸತ್ಯ, ಅಹಿಂಸೆಯನ್ನು ಇಂದಿನ ದಿನಗಳಲ್ಲಿ ಪಾಲನೆ ಮಾಡಲಾಗುತ್ತಿದೆಯೇ ಎಂಬ ಬಗ್ಗೆ ಪ್ರತಿಯೊಬ್ಬರೂ ಆತ್ಮವಲೋಕನ ಮಾಡಿಕೊಳ್ಳಬೇಕು. ಸಾರ್ವಜನಿಕ ಜೀವನದಲ್ಲಿ ಸತ್ಯ ಹೇಳುವುದು ಕಡಿಮೆಯಾಗಿದೆ. ಆಮಿಷ ನೀಡುವುದು ಹೆಚ್ಚಾಗಿದೆ ಎಂದು ಶಾಸಕರು ನುಡಿದರು. ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಜೈವಾನ್ ಜೈಕಿಸಾನ್ ಹೇಳುವ ಮೂಲಕ ಕೃಷಿ ಮತ್ತು ಸೇನಾ ಕ್ಷೇತ್ರದ ಮಹತ್ವ ಬಗ್ಗೆ ವಿವರಿಸಿದರು. ಸತ್ಯ ಹಾಗೂ ಪ್ರಾಮಾಣಿಕತೆಗೆ ಹೆಚ್ಚಿನ ಒತ್ತು ನೀಡಿದ್ದಾರೆ. ಆದ್ದರಿಂದ ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹದ್ದೂರು ಶಾಸ್ತ್ರಿಯವರಂತೆ ಸ್ವಲ್ಪವನ್ನಾದರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಮಂತರ್ ಗೌಡ ಅವರು ಪ್ರತಿಪಾದಿಸಿದರು. ಮಹಾತ್ಮ ಗಾಂಧೀಜಿಯವರ ಸರ್ವೋದಯ ಮತ್ತು ಸಮನ್ವಯ ತತ್ವಗಳನ್ನು ಅನುಸರಿಸಬೇಕು. ಸಮಾಜದಲ್ಲಿ ಶಾಂತಿ, ನೆಮ್ಮದಿಗೆ ಒತ್ತು ನೀಡಬೇಕು ಎಂದು ಶಾಸಕರು ನುಡಿದರು. ಇತ್ತೀಚಿನ ದಿನಗಳಲ್ಲಿ ಸಮಾದಾನವಿಲ್ಲ. ಒಬ್ಬ ರಾಜಕಾರಣಿ ಎಂಎಲ್ಎ ಆದ ನಂತರ ಮಂತ್ರಿ, ಮುಖ್ಯಮಂತ್ರಿ, ಪ್ರಧಾನ ಮಂತ್ರಿಯಾಗಬೇಕು ಎಂಬ ಆಸೆ ಇರುತ್ತದೆ. ಹಾಗೆಯೇ ಅಧಿಕಾರಿಗಳು ಸಹ ಮುಂಬಡ್ತಿ ಹೊಂದಿ ಉನ್ನತ್ತ ಹುದ್ದೆ ಹೊಂದಬೇಕು ಎಂಬ ಆಸೆ ಇರುತ್ತದೆ. ಆಸೆ ಇರಬೇಕು. ಆದರೆ ದುರಾಸೆ ಒಳ್ಳೆಯದಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಮಹಾತ್ಮ ಗಾಂಧೀಜಿ ಅವರು ಕೊಡಗು ಜಿಲ್ಲೆಗೆ 1934 ರಲ್ಲಿ ಭೇಟಿ ನೀಡಿ ಗುಂಡುಗುತ್ತಿ ಮಂಜುನಾಥಯ್ಯ ಅವರ ಮನೆಯಲ್ಲಿ ವಾಸ್ತವ್ಯ ಹೂಡಿದರು ಎಂದು ಡಾ.