ನಾಪೋಕ್ಲು, NEWS DESK ಅ.05: ಕೊಡಗಿನ ಮೂಲನಿವಾಸಿಗಳ ವಿಶಿಷ್ಟ ಸಂಸ್ಕೃತಿ, ಉಡುಪು, ನೆಲ-ಜಲ, ದೇವರಕಾಡು ಹಾಗೂ ಶ್ರೀ ಇಗ್ಗುತ್ತಪ್ಪ ದೇವರು ನೆಲೆನಿಂತಿರುವ ಪವಿತ್ರ ಮಲ್ಮ ಬೆಟ್ಟವನ್ನು ಸಂರಕ್ಷಿಸುವ ಉದ್ದೇಶದಿಂದ ಅನಿವಾಸಿ ಭಾರತೀಯ ಬಲ್ಯಾಟಂಡ ಕವೇರ ಪೂಣಚ್ಚ ಅವರ ನೇತೃತ್ವದಲ್ಲಿ ‘ಕೊಡಗು ಶಕ್ತಿ ನಡ್ಪು’ ಬೃಹತ್ ಪಾದಯಾತ್ರೆ ಯಶಸ್ವಿಯಾಗಿ ನಡೆಯಿತು.
ಶ್ರೀ ಕ್ಷೇತ್ರ ತಲಕಾವೇರಿಯಲ್ಲಿ ದೇಶ ತಕ್ಕರಾದ ಪರದಂಡ ಪ್ರಿನ್ಸ್ ಅವರ ವಿಶೇಷ ಪ್ರಾರ್ಥನೆ ಹಾಗೂ ತಾಯಿ ಕಾವೇರಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಪಾದಯಾತ್ರೆಗೆ ಚಾಲನೆ ನೀಡಲಾಯಿತು.
ಬಾಗಮಂಡಲ ಹಾಗೂ ಅಯ್ಯಂಗೇರಿ ಮಾರ್ಗವಾಗಿ ಸಾಗಿದ ಪಾದಯಾತ್ರೆಯನ್ನು ಪುಲಿಕೋಟು ಗ್ರಾಮದಲ್ಲಿ ಕರವಂಡ, ಪೆಬ್ಬಟ್ಟಿರ, ಮುಕ್ಕಾಟಿರ ಹಾಗೂ ಮಣವಟ್ಟಿರ ಕುಟುಂಬಸ್ಥರು ಆತ್ಮೀಯವಾಗಿ ಸ್ವಾಗತಿಸಿ ಆತಿಥ್ಯ ನೀಡಿದರು. ಬಳಿಕ ಪಾದಯಾತ್ರೆ ಪೇರೂರು ಶ್ರೀ ಇಗ್ಗುತ್ತಪ್ಪ ದೇವಾಲಯ ತಲುಪಿ ದರ್ಶನ ಹಾಗೂ ವಿಶೇಷ ಪ್ರಾರ್ಥನೆ ಸಲ್ಲಿಸಿತು. ನಂತರ ನೆಲಜಿ ಶ್ರೀ ಇಗ್ಗುತ್ತಪ್ಪ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿ, ಕಾಲ್ನಡಿಗೆಯಲ್ಲಿ ಪಾಡಿ ಶ್ರೀ ಇಗ್ಗುತ್ತಪ್ಪ ದೇವಸ್ಥಾನ ತಲುಪುವ ಮೂಲಕ ಪಾದಯಾತ್ರೆ ಮುಕ್ತಾಯಗೊಂಡಿತು.
ಅರ್ಥಪೂರ್ಣ ಜಾಗೃತಿ ಪ್ರಚಾರ
ಪಾದಯಾತ್ರೆಯುದ್ದಕ್ಕೂ ಚೋಕಿರ ಅನಿತಾ ಹಾಗೂ ಮಾಳೇಟಿರ ಶ್ರೀನಿವಾಸ್ ಅವರು ಕೊಡಗಿನ ಪ್ರಕೃತಿ, ಸಂಸ್ಕೃತಿ, ನೆಲ-ಜಲ ಹಾಗೂ ದೇವರಕಾಡುಗಳ ಸಂರಕ್ಷಣೆಯ ಅಗತ್ಯತೆಯ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು.
ಪಾದಯಾತ್ರೆಯಲ್ಲಿ ಬಾಲ್ಯಾಟಂಡ ಕೌಶಿಕ್ ಕುಟ್ಟಯ್ಯ, ನೆಲಜಿ ಗ್ರಾಮದ ಮಲ್ಮ ಹಿತರಕ್ಷಣಾ ಮುಖ್ಯ ಸಮಿತಿಯ ಮಣವಟ್ಟಿರ ಹರೀಶ್ ಕುಶಾಲಪ್ಪ, ಮಣವಟ್ಟಿರ ಅರುಣ್ ಪಳಂಗಪ್ಪ, ಮಂಡೀರ ಸಚಿನ್, ರಿಪ್ಪನ್, ಕೈಬುಲಿರ ಸಾಬು ಗಣಪತಿ, ದಿನು ಕಾವೇರಪ್ಪ, ಉಮೇಶ್ ಉತ್ತಪ್ಪ, ಮಚ್ಚುರ ರವೀಂದ್ರ, ಚಂಗೇಟಿರ ಕುಶಾಲಪ್ಪ, ಮಾಳೆಯಂಡ ವಿಜು ಅಪ್ಪಚ್ಚ, ಜಗಧ ಈರಪ್ಪ, ಕರವಂಡ ಲವ ನಾಣಯ್ಯ, ಚೀಯಕಪೂವಂಡ ಸುನೀಲ್ ಮಾಚಯ್ಯ, ಬಾಳೆಯಡ ಲವ ಬೆಳ್ಯಪ್ಪ ಸೇರಿದಂತೆ ನೆಲಜಿ, ಬಲ್ಲಮಾವಟಿ ಹಾಗೂ ಪೇರೂರು ಗ್ರಾಮಸ್ಥರು ಸಕ್ರಿಯವಾಗಿ ಪಾಲ್ಗೊಂಡರು.
ಜಬ್ಬೂಮಿ ಚಾರಿಟೇಬಲ್ ಟ್ರಸ್ಟ್, ಕನೆಕ್ಟಿಂಗ್ ಕೊಡವಾಸ್, ವಿರಾಜಪೇಟೆ ಕೊಡವ ಸಮಾಜ, ಪೊನ್ನಂಪೇಟೆ ಕೊಡವ ಸಮಾಜ, ವಿರಾಜಪೇಟೆಯ ಪೊಮ್ಮಕ್ಕಡ ಕೂಟ, ತಿಂಗಕೋರ್ ಮೊಟ್ ತಂಡ, ಚೇರಂಬಾಣಿ ಕೊಡವ ಸಮಾಜ, ನಾಪೋಕ್ಲು ಭಗವತಿ ಸಂಘ ಹಾಗೂ ಆದಿ ಬೈತೂರು ಸಂಘ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ನೂರಾರು ಕೊಡವ ಬಂಧುಗಳು ಪಾದಯಾತ್ರೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ವರದಿ: ದುಗ್ಗಳ ಸದಾನಂದ








