ಬೆಂಗಳೂರು, NEWS DESK ಅ.6: ಮಹರ್ಷಿ ವಾಲ್ಮೀಕಿ ಜಯಂತಿಯ ಸಾರ್ವತ್ರಿಕ ರಜೆ ದಿನಾಂಕವನ್ನು ಕರ್ನಾಟಕ ಸರ್ಕಾರ ಬದಲಾವಣೆ ಮಾಡಿದೆ. ಈ ಹಿಂದೆ 2026ರ ಅಕ್ಟೋಬರ್ 25ರಂದು ರಜೆ ಘೋಷಿಸಲಾಗಿತ್ತು. ಇದೀಗ ಅಕ್ಟೋಬರ್ 26ರ ಸೋಮವಾರದಂದು ವಾಲ್ಮೀಕಿ ಜಯಂತಿ ಆಚರಿಸಲು ಹಾಗೂ ಅಂದು ಸಾರ್ವತ್ರಿಕ ರಜೆ ನೀಡಲು ಸರ್ಕಾರ ಆದೇಶಿಸಿದೆ.
ವಾಲ್ಮೀಕಿ ಜಯಂತಿಯನ್ನು ‘ಶೀಗಿ ಹುಣ್ಣಿಮೆ’ ದಿನದಂದೇ ಆಚರಿಸುವ ಸಂಪ್ರದಾಯವಿದೆ. ಈ ಹಿನ್ನೆಲೆಯಲ್ಲಿ ಅಕ್ಟೋಬರ್ 26ರಂದು ಶೀಗಿ ಹುಣ್ಣಿಮೆ ಇರುವುದರಿಂದ ಅದೇ ದಿನ ವಾಲ್ಮೀಕಿ ಜಯಂತಿ ಆಚರಿಸಲು ಸರ್ಕಾರ ನಿರ್ಧರಿಸಿದೆ.
ಬ್ಯಾಂಕ್‌ಗಳಿಗೂ ರಜೆ
ಅಕ್ಟೋಬರ್ 26ರ ರಜೆ ರಾಜ್ಯದ ಸರ್ಕಾರಿ ಕಚೇರಿಗಳು, ಶಾಲಾ-ಕಾಲೇಜುಗಳಿಗೆ ಮಾತ್ರವಲ್ಲದೆ ಬ್ಯಾಂಕ್‌ಗಳಿಗೂ ಅನ್ವಯವಾಗಲಿದೆ. ನೆಗೋಶಿಯೇಬಲ್ ಇನ್ಸ್‌ಟ್ರುಮೆಂಟ್ ಆಕ್ಟ್, 1881ರ ಸೆಕ್ಷನ್ 25ರ ಅಡಿಯಲ್ಲಿ ಈ ರಜೆಯನ್ನು ಘೋಷಿಸಲಾಗಿದೆ.
ಈ ಕುರಿತು ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ರವಿಕುಮಾರ್ ಎಸ್. ಅವರು ಅಧಿಕೃತ ಆದೇಶ ಹೊರಡಿಸಿದ್ದಾರೆ.
ಸತತ 3 ದಿನ ರಜೆ
ರಜೆ ದಿನಾಂಕ ಬದಲಾವಣೆಯಿಂದ ಸಾರ್ವಜನಿಕರು ಹಾಗೂ ಸರ್ಕಾರಿ ನೌಕರರಿಗೆ ಸತತ ಮೂರು ದಿನಗಳ ರಜೆ ದೊರೆಯಲಿದೆ.
- ಅಕ್ಟೋಬರ್ 24, ಶನಿವಾರ: ನಾಲ್ಕನೇ ಶನಿವಾರದ ರಜೆ
- ಅಕ್ಟೋಬರ್ 25, ಭಾನುವಾರ: ವಾರದ ರಜೆ
- ಅಕ್ಟೋಬರ್ 26, ಸೋಮವಾರ: ವಾಲ್ಮೀಕಿ ಜಯಂತಿ ಸಾರ್ವತ್ರಿಕ ರಜೆ
ಹೀಗಾಗಿ ಅಕ್ಟೋಬರ್ 24ರಿಂದ 26ರವರೆಗೆ ಮೂರು ದಿನಗಳ ಲಾಂಗ್ ವೀಕೆಂಡ್ ಸಿಗಲಿದ್ದು, ಸಾರ್ವಜನಿಕರು ಹಾಗೂ ಸರ್ಕಾರಿ ನೌಕರರು ಇದರ ಪ್ರಯೋಜನ ಪಡೆಯಬಹುದಾಗಿದೆ.







