ಚೆಟ್ಟಳ್ಳಿ, NEWS DESK ಅ.3: ದಸರಾ ರಜೆಯ ಹಿನ್ನೆಲೆಯಲ್ಲಿ ಮಕ್ಕಳು ಹಾಗೂ ಪೋಷಕರಲ್ಲಿ ಸುರಕ್ಷತೆ ಮತ್ತು ಜಾಗೃತಿ ಮೂಡಿಸುವ ಉದ್ದೇಶದಿಂದ ಅಕ್ಕ ಪಡೆ ಸಿಬ್ಬಂದಿಗಳಾದ ಆಶಾ ಹಾಗೂ ಚಾಂದಿನಿ ಅವರು ವಿವಿಧ ಪ್ರದೇಶಗಳಿಗೆ ತೆರಳಿ ಸಾರ್ವಜನಿಕರು, ಮಕ್ಕಳು ಹಾಗೂ ಪೋಷಕರಿಗೆ ಮಾಹಿತಿ ನೀಡಿದರು.
ಚೆಟ್ಟಳ್ಳಿ, ಚೇರಳ ಶ್ರೀಮಂಗಲ, ಅಯ್ಯತ್ ಮಂಗಲ, ಪೈಸರಿ, ಕೊಯ್ಲಾ ಎಸ್ಟೇಟ್ ಲೈನ್ ಮನೆ, ಸಿದ್ದಾಪುರ, ಗುಹ್ಯ ಗೂಡುಗಡ್ಡೆ, ಸರ್ಕಾರಿ ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜು ಬಿಜಿಎಸ್ ಗುಹ್ಯ ಮತ್ತು ಇಂಜಿಲಗೆರೆ ಸೇರಿದಂತೆ ವಿವಿಧೆಡೆ ಜಾಗೃತಿ ಕಾರ್ಯಕ್ರಮ ನಡೆಸಲಾಯಿತು.
ದಸರಾ ರಜೆಯ ಸಂದರ್ಭದಲ್ಲಿ ಪೋಷಕರು ತಮ್ಮ ಮಕ್ಕಳ ಚಲನ-ವಲನದ ಬಗ್ಗೆ ಹೆಚ್ಚಿನ ನಿಗಾ ವಹಿಸುವಂತೆ ಸಿಬ್ಬಂದಿ ಸಲಹೆ ನೀಡಿದರು. ಮಕ್ಕಳನ್ನು ಅಲ್ಪಾವಧಿಯ ಮೌಲ್ಯ ಶಿಕ್ಷಣ ಕಾರ್ಯಕ್ರಮಗಳಿಗೆ ಕಳುಹಿಸುವಂತೆ ಹಾಗೂ ಅತಿಯಾದ ಮೊಬೈಲ್ ಬಳಕೆಯಿಂದ ಮಕ್ಕಳನ್ನು ದೂರವಿಡುವಂತೆ ಪೋಷಕರಿಗೆ ತಿಳಿಸಿದರು.
ಇದೇ ವೇಳೆ ಕಡ್ಡಾಯ ಶಿಕ್ಷಣ, ಬಾಲ್ಯ ವಿವಾಹ ನಿಷೇಧ, ಪೋಕ್ಸೋ ಕಾಯ್ದೆ ಕುರಿತು ಮಕ್ಕಳಿಗೆ ಹಾಗೂ ಪೋಷಕರಿಗೆ ಮಾಹಿತಿ ನೀಡಲಾಯಿತು. ಅಪರಿಚಿತ ವ್ಯಕ್ತಿಗಳ ಚಟುವಟಿಕೆಗಳ ಬಗ್ಗೆ ಎಚ್ಚರಿಕೆ ವಹಿಸಿ, ಯಾವುದೇ ಅನುಮಾನಾಸ್ಪದ ವಿಚಾರ ಕಂಡುಬಂದಲ್ಲಿ ಸಂಬಂಧಪಟ್ಟ ಇಲಾಖೆಗೆ ಮಾಹಿತಿ ನೀಡುವಂತೆ ಮನವಿ ಮಾಡಲಾಯಿತು.
ಅಪ್ರಾಪ್ತರು ವಾಹನ ಚಾಲನೆ ಮಾಡುವುದರಿಂದ ಉಂಟಾಗಬಹುದಾದ ಅಪಾಯಗಳು ಹಾಗೂ ಕಾನೂನುಬದ್ಧ ಸಮಸ್ಯೆಗಳ ಕುರಿತು ತಿಳಿಸಿ, ಮಕ್ಕಳಿಗೆ ವಾಹನ ಚಲಾಯಿಸಲು ಅವಕಾಶ ನೀಡದಂತೆ ಪೋಷಕರಿಗೆ ಸೂಚಿಸಲಾಯಿತು. ಮಾದಕ ವಸ್ತುಗಳ ಮಾರಾಟ ಅಥವಾ ಬಳಕೆಯ ಕುರಿತು ಮಾಹಿತಿ ದೊರೆತಲ್ಲಿ ಸಂಬಂಧಪಟ್ಟ ಇಲಾಖೆಗೆ ಮಾಹಿತಿ ನೀಡುವಂತೆ ಜಾಗೃತಿ ಮೂಡಿಸಲಾಯಿತು.
ತುರ್ತು ಸಂದರ್ಭಗಳಲ್ಲಿ 112, ಮಹಿಳಾ ಸಹಾಯವಾಣಿ 181, ಮಕ್ಕಳ ಸಹಾಯವಾಣಿ 1098 ಹಾಗೂ ಸೈಬರ್ ಅಪರಾಧ ಸಹಾಯವಾಣಿ 1930 ಸಂಪರ್ಕಿಸುವಂತೆ ಸಿಬ್ಬಂದಿ ತಿಳಿಸಿದರು.








