
ಮಡಿಕೇರಿ NEWS DESK ಅ.3: ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯ ವತಿಯಿಂದ ಕೊಡವ ಪ್ರದೇಶದಾದ್ಯಂತ ನಡೆಯುತ್ತಿರುವ ಜನಜಾಗೃತಿ ಕಾರ್ಯಕ್ರಮದ ಭಾಗವಾಗಿ ಅಕ್ಟೋಬರ್ 6ರಂದು ಬೆಳಗ್ಗೆ 10.30 ಗಂಟೆಗೆ ಬೇಂಗ್ ನಾಡಿನ ಚೇರಂಬಾಣೆಯಲ್ಲಿ ಶಾಂತಿಯುತ ಮಾನವ ಸರಪಳಿ ಕಾರ್ಯಕ್ರಮ ನಡೆಯಲಿದೆ ಎಂದು ಸಿಎನ್‌ಸಿ ಅಧ್ಯಕ್ಷ ಎನ್.ಯು. ನಾಚಪ್ಪ ತಿಳಿಸಿದ್ದಾರೆ. ಕೊಡವಲ್ಯಾಂಡ್‌ಗೆ ಸಂವಿಧಾನದ 244 ಮತ್ತು 371ನೇ ವಿಧಿ ಹಾಗೂ 5 ಮತ್ತು 6ನೇ ಶೆಡ್ಯೂಲ್ ಅಡಿಯಲ್ಲಿ ಭೌಗೋಳಿಕ-ರಾಜಕೀಯ ಸ್ವಾಯತ್ತತೆ ಕಲ್ಪಿಸಬೇಕು. ಕೊಡವ ಜನಾಂಗಕ್ಕೆ ಆದಿಮಸಂಜಾತ ಸಮುದಾಯವಾಗಿ ವಿಶೇಷ ಸಂವಿಧಾನಬದ್ಧ ಮಾನ್ಯತೆ ನೀಡಬೇಕು, ಕೊಡವರ ಪವಿತ್ರ ಗನ್-ತೋಕ್ ಆಚರಣೆಗೆ ಸಂವಿಧಾನದ 25, 26 ಮತ್ತು 28ನೇ ವಿಧಿಗಳ ಅಡಿಯಲ್ಲಿ ರಕ್ಷಣೆ ನೀಡಬೇಕು ಎಂದು ಕೊಡವ ಜನಜಾಗೃತಿ ಮಾನವ ಸರಪಳಿ ಸಂದರ್ಭ ಆಗ್ರಹಿಸಲಾಗುವುದು ಎಂದು ಅವರು ಪತ್ರಿಕಾ ಪ್ರಕಟಣೆ ನೀಡಿದ್ದಾರೆ. ಕೊಡವ ಜನಾಂಗಕ್ಕೆ ಪ್ರತ್ಯೇಕ ಲೋಕಸಭಾ ಮತ್ತು ವಿಧಾನಸಭಾ ಕ್ಷೇತ್ರ, ಶಾಸ್ತ್ರೀಯ ಕೊಡವ ತಕ್ಕ್ ಭಾಷೆಯನ್ನು ಸಂವಿಧಾನದ 8ನೇ ಶೆಡ್ಯೂಲ್‌ಗೆ ಸೇರ್ಪಡೆ, ಹಾಗೂ ಕೆಲದಿ/ಪಾಲೇರಿ ರಾಜರು ಮತ್ತು ಬ್ರಿಟಿಷರ ಕಾಲದಲ್ಲಿ ವಶಪಡಿಸಿಕೊಂಡ ವಂಶಪಾರಂಪರ್ಯ ಆಸ್ತಿಗಳನ್ನು ಕೊಡವರಿಗೆ ಮರಳಿಸಬೇಕು. 2027ರ ರಾಷ್ಟ್ರೀಯ ಜನಗಣತಿ ಮತ್ತು ಜಾತಿ ಗಣತಿಯಲ್ಲಿ ಕೊಡವರನ್ನು ಪ್ರತ್ಯೇಕವಾಗಿ ದಾಖಲಿಸಿ, ಪ್ರತ್ಯೇಕ ‘ಕೋಡ್’ ಮತ್ತು ಕಾಲಂ ನೀಡಬೇಕು. 1871-72ರಿಂದ 1941ರವರೆಗಿನ ಜನಗಣತಿಗಳಲ್ಲಿ ಕೊಡವರನ್ನು ಪ್ರತ್ಯೇಕ ಜನಾಂಗೀಯ ಸಮುದಾಯವಾಗಿ ದಾಖಲಿಸಲಾಗಿತ್ತು. 1941ರ ನಂತರ ಕೊಡವರ ಗುರುತನ್ನು ದೊಡ್ಡ ಗುಂಪುಗಳೊಂದಿಗೆ ವಿಲೀನಗೊಳಿಸಲಾಯಿತು. 1956ರ ರಾಜ್ಯ ಮರುಸಂಘಟನಾ ಕಾಯ್ದೆಯ ಮೂಲಕ ಕೊಡಗು ಕರ್ನಾಟಕಕ್ಕೆ ವಿಲೀನಗೊಂಡಿರುವುದನ್ನೂ ಸಿಎನ್‌ಸಿ ಐತಿಹಾಸಿಕ ಅನ್ಯಾಯವೆಂದು ಆರೋಪಿಸಿದ್ದಾರೆ. ಕೊಡಗಿನಲ್ಲಿ ಭೂ ಪರಿವರ್ತನೆ, ಹೊರಗಿನ ಬಂಡವಾಳದ ಮೂಲಕ ದೊಡ್ಡ ಪ್ರಮಾಣದ ಭೂ ಖರೀದಿ, ಮೆಗಾ ಟೌನ್‌ಶಿಪ್‌ಗಳು, ಬೃಹತ್ ರೆಸಾರ್ಟ್‌ಗಳು ಮತ್ತು ಲೇಔಟ್‌ಗಳ ನಿರ್ಮಾಣದಿಂದ ಕಾವೇರಿ ನದಿ ಮೂಲಗಳು, ಕಾಫಿ ತೋಟಗಳು, ಕೃಷಿ ಪ್ರದೇಶ ಹಾಗೂ ಅರಣ್ಯ ಪ್ರದೇಶಗಳ ಮೇಲೆ ಪರಿಣಾಮ ಬೀರುತ್ತಿದೆ. ಇಂತಹ ಬೆಳವಣಿಗೆಗಳಿಂದ ಕೊಡಗಿನ ಜನಸಂಖ್ಯೆ, ಭೂ ಬಳಕೆ ಮತ್ತು ಪರಿಸರ ವ್ಯವಸ್ಥೆಯಲ್ಲಿ ಬದಲಾವಣೆ ಉಂಟಾಗುತ್ತಿದೆ. ಇದು ಆತಂಕಕಾರಿಯಾಗಿವುದರಿಂದ ಕೊಡವ ಜನಾಂಗ, ಕೊಡವಲ್ಯಾಂಡ್ ಮತ್ತು ಕೊಡವ ಗುರುತಿನ ರಕ್ಷಣೆಯ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಮಾನವ ಸರಪಳಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಎನ್.ಯು.ನಾಚಪ್ಪ ತಿಳಿಸಿದ್ದಾರೆ.