ಮಂತರ್ ಗೌಡ ಅವರು ಸ್ಮರಿಸಿದರು. ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾ ಅಧ್ಯಕ್ಷರಾದ ತೀತಿರ ಧರ್ಮಜ ಉತ್ತಪ್ಪ ಅವರು ಮಾತನಾಡಿ ಮಹಾತ್ಮ ಗಾಂಧೀಜಿ ಅವರ ಸತ್ಯ ಮತ್ತು ಅಹಿಂಸೆಯ ತತ್ವಗಳು ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಸರಳತೆ, ಪ್ರಾಮಾಣಿಕತೆ ಮತ್ತು ಆಡಳಿತದ ಆದರ್ಶಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು. ಗಾಂಧೀಜಿಯವರ ಸತ್ಯ ಮತ್ತು ಅಹಿಂಸೆಯ ತತ್ವಗಳನ್ನು ನೆನಪಿಸಿಕೊಂಡ ಅವರು, ‘ಸತ್ಯವೇ ದೇವರು’ ಎಂಬ ಗಾಂಧೀಜಿಯವರ ಸಂದೇಶದ ಮಹತ್ವವನ್ನು ವಿವರಿಸಿದರು. ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಅಧ್ಯಕ್ಷರಾದ ಕೇಶವ ಕಾಮತ್ ಅವರು ಮಾತನಾಡಿ ಮಹಾತ್ಮ ಗಾಂಧೀಜಿ ಅವರು ಸ್ವಾತಂತ್ರ್ಯ ತಂದುಕೊಡುವಲ್ಲಿ ಅಹಿಂಸಾ ಮಾರ್ಗ ಅನುಸರಿಸಿ, ಯುವ ಪೀಳಿಗೆಗೆ ಮಾದರಿಯಾಗಿದ್ದಾರೆ ಎಂದರು.
ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರು 1934ರ ಫೆಬ್ರವರಿ 22 ಮತ್ತು 23ರಂದು ಕೊಡಗಿಗೆ ಭೇಟಿ ನೀಡಿದ್ದು, ಜಿಲ್ಲೆಯ ಇತಿಹಾಸದಲ್ಲಿ ಮಹತ್ವದ ಅಧ್ಯಾಯವಾಗಿ ಉಳಿದಿದೆ. ಹರಿಜನೋದ್ಧಾರಕ್ಕಾಗಿ ನಿಧಿ ಸಂಗ್ರಹ ಹಾಗೂ ಸಾಮಾಜಿಕ ಜಾಗೃತಿ ಮೂಡಿಸುವ ಉದ್ದೇಶದಿಂದ ಕರ್ನಾಟಕ ಪ್ರವಾಸ ಕೈಗೊಂಡಿದ್ದ ಗಾಂಧೀಜಿ ಕೊಡಗಿನ ವಿವಿಧೆಡೆ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ್ದರು ಎಂದು ಸ್ಮರಿಸಿದರು. ಎಫ್ಎಂಸಿ ಕಾಲೇಜು ಪ್ರಾಂಶುಪಾಲರಾದ ಪ್ರೊ.ಮೇ.ಡಾ.ಬಿ.ರಾಘವ ಅವರು ಮಾತನಾಡಿ, ಮಹಾತ್ಮ ಗಾಂಧೀಜಿ ಹಾಗೂ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜನ್ಮದಿನ ಒಂದೇ ದಿನವಾಗಿರುವುದು ಇತಿಹಾಸದ ವಿಶಿಷ್ಟ ಸಂಗತಿಯಾಗಿದ್ದು, ಇಬ್ಬರು ಮಹನೀಯರ ವಿಚಾರಧಾರೆಗಳು ಇಂದಿನ ಪ್ರಜಾಪ್ರಭುತ್ವ, ಸಾರ್ವಜನಿಕ ಆಡಳಿತ, ಶಿಕ್ಷಣ ಹಾಗೂ ರಾಷ್ಟ್ರ ನಿರ್ಮಾಣಕ್ಕೂ ಪ್ರಸ್ತುತವಾಗಿವೆ ಎಂದು ಅಭಿಪ್ರಾಯ ವ್ಯಕಪಡಿಸಿದರು. ಲಾಲ್ ಬಹದ್ದೂರ್ ಶಾಸ್ತ್ರಿಯವರು ಸ್ವತಂತ್ರ ಭಾರತದ ಸಾರ್ವಜನಿಕ ಜೀವನದಲ್ಲಿ ಸರಳತೆ, ಪ್ರಾಮಾಣಿಕತೆ, ಹೊಣೆಗಾರಿಕೆ ಹಾಗೂ ರಾಷ್ಟ್ರ ನಿಷ್ಠೆಯ ಮೌಲ್ಯಗಳನ್ನು ತಮ್ಮ ವ್ಯಕ್ತಿತ್ವದ ಮೂಲಕ ಪ್ರತಿಪಾದಿಸಿದರು ಎಂದು ಹೇಳಿದರು. ಗಾಂಧೀಜಿ ಸ್ವಾತಂತ್ರ್ಯದ ನೈತಿಕ ತತ್ವವನ್ನು ಪ್ರತಿಪಾದಿಸಿದರೆ, ಶಾಸ್ತ್ರಿಯವರು ಸ್ವಾತಂತ್ರ್ಯದ ಆಡಳಿತಾತ್ಮಕ ಮತ್ತು ನಾಗರಿಕ ಜವಾಬ್ದಾರಿಯನ್ನು ನೆನಪಿಸಿದರು. ಗಾಂಧೀಜಿ ರಾಜಕೀಯವನ್ನು ನೈತಿಕತೆಯೊಂದಿಗೆ ಬೆಸೆದರೆ, ಶಾಸ್ತ್ರಿಯವರು ಆಡಳಿತವನ್ನು ಆತ್ಮಸಾಕ್ಷಿ ಮತ್ತು ಸಾರ್ವಜನಿಕ ಹೊಣೆಗಾರಿಕೆಯೊಂದಿಗೆ ಬೆಸೆದರು ಎಂದು ವಿಶ್ಲೇಷಿಸಿದರು. ಸ್ವಾತಂತ್ರ್ಯವೆಂದರೆ ಕೇವಲ ಹಕ್ಕುಗಳ ಸ್ವಾಧೀನವಲ್ಲ. ಅದು ಜವಾಬ್ದಾರಿಗಳ ಸ್ವೀಕಾರವೂ ಹೌದು. ಹಿಂಸಾಚಾರ, ಅಸಹಿಷ್ಣುತೆ ಮತ್ತು ಸಾಮಾಜಿಕ ಅಸಮಾನತೆಗಳಿಂದ ಸಮಾಜ ಎಷ್ಟು ಸ್ವತಂತ್ರವಾಗಿದೆ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ ಎಂದು ಹೇಳಿದರು. ಉತ್ಪಾದನೆ, ಬಳಕೆ, ಶ್ರಮ, ಸ್ವಾವಲಂಬನೆ ಹಾಗೂ ಸಾಮಾಜಿಕ ನ್ಯಾಯದ ನಡುವಿನ ಸಮತೋಲನಕ್ಕೆ ಗಾಂಧೀಜಿ ಒತ್ತು ನೀಡಿದ್ದರು. ಗ್ರಾಮ ಸ್ವರಾಜ್ಯ, ಖಾದಿ, ಗ್ರಾಮೋದ್ಯಮ ಹಾಗೂ ವಿಕೇಂದ್ರೀಕರಣದ ಮೂಲಕ ಸ್ವಾವಲಂಬಿ ಸಮಾಜದ ಪರಿಕಲ್ಪನೆಯನ್ನು ಮುಂದಿಟ್ಟಿದ್ದರು ಎಂದು ಹೇಳಿದರು. ಪರಿಸರ ಸಂರಕ್ಷಣೆಯ ವಿಚಾರದಲ್ಲಿಯೂ ಗಾಂಧೀಜಿಯವರ ಚಿಂತನೆ ಪ್ರಸ್ತುತವಾಗಿದೆ. ಭೂಮಿಯ ಸಂಪನ್ಮೂಲಗಳು ಪ್ರತಿಯೊಬ್ಬರ ಅಗತ್ಯವನ್ನು ಪೂರೈಸಲು ಸಾಕಾಗಬಹುದು. ಆದರೆ ಮನುಷ್ಯನ ಅತಿಯಾದ ದುರಾಸೆಯನ್ನು ಪೂರೈಸಲು ಸಾಧ್ಯವಿಲ್ಲ ಎಂಬ ಸಂದೇಶವನ್ನು ಇಂದಿನ ಪರಿಸರ ಸವಾಲುಗಳ ಹಿನ್ನೆಲೆಯಲ್ಲಿ ಅರ್ಥೈಸಿಕೊಳ್ಳಬೇಕಿದೆ ಎಂದರು. ಲಾಲ್ ಬಹದ್ದೂರ್ ಶಾಸ್ತ್ರಿಯವರನ್ನು ಕೇವಲ ಭಾರತದ ಎರಡನೇ ಪ್ರಧಾನಮಂತ್ರಿಯಾಗಿ ನೋಡುವುದಕ್ಕಿಂತ ಅವರ ನೈತಿಕ ಸಂಯಮ, ಸರಳ ಜೀವನ ಮತ್ತು ಸಾರ್ವಜನಿಕ ಜವಾಬ್ದಾರಿಯ ಕುರಿತ ದೃಢ ನಿಲುವುಗಳ ಹಿನ್ನೆಲೆಯಲ್ಲಿ ಪರಿಗಣಿಸಬೇಕಾಗಿದೆ ಎಂದು ಹೇಳಿದರು. ಕನ್ನಡ ಜಾಗೃತಿ ಸಮಿತಿ ಸದಸ್ಯರಾದ ಬಿ.ಎಸ್.ಲೋಕೇಶ್ ಸಾಗರ್ ಅವರು ಮಾತನಾಡಿ ಮಹಾತ್ಮ ಗಾಂಧೀಜಿಯವರು ಗುಡಿ ಕೈಗಾರಿಕೆ ಅಭಿವೃದ್ಧಿಗೆ ಒತ್ತು ನೀಡಿದ್ದರು. ಗ್ರಾಮೀಣಾಭಿವೃದ್ಧಿ ಮತ್ತು ಗ್ರಾಮ ಸ್ವರಾಜಕ್ಕೆ ಹೆಚ್ಚಿನ ಅವಕಾಶ ಕಲ್ಪಿಸಿದ್ದರು. ಗಾಂಧೀಜಿಯವರ ದೂರದೃಷ್ಟಿ, ಗ್ರಾಮೀಣಾಭಿವೃದ್ಧಿ ಆದಲ್ಲಿ ಇಡೀ ದೇಶ ಅಭಿವೃದ್ಧಿ ಆದಂತೆ ಎಂಬ ಸಂದೇಶ ಸಾರಿದ್ದರು ಎಂದು ಹೇಳಿದರು.
ಸ್ಕೌಟ್ಸ್ ಮತ್ತು ಗೈಡ್ಸ್ ಪ್ರಧಾನ ಆಯುಕ್ತರಾದ ಕೆ.ಟಿ.ಬೇಬಿ ಮ್ಯಾಥ್ಯೂ ಅವರು ಮಾತನಾಡಿ ಮಹಾತ್ಮ ಗಾಂಧೀಜಿಯವರು ನನ್ನ ಜೀವನವೇ ನನ್ನ ಸಂದೇಶ ಎಂದು ಸಾರಿದ್ದಾರೆ. ಗಾಂಧೀಜಿಯವರ ಚಿಂತನೆಗಳು ಸದಾ ಸ್ಮರಣೀಯ. ಅವರ ಆದರ್ಶಗಳು ಎಂದೆಂದಿಗೂ ಪ್ರಸ್ತುತ ಎಂದು ನುಡಿದರು.
