
ಮಡಿಕೇರಿ NEWS DESK ಅ.4 : ಮಡಿಕೇರಿ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ 2026-27ನೇ ಸಾಲಿನ ರೋಟರೆಕ್ಟ್ ಕ್ಲಬ್ನ ಪದಗ್ರಹಣ ಸಮಾರಂಭ ನಡೆಯಿತು. ವಿದ್ಯಾರ್ಥಿನಿ ಅಶಿತಾ ಅಧ್ಯಕ್ಷೆಯಾಗಿ ಹಾಗೂ ಭೂಮಿಕಾ ಕಾರ್ಯದರ್ಶಿಯಾಗಿ ಅಧಿಕಾರ ಸ್ವೀಕರಿಸಿದರು. ಹಸಿರು ಗಿಡಗಳಿಗೆ ನೀರುಣಿಸುವ ಮೂಲಕ ಸಮಾರಂಭವನ್ನು ಉದ್ಘಾಟಿಸಲಾಯಿತು. ರೋಟರಿ ಮಡಿಕೇರಿ ವುಡ್ಸ್ ಅಧ್ಯಕ್ಷೆ ರೊ. ಪ್ರಮೀಳಾ ಶೆಟ್ಟಿ ಅತಿಥಿಗಳನ್ನು ಸ್ವಾಗತಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ರೋಟರಿ ಜಿಲ್ಲೆ 3181ರ ವಲಯ 6ರ ವಲಯ ಸೇನಾನಿ ಹಾಗೂ ಪದಗ್ರಹಣಾಧಿಕಾರಿ ರೋ.ವಸಂತ್ ಕುಮಾರ್ ಕೆ. ಅವರು ನೂತನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ನಂತರ ಮಾತನಾಡಿದ ಅವರು, “ವಿಶಾಲವಾದ ಮರದಂತಿರುವ ರೋಟರಿ ಸಂಸ್ಥೆಯ ಒಂದು ಸಣ್ಣ ಚಿಗುರೇ ರೋಟರೆಕ್ಟ್ ಕ್ಲಬ್. ವಿದ್ಯಾರ್ಥಿಗಳು ರೋಟರೆಕ್ಟ್ ಕ್ಲಬ್ ಸೇರುವ ಮೂಲಕ ಉತ್ತಮ ನಾಯಕತ್ವದ ಗುಣಗಳನ್ನು ಬೆಳೆಸಿಕೊಂಡು, ಮುಂದಿನ ದಿನಗಳಲ್ಲಿ ರೋಟರಿಯನ್ಗಳಾಗಿ ಗುರುತಿಸಿಕೊಳ್ಳಬೇಕು” ಎಂದು ಕರೆ ನೀಡಿದರು. ಅವಕಾಶಕ್ಕಾಗಿ ಕಾಯದೆ, ತಾವೇ ಅವಕಾಶಗಳನ್ನು ಸೃಷ್ಟಿಸಿಕೊಂಡು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವಂತೆ ರೋಟರೆಕ್ಟರ್ಗಳಿಗೆ ಸಲಹೆ ನೀಡಿದರು. ರೋಟರಿ ವುಡ್ಸ್ನ ಸ್ಥಾಪಕ ಅಧ್ಯಕ್ಷ ರೊ. ಸಂಪತ್ ಕುಮಾರ್ ಅವರು ಮಾತನಾಡಿ, ರೋಟರೆಕ್ಟರ್ಗಳು ಸಣ್ಣ ಸಣ್ಣ ಪ್ರಾಜೆಕ್ಟ್ಗಳನ್ನು ಕೈಗೆತ್ತಿಕೊಳ್ಳುವತ್ತ ಗಮನಹರಿಸಬೇಕು. ಈ ನಿಟ್ಟಿನಲ್ಲಿ ಮಾತೃ ಸಂಸ್ಥೆಯಾದ ರೋಟರಿ ವುಡ್ಸ್ ಎಲ್ಲಾ ರೀತಿಯ ಸಹಕಾರ ನೀಡಲಿದೆ ಎಂದರು. ರೋಟರಿ ವುಡ್ಸ್ನ ನಿಕಟಪೂರ್ವ ಅಧ್ಯಕ್ಷ ರೊ. ಕಿರಣ್ ಕುಂದರ್ ಮಾತನಾಡಿ, ಕಳೆದ ಸಾಲಿನಲ್ಲಷ್ಟೇ ಆರಂಭಗೊಂಡಿರುವ ರೋಟರೆಕ್ಟ್ ಕ್ಲಬ್ ಹೆಚ್ಚಿನ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡು ರೋಟರಿ ಜಿಲ್ಲೆಯಲ್ಲಿ ಅತ್ಯುತ್ತಮ ರೋಟರೆಕ್ಟ್ ಕ್ಲಬ್ ಆಗಿ ಗುರುತಿಸಿಕೊಳ್ಳುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕು ಎಂದು ಕರೆ ನೀಡಿದರು. ರೋಟರೆಕ್ಟ್ ಕುರಿತು ಸವಿಸ್ತಾರವಾಗಿ ತಿಳಿದುಕೊಂಡು ಸೇವಾ ಮನೋಭಾವ ಬೆಳೆಸಿಕೊಳ್ಳುವಂತೆ ಸಲಹೆ ನೀಡಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ರೋಟರಿ ಜಿಲ್ಲೆ 3181ರ ರೋಟರೆಕ್ಟ್ ಜಿಲ್ಲಾ ಪ್ರತಿನಿಧಿ ರೋ. ಶ್ರೀರಕ್ಷಾ ಪ್ರಭಾಕರ್ ಅವರು ಕಾಲೇಜಿನ ರೋಟರೆಕ್ಟ್ ಕ್ಲಬ್ನ ಕಾರ್ಯಕ್ರಮಗಳನ್ನು ಪ್ರಶಂಸಿಸಿ, ರೋಟರೆಕ್ಟ್ ಹಾಗೂ ರೋಟರಿ ಕುರಿತು ಜ್ಞಾನವನ್ನು ಹೆಚ್ಚಿಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು. ತಾನು ರೋಟರೆಕ್ಟರ್ ಆಗಿ ಗುರುತಿಸಿಕೊಳ್ಳಲು ರೋಟರಿ ಕ್ಲಬ್ ಮಡಿಕೇರಿ ವುಡ್ಸ್ ನೀಡಿದ ಮಾರ್ಗದರ್ಶನವೇ ಕಾರಣ ಎಂದು ತಿಳಿಸಿ, ರೋಟರಿ ವುಡ್ಸ್ಗೆ ಕೃತಜ್ಞತೆ ಸಲ್ಲಿಸಿದರು. ಕಾಲೇಜಿನ ಪ್ರಾಂಶುಪಾಲ ಡಾ.ವೇಣುಗೋಪಾಲ್ ಮಾತನಾಡಿ, ರೋಟರಿ ವುಡ್ಸ್ ಸಹಯೋಗದಲ್ಲಿ ಕಾಲೇಜಿನಲ್ಲಿ ರೋಟರೆಕ್ಟ್ ಮೂಲಕ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದ್ದು, ಇದು ಸಂಸ್ಥೆಯ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ರೋಟರೆಕ್ಟ್ ಕ್ಲಬ್ನ ಎಲ್ಲಾ ಕಾರ್ಯಕ್ರಮಗಳಿಗೆ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು. ಕಾರ್ಯಕ್ರಮದಲ್ಲಿ ರೋಟರೆಕ್ಟ್ ಕ್ಲಬ್ನ ಸಮನ್ವಯಾಧಿಕಾರಿ ರೊ.ರಾಖಿ ಪೂವಣ್ಣ, ಅಧ್ಯಾಪಕ ವೃಂದ, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ರೋ.ಶ್ರೀರಕ್ಷಾ ಪ್ರಭಾಕರ್ ಅವರನ್ನು ರೋಟರಿ ವುಡ್ಸ್ ಅಧ್ಯಕ್ಷರು ನೆನಪಿನ ಕಾಣಿಕೆ ನೀಡಿ ಗೌರವಿಸಿದರು. ಇತ್ತೀಚೆಗೆ ‘ಅಧ್ಯಾಪಕ ಭೂಷಣ’ ಪ್ರಶಸ್ತಿ ಪಡೆದ ರೋ.ರಾಖಿ ಪೂವಣ್ಣ ಅವರನ್ನು ರೋಟರಿ ವುಡ್ಸ್ ವತಿಯಿಂದ ಸನ್ಮಾನಿಸಲಾಯಿತು. ರೋಟರಿ ವುಡ್ಸ್ ಕಾರ್ಯದರ್ಶಿ ರೋ. ಸ್ಮಿತಾ ಚೆಂಗಪ್ಪ ವಂದಿಸಿದರು.