ಸರ್ವೋದಯ ಸಮಿತಿ ಅಧ್ಯಕ್ಷರಾದ ಅಂಬೆಕಲ್ಲು ಕುಶಾಲಪ್ಪ ಅವರು ಮಾತನಾಡಿ ಸತ್ಯ, ಅಹಿಂಸೆ, ಸರಳತೆ, ಸೇವೆ ಮತ್ತು ದೇಶ ಭಕ್ತಿಯ ಮೌಲ್ಯಗಳನ್ನು ತಮ್ಮ ಬದುಕಿನ ಮೂಲಕ ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಸಾರಿದ್ದಾರೆ ಎಂದರು. ನಗರಸಭೆ ಅಧ್ಯಕ್ಷರಾದ ಪಿ.ಕಲಾವತಿ, ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ರಾಜೇಶ್ ಯಲ್ಲಪ್ಪ, ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಎನ್.ಬಿಂದುಮಣಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ಅಭಿಷೇಕ್ ವಿ., ಓಂಕಾರೇಶ್ವರ ದೇವಾಲಯ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಚುಮ್ಮಿದೇವಯ್ಯ, ಪದ್ಮಶ್ರೀ ಪ್ರಶಸ್ತಿ ಪುರಸ್ಕøತರಾದ ರಾಣಿ ಮಾಚಯ್ಯ, ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕರಾದ ಮಹೇಶ್, ಸರ್ವೋದಯ ಸಮಿತಿ ಸದಸ್ಯರಾದ ಅಂಬೆಕಲ್ಲು ನವೀನ್, ಮುದ್ದಯ್ಯ, ನಗರಸಭೆ ಸದಸ್ಯರಾದ ಮುದ್ದುರಾಜು ಇತರರು ಇದ್ದರು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಮಹಾತ್ಮ ಗಾಂಧೀಜಿ ವಿಚಾರ ಧಾರೆಗಳ ಕುರಿತು ಪ್ರೌಢಶಾಲೆ, ಪದವಿ ಪೂರ್ವ ಕಾಲೇಜು ಹಾಗೂ ಪದವಿ/ ಸ್ನಾತಕೋತ್ತರ ಪದವಿ ವಿಭಾಗದ ವಿದ್ಯಾರ್ಥಿಗಳಿಗೆ ಏರ್ಪಡಿಸಲಾಗಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಮಾಣ ಪತ್ರವನ್ನು ಶಾಸಕರಾದ ಡಾ.ಮಂತರ್ ಗೌಡ ಅವರು ಸೇರಿದಂತೆ ಗಣ್ಯರು ವಿದ್ಯಾರ್ಥಿಗಳಿಗೆ ವಿತರಿಸಿದರು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ಚಿನ್ನಸ್ವಾಮಿ ಸ್ವಾಗತಿಸಿದರು, ಪವನ್ ಕುಮಾರ್ ನಿರೂಪಿಸಿದರು. ಲಹರಿ ಶಿಕ್ಷಕರ ತಂಡದವರು ವಂದೇ ಮಾತರಂ, ನಾಡಗೀತೆ, ರೈತಗೀತೆ ಹಾಡಿದರು. ಕಲಾವಿದ ಈ.ರಾಜು ಮತ್ತು ತಂಡದವರು ಸರ್ಕಾರದ ಗ್ಯಾರಂಟಿ ಯೋಜನೆಗಳ ಬಗ್ಗೆ ಹಾಡು ಹಾಡಿದರು. ಲೋಕೇಶ್ ಸಾಗರ್ ಮತ್ತು ತಂಡದವರು ಗಾಂಧೀಜಿಯವರಿಗೆ ಪ್ರಿಯವಾದ ರಘುಪತಿ ರಾಘವ ರಾಜಾರಾಮ ಪತಿತ ಪಾವನ ಸೀತಾರಾಮ ಹಾಡು ಹಾಡಿದರು. ಮಣಜೂರು ಮಂಜುನಾಥ್ ವಂದಿಸಿದರು. ಮಹಾತ್ಮ ಗಾಂಧೀಜಿ ಅವರ ಜನ್ಮ ದಿನಾಚರಣೆ ಪ್ರಯುಕ್ತ ನಗರದ ಗಾಂಧಿ ಭವನದ ಆವರಣದಲ್ಲಿ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಎನ್ಸಿಸಿ ಘಟಕ ವಿದ್ಯಾರ್ಥಿಗಳಿಂದ ಗಿಡ ನೆಡುವ ಕಾರ್ಯಕ್ರಮ ನಡೆಯಿತು. ಶಾಸಕರಾದ ಡಾ.ಮಂತರ್ ಗೌಡ ಅವರು ಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.









